2019ರ ನೇತ್ರಾವತಿ, ಮೃತ್ಯುಂಜಯ ನದಿ ಭೀಕರ ಪ್ರವಾಹಕ್ಕೆ ಇಂದಿಗೆ 5 ವರ್ಷ

| Published : Aug 09 2024, 12:54 AM IST

2019ರ ನೇತ್ರಾವತಿ, ಮೃತ್ಯುಂಜಯ ನದಿ ಭೀಕರ ಪ್ರವಾಹಕ್ಕೆ ಇಂದಿಗೆ 5 ವರ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಬೆಳ್ತಂಗಡಿಗೆ ಬಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ನಿರಾಶ್ರಿತರಿಗೆ ಮನೆ ಕಟ್ಟಿಕೊಡಲು ತಲಾ 5 ಲಕ್ಷ ರುಪಾಯಿ ಅನುದಾನವನ್ನುಒದಗಿಸಿದ್ದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ 2019 ಆಗಸ್ಟ್‌ 9 ನೇತ್ರಾವತಿ ನದಿ ತೀರದ ಜನರಿಗೆ ಮರೆಯಲಾರದ ದಿನ. ಅಂದು ಮಧ್ಯಾಹ್ನ ಸಂಭವಿಸಿದ ಭೀಕರ ಪ್ರವಾಹಕ್ಕೆ ಇಂದಿಗೆ ಐದು ವರ್ಷ. ಅಂದು ವರಮಹಾಲಕ್ಷ್ಮೀ ಪೂಜೆಯ ದಿನವಾಗಿತ್ತು. ಸಂಜೆಯೊಳಗೆ ಭೀಕರ ಪ್ರವಾಹ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳಲ್ಲಿ ಬಂದಿದ್ದು, ನದಿ ತೀರದ ವಾಸಿಗಳ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ ಮುಂಡಾಜೆ, ಕಲ್ಮಂಜ ಮೊದಲಾದ ಗ್ರಾಮಗಳು ಪ್ರವಾಹದ ನೀರಿಗೆ ತತ್ತರಿಸಿ ಹೋಗಿದ್ದವು. ನೂರಾರು ಮನೆಗಳು ಜಲಾವೃತವಾಗಿ ಹಲವು ಮನೆಗಳು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ದಿಡುಪೆ ಸಂಪರ್ಕದ ಕುಕ್ಕಾವು ಸೇತುವೆ, ಚಾರ್ಮಾಡಿ ಫರ್ಲಾಣಿ ಸೇತುವೆ, ಅರಣಪಾದೆ ಕಿರು ಸೇತುವೆ, ಮಿತ್ತಬಾಗಿಲು ಗ್ರಾಮದ ಕೊಪ್ಪದ ಗಂಡಿ ಸೇತುವೆ, ಚಿಬಿದ್ರೆ ಸೇತುವೆ ಸೇರಿದಂತೆ ಹಲವಾರು ಸೇತುವೆಗಳು ಕೊಚ್ಚಿ ಹೋಗಿ ಸಾವಿರಾರು ಜನರು ಸಂಪರ್ಕ ಕಳೆದುಕೊಂಡಿದ್ದರು. ಗುಡ್ಡಗಳು ಕುಸಿದು ಮಣ್ಣು, ಮರಳು, ಮರಗಳು ನದಿಯಲ್ಲಿ ತೇಲಿ ಬಂದು ಕಿಂಡಿ ಅಣೆಕಟ್ಟು ನಾಶವಾಗಿದ್ದವು. ಕಿಂಡಿ ಅಣೆಕಟ್ಟು, ತೋಟಗಳಲ್ಲಿ ರಾಶಿ ರಾಶಿ ಮರಗಳು ಜಮೆಯಾಗಿದ್ದವು. ನದಿಗಳು ನೀರಿನ ರಭಸ ತಾಳಲಾರದೆ ಕೆಲವೆಡೆ ತಮ್ಮ ದಿಕ್ಕನ್ನೇ ಬದಲಿಸಿ ಹರಿದಿದ್ದವು. ಜನರು ನೋಡುತ್ತಿದ್ದಂತೆಯೇ ಮನೆಗಳು ಜಲಾವೃತಗೊಂಡಿದ್ದವು. ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ನದಿಗಳು ತೋಟಗಳನ್ನು ಆವರಿಸಿದ ವೇಳೆ ಸಾಕಷ್ಟು ಮರಳು ತುಂಬಿ ಕೃಷಿಭೂಮಿ ಬರಡು ಭೂಮಿಯಂತಾಗಿತ್ತು. ಚಾರ್ಮಾಡಿಯ ಕೊಳಂಬೆ ಪ್ರದೇಶದಲ್ಲಿ ಹಲವು ಅಡಿ ಮರಳು ಗದ್ದೆ, ತೋಟಗಳನ್ನು ತುಂಬಿ ಕೃಷಿ ನಾಶವಾಗಿತ್ತು.

ಯಥಾಸ್ಥಿತಿಗೆ ಮರಳಲು ಹಲವು ಸಂಘ ಸಂಸ್ಥೆಗಳ ಸಾಥ್‌: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ತಕ್ಷಣ ವಿಶೇಷ ಮುತುವರ್ಜಿ ವಹಿಸಿ ಸಂಪರ್ಕ ಸೇತುವೆಗಳ ನಿರ್ಮಾಣ, ರಸ್ತೆ ದುರಸ್ತಿ, ಅಗತ್ಯ ಮೂಲಸೌಕರ್ಯ ಒದಗಿಸಿಕೊಟ್ಟರು. ಕಾಳಜಿ ಕೇಂದ್ರಗಳನ್ನು ತೆರೆದು ಪೀಡಿತರಿಗೆ ಭರವಸೆ ತುಂಬಲಾಯಿತು. ಸೇವಾಭಾರತಿ ತಂಡದವರು ಎಂದಿನಂತೆ ಮೌನವಾಗಿ ಸಹಾಯ ಹಸ್ತ ಚಾಚಿದರು. ತಾಲೂಕಿನ ಬದುಕು ಕಟ್ಟೋಣ ತಂಡ ಮೊದಲಾದ ಸಂಸ್ಥೆಯಗಳು, ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಇಲ್ಲಿನ ಜನರ ಬದುಕನ್ನು ಮರಳಿ ಕಟ್ಟಿಕೊಡಲು ಕೈಜೋಡಿಸಿದರು. ನಿರಾಶ್ರಿತರಾದವರಿಗೆ ಆಡಳಿತವು ಆಶ್ರಯ ನೀಡುವ ಕೆಲಸ ಮಾಡಿತ್ತು.

ಪ್ರವಾಹಕ್ಕೆ ನಲುಗಿ ಹೋಗಿದ್ದ ಚಾರ್ಮಾಡಿಯ ಕೊಳಂಬೆ ಪರಿಸರವನ್ನು ‘ಬದುಕು ಕಟ್ಟೋಣ ಬನ್ನಿ’ ತಂಡ ದತ್ತು ಸ್ವೀಕರಿಸಿ ಇಲ್ಲಿನ ಕೃಷಿ ಭೂಮಿಗಳ ಮನೆ ಕಳೆದುಕೊಂಡವರಿಗೆ ಸಹಾಯಹಸ್ತ ಚಾಚಿದ ಕಾರಣ ಅಲ್ಲಿನ ಜನರು ನೆಮ್ಮದಿ ಕಾಣುವಂತಾಯಿತು.ಬಳಿಕದ ಮಳೆಗಾಲದಲ್ಲಿ ಈ ನದಿಗಳ ನೀರಿನ ಮಟ್ಟ ಅಪಾಯಕಾರಿ ಹಂತ ತಲುಪಿರಲಿಲ್ಲ. ಈ ವರ್ಷ ಜುಲೈ ತಿಂಗಳಲ್ಲಿ ಮತ್ತೆ ನದಿಗಳ ತೀರದಲ್ಲಿ ಪ್ರವಾಹದ ಸ್ಥಿತಿ ಕಂಡುಬಂದಿದೆ. ಆದರೆ 2019 ರಷ್ಟು ಪ್ರವಾಹ ಕಂಡು ಬರದ ಕಾರಣ ಹೆಚ್ಚಿನ ಹಾನಿ ಉಂಟಾಗಿಲ್ಲ. 2019ರ ಪ್ರವಾಹದ ಬಳಿಕ ಇಲ್ಲಿನ ನದಿಗಳಲ್ಲಿ ನೀರಿನ ಮಟ್ಟ ಕೊಂಚ ಹೆಚ್ಚಾದರೂ ನದಿ ತೀರದ ಜನತೆ ಹಾಗೂ ಕೃಷಿಕರು ತಕ್ಷಣ ಆತಂಕಕ್ಕೆ ಒಳಗಾಗುತ್ತಾರೆ. 2019 ರ ಪ್ರವಾಹ ಜನರಲ್ಲಿ ಅಂತಹ ಭೀತಿ ಹುಟ್ಟಿಸಿದ್ದು ಇದಕ್ಕೆ ಕಾರಣ.

ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಬೆಳ್ತಂಗಡಿಗೆ ಬಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ನಿರಾಶ್ರಿತರಿಗೆ ಮನೆ ಕಟ್ಟಿಕೊಡಲು ತಲಾ 5 ಲಕ್ಷ ರುಪಾಯಿ ಅನುದಾನವನ್ನುಒದಗಿಸಿದ್ದರು.