ಸಾರಾಂಶ
ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಶಿರಹಟ್ಟಿ ತಾಲೂಕು ಆಡಳಿತ ವತಿಯಿಂದ ಅಭಿನಂದಿಸಲಾಯಿತು. ಪ್ರತಿ ಹಂತದಲ್ಲಿ ಅಧಿಕಾರಿಗಳ ಸೂಚನೆಯಂತೆ ಸಮಯ ಹಾಗೂ ಕರ್ತವ್ಯಪ್ರಜ್ಞೆ ತೋರಿದ ನೀವೆಲ್ಲರೂ ಅಭಿನಂದನಾರ್ಹರು ಎಂದು ಸಹಾಯಕ ಚುನಾವಣಾ ಅಧಿಕಾರಿ ಅಮಿತ್ ಬಿದರಿ ಹೇಳಿದರು.
ಶಿರಹಟ್ಟಿ: ಚುನಾವಣೆ ಆಯೋಗದ ನಿರ್ದೇಶನದಂತೆ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ಹಾಗೂ ಸಿಬ್ಬಂದಿ ಕಾರ್ಯಸಾಧನೆ ಶ್ಲಾಘನೀಯವಾದದ್ದು. ಚುನಾವಣಾ ಕಾರ್ಯ ನ್ಯಾಯಸಮ್ಮತ ಹಾಗೂ ಸುಸೂತ್ರವಾಗಿ ನಡೆಯಲು ಸಹಕಾರ ಅನನ್ಯವಾದದ್ದು ಎಂದು ಸಹಾಯಕ ಚುನಾವಣಾ ಅಧಿಕಾರಿ ಅಮಿತ್ ಬಿದರಿ ಹೇಳಿದರು.
ಶುಕ್ರವಾರ ಪಟ್ಟಣದ ದೇವರಾಜ ಅರಸು ಭವನದಲ್ಲಿ ಶಿರಹಟ್ಟಿ ತಾಲೂಕು ಆಡಳಿತ, ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸತತ ಮೂರು ತಿಂಗಳ ಕಾಲ ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣೆ ಫಲಿತಾಂಶದ ವರೆಗೂ ಪ್ರತಿ ಹಂತದಲ್ಲಿ ಅಧಿಕಾರಿಗಳ ಸೂಚನೆಯಂತೆ ಸಮಯ ಹಾಗೂ ಕರ್ತವ್ಯಪ್ರಜ್ಞೆ ತೋರಿದ ನೀವೆಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.ತಹಸೀಲ್ದಾರ್ ಅನಿಲ ಬಡಿಗೇರ ಮಾತನಾಡಿ, ಸರ್ಕಾರಿ ಸಿಬ್ಬಂದಿ ಸಾರ್ವತ್ರಿಕ ಚುನಾವಣೆ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಸಂದರ್ಭಗಳನ್ನು ಬಹಳ ಎಚ್ಚರಿಕೆ ಹಾಗೂ ಬಹಳ ಸೂಕ್ಷ್ಮತೆಯಿಂದ ನಿಭಾಯಿಸಬೇಕು. ಅಂತಹ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಿ ಜನಮನ್ನಣೆ ಗಳಿಸಬೇಕಾದ ಅನಿವಾರ್ಯತೆ ಸರ್ಕಾರಿ ಸಿಬ್ಬಂದಿಯದ್ದಾಗಿದೆ ಎಂದು ಹೇಳಿದರು.
ಚುನಾವಣಾ ಸಮಯದಲ್ಲಿ ಶಾಲೆಯ ಕಟ್ಟಡ ಹಾಗೂ ಅಗತ್ಯ ಸಹಾಯ ಸಹಕಾರ ಒದಗಿಸಿದ ಸಿಸಿಎನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಲಕ್ಷ್ಮೇಶ್ವರ ತಹಸೀಲ್ದಾರ್ ವಾಸುದೇವ ಸ್ವಾಮಿ, ಉಪನ್ಯಾಸಕ ಗಿರಿತಮ್ಮಣ್ಣವರ, ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹಾಂತೇಶ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು. ಎಫ್.ಎಂ ಡಬಾಲಿ ಪದವಿಪೂರ್ವ ಕಾಲೇಜು ದೈಹಿಕ ಶಿಕ್ಷಕ ಎಂ.ಕೆ. ಲಮಾಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.