ಹೊಸಹಳ್ಳಿ ಎಂಬ ಹೆಸರಿಗೆ ತಕ್ಕಂತೆ ಐತಿಹಾಸಿಕ ಹಿನ್ನೆಲೆ ಉಳ್ಳಂತಹ ಶ್ರೀ ವಿದ್ಯಾಗಣಪತಿ ಶ್ರೀ ವೀರಾಂಜನೇಯ ಹಾಗೂ ಶ್ರೀ ಬೈರಲಿಂಗೇಶ್ವರ ಭವ್ಯ ದೇವಾಲಯಗಳನ್ನು ಬೇಲೂರು ಹಳೇಬೀಡು ದೇವಾಲಯಗಳಂತೆ ಮೂರು ನಿರ್ಮಿಸಿ ಇತಿಹಾಸ ಸೃಷ್ಟಿಸಿರುವ ಗ್ರಾಮಸ್ಥರ ಕೊಡುಗೆ ಮೆಚ್ಚುವಂಥದ್ದು ಎಂದು ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಹೊಸಹಳ್ಳಿ ಎಂಬ ಹೆಸರಿಗೆ ತಕ್ಕಂತೆ ಐತಿಹಾಸಿಕ ಹಿನ್ನೆಲೆ ಉಳ್ಳಂತಹ ಶ್ರೀ ವಿದ್ಯಾಗಣಪತಿ ಶ್ರೀ ವೀರಾಂಜನೇಯ ಹಾಗೂ ಶ್ರೀ ಬೈರಲಿಂಗೇಶ್ವರ ಭವ್ಯ ದೇವಾಲಯಗಳನ್ನು ಬೇಲೂರು ಹಳೇಬೀಡು ದೇವಾಲಯಗಳಂತೆ ಮೂರು ನಿರ್ಮಿಸಿ ಇತಿಹಾಸ ಸೃಷ್ಟಿಸಿರುವ ಗ್ರಾಮಸ್ಥರ ಕೊಡುಗೆ ಮೆಚ್ಚುವಂಥದ್ದು ಎಂದು ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವಿದ್ಯಾಗಣಪತಿ ಶ್ರೀ ಆಂಜನೇಯ ಸ್ವಾಮಿ ಶ್ರೀ ಭೈರಲಿಂಗೇಶ್ವರ ಸ್ವಾಮಿ ನೂತನ ದೇವಸ್ಥಾನಗಳ ಪ್ರತಿಷ್ಠಾಪನ ಮಹೋತ್ಸವದಲ್ಲಿ ಪಾಲ್ಗೊಂಡು ಆಶಿರ್ವಚನ ನೀಡಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡರ ಸ್ವಗ್ರಾಮದಲ್ಲಿ ಇಂದು ವಿನೂತನವಾಗಿ ನಿರ್ಮಿಸಿರುವ ನೂತನ ದೇವಸ್ಥಾನ ನಿರ್ಮಾಣ ಹಾಗೂ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಅವರ ನೇತೃತ್ವದಲ್ಲಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ನಡೆಯುತ್ತಿದ್ದು ಮೂರು ದೇವಸ್ಥಾನಗಳು ಹಳೇಬೀಡು, ಬೇಲೂರು ಸ್ಥಳದ ಮಾದರಿಯಂತೆ ಕಂಗೊಳಿಸುತ್ತಿವೆ. ಗ್ರಾಮ ಚಿಕ್ಕದಾದರೂ ದೊಡ್ಡ ಮನಸ್ಸುಳ್ಳ ಮಹತ್ಕಾರ್ಯವನ್ನು ಇಲ್ಲಿನ ಜನರು ಮಾಡಿದ್ದಾರೆ. ಕುಗ್ರಾಮದಲ್ಲಿ ಹುಟ್ಟಿದ ಚಿದಾನಂದ ಗೌಡ ಅವರು ಜಿಲ್ಲೆ, ರಾಜ್ಯ, ಅಂತ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಹುಟ್ಟಿದ ಊರಲ್ಲಿ ಉತ್ತಮ ದೇವಸ್ಥಾನ ನಿರ್ಮಿಸಿ ಶಾಶ್ವತವಾದ ಶತಮಾನಗಳು ಉಳಿಯು ವಂಥ ಕೆಲಸವನ್ನು ಮಾಡಿದ್ದು ಅವರಿಗೆ ದೇವರು ಇನ್ನಷ್ಟು ಅಭಿವೃದ್ಧಿ ಕೊಡಲಿ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ ನಮ್ಮ ಗ್ರಾಮದಲ್ಲಿ ವಿದ್ಯಾ ವಿನಾಯಕ ಪ್ರತಿಷ್ಠಾಪನೆಯಾಗಿದ್ದು ನಮ್ಮ ಗ್ರಾಮಕ್ಕೆ ಅದೃಷ್ಟದ ಬಾಗಿಲು ತೆರೆದಂತಾಗಿದೆ. ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮಿಗಳ ಪ್ರೋತ್ಸಾಹ, ಸಹಕಾರದಿಂದ ನಮ್ಮ ಗ್ರಾಮಕ್ಕೆ ಕಳೆ ಬಂದಂತಾಗಿದೆ. ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು ಗ್ರಾಮದ ಪ್ರತಿಯೊಬ್ಬರು ಸಹ ತಮ್ಮ ಮನೆಗಳಲ್ಲಿ ಅಡುಗೆ ಮಾಡದೆ ಗ್ರಾಮದ ದೇವಸ್ಥಾನದ ಆವರಣದಲ್ಲಿ ಸಮರ್ಪಿಸುತ್ತಿರುವ ಅನ್ನದಾಸೋಹದಲ್ಲಿ ಪಾಲ್ಗೊಂಡು ತಮ್ಮ ಮನೆಗಳಲ್ಲಿ ಸ್ವೀಕರಿಸಿ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ನಿವೃತ್ತ ಸಾರಿಗೆ ಅಧಿಕಾರಿ ತಿಮ್ಮರಾಯಪ್ಪ, ಮಾತನಾಡಿ ಸುಮಾರು ಐದು ವರ್ಷಗಳಿಂದ ನಮ್ಮ ಗ್ರಾಮದ ಮೂರು ದೇವಸ್ಥಾನಗಳನ್ನು ಗ್ರಾಮದ ಜನರು ಒಗ್ಗಟ್ಟಾಗಿ ಜಾತಿ ಭೇದ ಭಾವ ಇಲ್ಲದೆ ಇಡೀ ಗ್ರಾಮ ಒಂದೇ ಎಂಬ ಪ್ರೀತಿಯಲ್ಲಿ ಪಣತೊಟ್ಟು ನಿಂತು ಹಿಂದೂ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕರಿಸಿದ್ದಾರೆ ಎಂದರು.

ಮುಖಂಡರಾದ ರಾಮಚಂದ್ರಪ್ಪ, ಸಿದ್ದಲಿಂಗಪ್ಪ, ನಾಗರಾಜು, ಅಂಬಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಧರ್, ನಾಗರಾಜು, ಬರಗೂರು ಶಿವಕುಮಾರ್, ಪುಷ್ಪವತಿ ಚಿದಾನಂದ್ ಎಂ ಗೌಡ, ಪುಷ್ಪ ತಿಮ್ಮರಾಯಪ್ಪ, ಮುಖಂಡರಾದ ಲಕ್ಷ್ಮಣ್, ಮಹಾಲಿಂಗಪ್ಪ, ಜಯಣ್ಣ, ತಿಪ್ಪೇಸ್ವಾಮಿ, ಶಿವಣ್ಣ ಸೇರಿದಂತೆ ಹೊಸ ಹಳ್ಳಿ ಗ್ರಾಮದ ಹಲವಾರು ಮುಖಂಡರು ಭಕ್ತರು ಭಾಗವಹಿಸಿದ್ದರು.