ಕುಷ್ಟಗಿ: ದೇಶಕ್ಕೆ ಅನ್ನ ನೀಡುವ ಅನ್ನದಾತ ಹಾಗೂ ದೇಶದ ಗಡಿ ಕಾಯುವ ಸೈನಿಕ ಸಂಕಷ್ಟದಲ್ಲಿದ್ದಾಗ ಅವರ ಬೆಂಬಲಕ್ಕೆ ನಿಲ್ಲುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ರೈತರು ಮತ್ತು ಸೈನಿಕರ ತ್ಯಾಗ ಗೌರವಿಸಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಸಮಾಜ ಸೇವಕ ರವಿಕುಮಾರಸ್ವಾಮಿ ಹಿರೇಮಠ ಹೇಳಿದರು.

ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘ, ಕುಷ್ಟಗಿ ಘಟಕದ ಸಹಯೋಗದಲ್ಲಿ ನಡೆದ 46ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನರಗುಂದದಲ್ಲಿ ಹುತಾತ್ಮರಾದ ರೈತರು ತಮ್ಮ ಸ್ವಾರ್ಥಕ್ಕಾಗಿ ಅಲ್ಲ, ರೈತರ ಹಕ್ಕುಗಳಿಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಸ್ಮರಿಸಿ, ರೈತರ ಹಕ್ಕುಗಳ ರಕ್ಷಣೆಗೆ ಸಮಾಜ ಬದ್ಧವಾಗಬೇಕು ಎಂದು ಹೇಳಿದರು.

ಈ ವರ್ಷ ಮಳೆ ಕೊರತೆಯಿಂದ ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕುಷ್ಟಗಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಗೋಶಾಲೆ ತೆರೆಯಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಸರ್ಕಾರ ಶೀಘ್ರ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ರೈತ ಮುಖಂಡ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ರೈತ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರೈತನ ಮಕ್ಕಳಿಗೆ ವಿವಾಹಕ್ಕೆ ಕನ್ಯೆ ಸಿಗದಂತಹ ದುಃಸ್ಥಿತಿ ನಿರ್ಮಾಣವಾಗಿದೆ. ರೈತರು ಒಗ್ಗಟ್ಟಾಗಿ ಹೋರಾಟ ಮಾಡದಿದ್ದರೆ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ರೈತರ ಮತ ಪಡೆದು ನಂತರ ಅವರ ಸಮಸ್ಯೆಗಳ ಬಗ್ಗೆ ಮೌನ ವಹಿಸುತ್ತಾರೆ. ಇದು ರೈತ ಸಮುದಾಯಕ್ಕೆ ಆಗುತ್ತಿರುವ ದೊಡ್ಡ ಅನ್ಯಾಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘದ ರಾಜ್ಯಾಧ್ಯಕ್ಷ ದೊಡ್ಡಬರಮಣ್ಣ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ದೋಟಿಹಾಳ, ಸಿ.ಕೆ. ಪಾಟೀಲ್, ನೀಲಪ್ಪ ಕಡಿಯವರ, ಪಂಪಣ್ಣ ನಾಯಕ, ಹಣಮೇಶ ಶಾಖಾಪುರ, ಹೊನ್ನಪ್ಪ ತಳವಾರ, ಮಹಾಂತಯ್ಯ ಅರಳೆಲಿಮಠ, ಮಹಾಂತೇಶ್ ಪಾಟೀಲ್, ದೇವಣ್ಣ ಸೊಬಣದ, ಶರಣಪ್ಪ ಮೇಗೂರು, ಶಿವಶರಣಗೌಡ ಪಾಟೀಲ, ಸಂಘಟನೆಯ ಪ್ರಮುಖರಾದ ಶರೀಫ್ ಸಾಬ್ ಕುಷ್ಟಗಿ, ನಾಗರಾಜ ಲೈನದ, ಮುತ್ತು ಪಾಟೀಲ್, ಮಾರುತಿ ಜರಗಡ್ಡಿ, ಹನುಮಗೌಡ ಹಿರೇಮನಿ, ಹುಚ್ಚೇಶ ವೈಜಾಪುರ, ಕಳಕಪ್ಪ ಹಡಪದ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.