ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದೇಶದ ವಿಭಿನ್ನ ಜಾತಿ, ಮತ, ಪಂಗಡ ಹಾಗೂ ಸಂಸ್ಕೃತಿ ಪ್ರತಿನಿಧಿಸುವ ಏಕೈಕ ಸಾಧನ ಅದುವೇ ನಮ್ಮ ರಾಷ್ಟ್ರ ಧ್ವಜ. ಅದಕ್ಕೆ ಅವಮಾನಿಸುವುದು ಅಪರಾಧ ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಲೇಜಾವ್ ಚಳವಳಿ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲ ಭಾರತೀಯರು. ಎಲ್ಲ ಜನ ಹಾಗೂ ಸಮುದಾಯಗಳನ್ನು ಒಂದೇ ನೆರಳಿನಡಿಯಲ್ಲಿ ಸೇರಿಸುವ ಏಕೈಕ ಧ್ವಜವೇ ನಮ್ಮ ರಾಷ್ಟ್ರೀಯ ತಿರಂಗಾ. ನಾವು ನಮ್ಮ ತಿರಂಗಾ ಧ್ವಜ ಗೌರವಿಸಬೇಕು. ರಾಷ್ಟ್ರಧ್ವಜ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿದೆ. ಅದಕ್ಕೆ ಅವಹೇಳನ ರಾಷ್ಟ್ರದ್ರೋಹವಾಗುತ್ತದೆ ಎಂದು ತಿಳಿಸಿದರು.ರಾಷ್ಟ್ರದ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ಧವಾಗಿರುವ ನಾವು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ. ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ೧೯೪೭ ಜುಲೈ ೨೨ ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ಧ್ವಜವನ್ನು ದೇಶಕ್ಕೆ ಅರ್ಪಿಸಿದರು. ನಮ್ಮ ಪವಿತ್ರ ಭಾರತಾಂಬೆಯ ಕಿರ್ತಿಮುಗಿಲೆತ್ತರಕ್ಕೆ ಏರಲಿ. ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸಬೇಕು ಎಂದರು.ನಾವು ಧ್ವಜಾರೋಹಣ, ಧ್ವಜ ಅವರೋಹಣ, ಧ್ವಜ ನೀತಿಸಂಹಿತೆ ಹಾಗೂ ನಿಯಮಗಳ ಎಲ್ಲರೂ ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.ಪ್ರಾಚಾರ್ಯ ರುಕ್ಕಸಾನ ಎಂ.ಐ ಮಾತನಾಡಿ, ಇಂದಿನ ಯುವಕರಲ್ಲಿ, ನಾಗರಿಕರಲ್ಲಿ ರಾಷ್ಟ್ರಾಭಿಮಾನ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಭಾರತ ಸೇವಾದಳ ಸಂಸ್ಥೆಯವರು ನಡೆಸಿಕೊಡುವ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ಕಾರ್ಯಾಗಾರ ತುಂಬಾ ಉಪಯುಕ್ತವಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಶಾಲಾ, ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಉಪನ್ಯಾಸಕ ಎಚ್.ಬಿ.ಪೂಜಾರಿ, ಎಸ್.ಎಸ್.ನ್ಯಾಮಗೌಡ ಸೇರಿದಂತೆ ಕಾಲೇಜು ಸಿಬ್ಬಂದಿ ಸೇವಾದಳದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.