ಸಾರಾಂಶ
ಗದಗ: ಮಹಿಳಾ ದಿನಾಚರಣೆ ಎಂದರೆ ಗಂಡು-ಹೆಣ್ಣು ಮೇಲು-ಕೀಳು ಎಂದು ವಾದ ಮಾಡದೇ ಹೆಣ್ಣು ಗಂಡಿಗಿಂತ ಹೇಗೆ ವಿಭಿನ್ನ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಅದೇ ರೀತಿ ನಮ್ಮ ಸಾಧನೆಗೆ ಸ್ಫೂರ್ತಿಯಾದ ಮತ್ತು ಸಾಧನೆಯ ದಾರಿಯನ್ನು ಸುಗಮಗೊಳಿಸಿದ ನಮ್ಮ ಇಂದಿನ ಮಹಿಳಾ ಸಾಧನೆಯನ್ನು ನೆನಪಿಸಿಕೊಳ್ಳುವುದೇ ಆಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ಹೇಳಿದರು.
ಅವರು ಗದಗ ನಗರದ ಸಂಕನೂರ ಶುಶ್ರೂಷಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಶ್ವೇತಾ ಸಂಕನೂರ ಮಾತನಾಡಿ, ಮಹಿಳೆಯು ಮನೆಯ ಜವಾಬ್ದಾರಿ ವಹಿಸಿಕೊಂಡು ತನ್ನ ಗುರಿ ತಲುಪುವ ವರೆಗೆ ಬಿಡುವುದಿಲ್ಲ. ಅವಳ ಸಾಧನೆ ಕೆಲಸಗಳನ್ನು ನಾವು ಗೌರವಿಸುವುದೇ ನಿಜವಾದ ಸ್ತ್ರೀಪೂಜೆ ಎಂದು ಹೇಳಿದರು. ಪ್ರಾಂಶುಪಾಲರಾದ ಡಾ. ಮೀನಾಕ್ಷಿ ದೇವಾಂಗಮಠ ಮಾತನಾಡಿ, ಮಹಿಳೆಯರು ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು. ಉಪನ್ಯಾಸಕಿ ಕವಿತಾ ಪವಾರ ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿ ಗುರುಕಿರಣ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಲಮಾಣಿ ಸ್ವಾಗತಿಸಿದರು. ಮುಸ್ತುಫಾ ಮುಲ್ಲಾ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ 1 ಮತ್ತು 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.