ನಗರದ ಹಿರೇಮಠದಲ್ಲಿ ಸಾಮೂಹಿಕವಾಗಿ 16 ಸೋಮವಾರ ವ್ರತ ಆಚರಿಸಿದ ತಾಯಿಯರನ್ನು ಶ್ರೀಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಅಧಿಕ ಜೇಷ್ಠ ಅಮಾವಾಸ್ಯೆಯ ವಿಶೇಷ ದಿನವಾದ ಸೋಮವಾರ ನಡೆದ ಉದ್ಯಾಪನಾ ಸಮಾರಂಭದಲ್ಲಿ ಅಭಿನಂದಿಸಿ, ವಸ್ತ್ರ, ಬಾಗಿನ ನೀಡಿ ಆಶೀರ್ವದಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ನಗರದ ಹಿರೇಮಠದಲ್ಲಿ ಸಾಮೂಹಿಕವಾಗಿ 16 ಸೋಮವಾರ ವ್ರತ ಆಚರಿಸಿದ ತಾಯಿಯರನ್ನು ಶ್ರೀಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಅಧಿಕ ಜೇಷ್ಠ ಅಮಾವಾಸ್ಯೆಯ ವಿಶೇಷ ದಿನವಾದ ಸೋಮವಾರ ನಡೆದ ಉದ್ಯಾಪನಾ ಸಮಾರಂಭದಲ್ಲಿ ಅಭಿನಂದಿಸಿ, ವಸ್ತ್ರ, ಬಾಗಿನ ನೀಡಿ ಆಶೀರ್ವದಿಸಿದರು.

ಈ ವೇಳೆ ಮಾತನಾಡಿದ ಸ್ವಾಮೀಜಿ, ಕಳೆದ 30 ವರ್ಷಗಳಿಂದ ಹಿರೇಮಠದಲ್ಲಿ ಪ್ರತಿ ಅಮಾವಾಸ್ಯೆಯಂದು ಧರ್ಮಗೋಷ್ಠಿ, ಉಪನ್ಯಾಸ, ದಾಸೋಹ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇಂದಿನ ವಿಶೇಷವಾಗಿ 16 ಸೋಮವಾರ ವ್ರತ ಆಚರಿಸಿದ 22 ತಾಯಂದಿರನ್ನು ಆಶೀರ್ವದಿಸಲಾಗಿದೆ. ಸಾಮಾನ್ಯವಾಗಿ ಇಂತಹ ವೃತಗಳನ್ನು ತಾಯಂದಿರು ಮನೆಯಲ್ಲಿ ಆಚರಿಸುತ್ತಾರೆ. ಮಠದಲ್ಲಿ ಸಾಮೂಹಿಕ ಆಚರಣೆಯ ಉಪಕ್ರಮಕ್ಕೆ ಹಿರೇಮಠ ನಾಂದಿಯಾಗಿದೆ. ಹೆಣ್ಣುಮಕ್ಕಳಿಗೆ ಮೊದಲು ವೇದ ಕಲಿಸಿದ ದಾಖಲೆಯೂ ಹಿರೇಮಠದ್ದಾಗಿದೆ ಎಂದರು.

ಹಿರೇಮಠದ ಮಾರ್ಗದರ್ಶನದಲ್ಲಿ ತಾಯಂದಿರು ಮಣ್ಣಿನಲ್ಲಿ ಲಿಂಗು ತಯಾರಿಸಿ, ಅಲಂಕರಿಸಿ, ಅಭಿಷೇಕ, ವಿಶೇಷ ಪೂಜೆ ಮಾಡಿದರು. ಹಿಂದೆ ರಾಜಮಹಾರಾಜರು ಇಂತಹ ವೃತಗಳನ್ನು ಆಚರಿಸುತ್ತಿದ್ದರು. 16 ಸೋಮವಾರಗಳ ಪೂಜೆಯ ನಂತರ ಈ ತಿಂಗಳ 18ರಂದು ಕಾವೇರಿ ನದಿಯಲ್ಲಿ ಲಿಂಗುಗಳ ವಿಸರ್ಜನೆ ಮಾಡಿ ವ್ರತ ಪೂರ್ಣಗೊಳಿಸುತ್ತಾರೆ ಎಂದು ಸ್ವಾಮೀಜಿ ತಿಳಿಸಿದರು.

ಇದೇ ವೇಳೆ 46 ವರ್ಷದ ದಾಂಪತ್ಯ ಬದುಕು ನಡೆಸಿದ ಚಂದ್ರಶೇಖರ್ ದಂಪತಿ ಹಾಗೂ 53 ವರ್ಷಗಳ ಆದರ್ಶ ದಾಂಪತ್ಯ ಜೀವನ ಪೂರ್ಣಗೊಳಿಸಿದ ಬಸವರಾಜಪ್ಪ ದಂಪತಿಯನ್ನು ಸ್ವಾಮೀಜಿ ಸನ್ಮಾನಿಸಿದರು. ವಿವಾಹ ನಿಶ್ಚಯವಾಗಿರುವ ಅಂಧ ಗಾಯಕಿ ಜಲಜಾ ಜೈನ್ ಅವನ್ನು ಈ ಸಂದರ್ಭದಲ್ಲಿ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಕಾಣಿಕೆ ನೀಡಿ ಆಶೀರ್ವಾದ ಮಾಡಿದರು.

ಧರ್ಮ, ಶಾಂತಿ ಬೋಧನೆಗೆ ವಿದೇಶ ಪ್ರವಾಸ:

ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಈ ತಿಂಗಳ 18ರಂದು ಅಮೇರಿಕಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರವಾಸ ಕೈಗೊಳ್ಳಲಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ಅಲ್ಲಿನ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಲ್ಲಿನ ಭಕ್ತರು ಆಯೋಜಿಸಿರುವ ವಿವಿಧ ಧಾರ್ಮಿಕ, ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲಿದ್ದಾರೆ.

ಅಮೆರಿಕಾದ ಬಾಲಾಜಿ ಮಠ, ದೇವಸ್ಥಾನ ಸಮಿತಿಯ 14ನೇ ವರ್ಷಿಕೋತ್ಸವ ಸಮಾರಂಭದಲ್ಲಿ ಸ್ವಾಮೀಜಿ ಭಾಗವಹಿಸುವರು. ಅಲ್ಲದೆ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧರ್ಮ, ಶಾಂತಿ ಬೋಧನೆ ಮಾಡಿ, ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಅಲ್ಲಿನ ನಿವಾಸಿಗಳನ್ನು ಪ್ರಶಂಸಿಸುವುದು ತಮ್ಮ ಪ್ರವಾಸದ ಉದ್ದೇಶ ಎಂದು ಸ್ವಾಮೀಜಿ ಹೇಳಿದರು.