ಹಿರಿಯ ನಾಗರಿಕರನ್ನು ಗೌರವಿಸಿ

| Published : Jan 01 2025, 12:00 AM IST

ಸಾರಾಂಶ

ಹಿರಿಯರ ಅನುಭವದ ನುಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಜೀವನ ಪಾವನವಾಗುವುದರಲ್ಲಿ ಎರಡು ಮಾತಿಲ್ಲ

ಲಕ್ಷ್ಮೇಶ್ವರ: ಹಿರಿಯರು ಸಮಾಜ ತಿದ್ದುವ ಮಾರ್ಗದರ್ಶಕರಾಗಿದ್ದಾರೆ. ಹಿರಿಯರ ಅನುಭವಗಳು ನಮಗೆ ದಾರಿ ತೋರುವ ಬೆಳಕಿನ ದೀಪಗಳಾಗಿವೆ ಎಂದು ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.

ಮಂಗಳವಾರ ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ನಡೆದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಿವೃತ್ತ ನೌಕರರ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹಿರಿಯರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯವಾಗಿದೆ. ಹಿರಿಯರ ಅನುಭವದ ನುಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಜೀವನ ಪಾವನವಾಗುವುದರಲ್ಲಿ ಎರಡು ಮಾತಿಲ್ಲ. ಹಿರಿಯರಿಗೆ ದೊರೆಯಬೇಕಾದ ಸೌಲಭ್ಯ ದೊರಕಿಸಿಕೊಡುವ ಕಾರ್ಯ ಮಾಡುವುದು ಸಂಘದ ಪ್ರಮುಖದ ಕಾರ್ಯವಾಗಿದೆ. ಸರ್ಕಾರವು ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ನೀಡುತ್ತಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬದುಕಿನ ಕೊನೆಗಾಲದಲ್ಲಿ ಸಂತೋಷದಿಂದ ಜೀವನ ಸಾಗಿಸಬೇಕು ಎಂದು ಹೇಳಿದರು.

ಈ ವೇಳೆ ಸಂಘದ ಗೌರವಾಧ್ಯಕ್ಷ ಚನ್ನಪ್ಪ ಕೋಲಕಾರ ಮಾತನಾಡಿ, ಹಿರಿಯ ನಾಗರಿಕರು ಬೇರೆಯವರಿಗೆ ಹೊರೆಯಾಗದಂತೆ ತಮ್ಮ ಜೀವನ ನಡೆಸುವ ಕಲೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಎಸ್.ಪಿ.ಪಾಟೀಲ, ಕಾರ್ಯಾಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿದರು. ದ್ಯಾಮನಗೌಡ ಪಾಟೀಲ, ನೀಲಪ್ಪ ಕರ್ಜಕಣ್ಣವರ, ಸುರೇಶ ರಾಚನಾಯ್ಕರ್, ಹೇಮಗಿರಿಮಠ, ಚಂಬಣ್ಣ ಬಾಳಿಕಾಯಿ ಹಾಗೂ ಮಹಿಳಾ ನೌಕರರ ಸಂಘದ ಸದಸ್ಯೆ ಶಕುಂತಲಾ ಅಳಗವಾಡಿ ಸೇರಿದಂತೆ ಅನೇಕರು ಇದ್ದರು.