ಸಾರಾಂಶ
ಶಿರಸಿ: ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಮಂಗಳವಾರ ನಗರದ ಅಕ್ಷಯ ಗಾರ್ಡನ್‌ನಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.ನಾವೆಲ್ಲರೂ ಏಳುವ ಮುನ್ನ ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರನ್ನು ಗೌರವಯುತವಾಗಿ ನೋಡಬೇಕು. ತಮ್ಮ ಆರೋಗ್ಯದ ಜತೆ ಬೆಳಗ್ಗೆ ಎದ್ದು ನಗರದ ಸ್ವಚ್ಛತೆ ಕಾಪಾಡುತ್ತಿರುವುದಕ್ಕೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು. ಪೌರಕಾರ್ಮಿಕರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ದಿನಗೂಲಿ ಪೌರಕಾರ್ಮಿಕರನ್ನು ಕಾಯಂ ಮಾಡಿ ಆರ್ಥಿಕ ಭದ್ರತೆ ನೀಡಿದೆ ಎಂದರು.ನಗರಸಭೆಯಲ್ಲಿಯೇ ಪ್ರತಿದಿನವೂ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವ ವ್ಯವಸ್ಥೆಯಾಗಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು ಜತೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಸಮಸ್ಯೆ ಇದ್ದರೆ ನನ್ನ ಬಳಿ ಬನ್ನಿ. ಖಂಡಿತ ಸಹಾಯ ಮಾಡುತ್ತೇನೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿದರು. ಪೌರಾಯುಕ್ತ ಕಾಂತರಾಜು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಾದ ಲಕ್ಷ್ಮೀ ಹರಿಜನ, ಮಹಾದೇವಿ ಹರಿಜನ, ದೀಪಕ ನಾಡಗೌಡ್ರು, ಪುನೀತ ಹರಿಜನ, ನಾಗರಾಜ ಹರಿಜನ, ಜಗದೀಶ ಕೋಟೆಶ್ವರ, ರಾಘು ಜಾಡಮಾಲಿ, ನಂದನ ಕಾನಡೆ, ಸುದೇಶ ಪಡ್ತಿ, ರಾಜೇಂದ್ರ ಮಂಗಳಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ ಪ್ರತಿ ಪೌರಕಾರ್ಮಿಕರಿಗೆ ₹೭ ಸಾವಿರ ವಿಶೇಷ ಭತ್ಯೆಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಮಾಕಾಂತ ಭಟ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಸದಸ್ಯರಾದ ಪ್ರದೀಪ ಶೆಟ್ಟಿ, ಮಧುಕರ ಬಿಲ್ಲವ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೇಶವಮೂರ್ತಿ ಇಮ್ಮಡಿ, ಆರೋಗ್ಯ ನಿರೀಕ್ಷಕ ಆರ್.ಎಂ. ವೆರ್ಣೇಕರ, ಭೂನ್ಯಾಯ ಮಂಡಳಿ ಸದಸ್ಯೆ ಜ್ಯೋತಿ ಗೌಡ ಮತ್ತಿತರರು ಉಪಸ್ಥಿತರಿದ್ದರು. ಪೌರ ಕಾರ್ಮಿಕ ಮಾಸ್ತಿ ಪ್ರಾರ್ಥಿಸಿದರು.