ರೈತರ ಶ್ರಮ ಮತ್ತು ಸಮರ್ಪಣೆಯನ್ನು ಗೌರವಿಸುವುದು ಸಮಾಜದ ಕರ್ತವ್ಯ. ಕೃಷಿ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಬೇಕು.

ಗದಗ: ರೈತರು ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಬೆನ್ನೆಲುಬಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸುರೇಶ ನಾಡಗೌಡರ ತಿಳಿಸಿದರು.

ಮಂಗಳವಾರ ತಾಲೂಕಿನ ನಾಗಾವಿಯಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರ ಶ್ರಮ ಮತ್ತು ಸಮರ್ಪಣೆಯನ್ನು ಗೌರವಿಸುವುದು ಸಮಾಜದ ಕರ್ತವ್ಯ. ಕೃಷಿ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಬೇಕು ಎಂದರು.

ತೋಟಗಾರಿಕಾ ಇಲಾಖೆಯ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಭಾವಗೆ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ವೈ. ಹೊನ್ನಿನಾಯ್ಕರ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ನಾವೀನ್ಯತೆ, ಮೌಲ್ಯವರ್ಧನೆ, ಪಶುಸಂಗೋಪನೆ ಹಾಗೂ ಸಮಗ್ರ ಕೃಷಿ ಪದ್ಧತಿಯ ಅಗತ್ಯತೆ ಕುರಿತು ವಿವರಿಸಿ, ರೈತರು ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆದಾಯ ವೃದ್ಧಿಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಗಲಕೋಟೆಯ ಡಾ. ಬಿ.ಆರ್. ಅಥಣಿ, ಡಾ. ಬಸವರಾಜ ನಾವಿ, ಕೊಪ್ಪಳ ಜಿಲ್ಲೆಯ ರೈತ ಡಾ. ಬಸಯ್ಯ ಹಿರೇಮಠ ಅವರು ಸತತ ಕೃಷಿ, ಹವಾಮಾನ ಬದಲಾವಣೆಯ ಸವಾಲುಗಳು, ಜೈವಿಕ ಕೃಷಿ ಹಾಗೂ ರೈತರ ಜೀವನಮಟ್ಟ ಸುಧಾರಣೆ ಕುರಿತು ತಮ್ಮ ಅನುಭವಾಧಾರಿತ ವಿಚಾರಗಳನ್ನು ಹಂಚಿಕೊಂಡರು. ರೈತಸ್ನೇಹಿ ನೀತಿಗಳು, ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ಮೂಲಕ ಗ್ರಾಮೀಣ ಅಭಿವೃದ್ಧಿ ಸಾಧಿಸುವ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ರೇಷ್ಮೆ ವಿಸ್ತರಣಾ ಅಧಿಕಾರಿ ಪವಿತ್ರ ವಗ್ಗನ್ನವರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರಶಾಂತ್ ಜಿ.ಸಿ., ತೋಟಗಾರಿಕಾ ಅಧಿಕಾರಿ ಡಾ.ಉಡಚಪ್ಪ ಪೂಜಾರ, ಡಾ. ಲಿಂಗರಾಜ ನಿಡುವಣಿ, ಖುಷಿ ಆಸಮ್ಮದ, ಆನಂದಗೌಡ ಪಕೀರಗೌಡರ, ಗ್ರಂಥಪಾಲಕರು ಇದ್ದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ರವಣ ಬೇವೂರ್ ನಿರೂಪಿಸಿದರು.