ಜಲ್ಲೆಯಲ್ಲಿ ರೈಲ್ವೆ ಯೋಜನೆಗಳು ಪೂರ್ಣಗೊಳ್ಳಲು ಶೀಘ್ರ ಸ್ಪಂದಿಸಿ

| Published : Dec 14 2023, 01:30 AM IST

ಜಲ್ಲೆಯಲ್ಲಿ ರೈಲ್ವೆ ಯೋಜನೆಗಳು ಪೂರ್ಣಗೊಳ್ಳಲು ಶೀಘ್ರ ಸ್ಪಂದಿಸಿ
Share this Article
  • FB
  • TW
  • Linkdin
  • Email

ಸಾರಾಂಶ

2020-21ರಲ್ಲಿ ₹62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಶಿವಮೊಗ್ಗ ಸಮೀಪ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯವನ್ನು ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಬುಧವಾರ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಶಿವಮೊಗ್ಗ- ರೇಣಿಗುಂಟ- ಚೆನ್ನೈ ನಡುವಿನ ಬೈವೀಕ್ಲಿ ವಿಶೇಷ ರೈಲು ಕಳೆದೆರಡು ವರ್ಷಗಳಿಂದ ಅತ್ಯಂತ ಫಲಪ್ರದವಾಗಿ ಸಂಚರಿಸುತ್ತಿದೆ. ಆದಾಗ್ಯೂ ಅಕ್ಟೋಬರ್ 1ರಿಂದ ಇದನ್ನು ನಿಲುಗಡೆಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ಅದರಲ್ಲೂ, ತಿರುಪತಿ ಮತ್ತು ಚೆನ್ನೈಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ, ಸ್ಥಗಿತಗೊಂಡ ಈ ರೈಲನ್ನು ಶೀಘ್ರ ಪುನಾರಂಭಿಸಬೇಕು ಎಂದಿದ್ದಾರೆ.

2020-21ರಲ್ಲಿ ₹62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಶಿವಮೊಗ್ಗ ಸಮೀಪ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯವನ್ನು ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಶಿವಮೊಗ್ಗ-ಶಿಕಾರಿಪುರ- ರಾಣೇಬೆನ್ನೂರು ನೂತನ ರೈಲ್ವೆಮಾರ್ಗ ಪೂರ್ಣಗೊಂಡ ಬಳಿಕ, ಈ ಕೋಚಿಂಗ್ ಡಿಪೋ ಅತ್ಯಂತ ಮಹತ್ವಪೂರ್ಣ ಕೇಂದ್ರವಾಗಲಿದೆ. ವಿವಿಧ ಭಾಗಗಳಿಂದ ಅನೇಕ ರೈಲುಗಳು ನಿರ್ವಹಣೆಗಾಗಿ ಇಲ್ಲಿಗೆ ಬರಬೇಕಾಗುತ್ತದೆ. ಕೇಂದ್ರ ಸರ್ಕಾರ ಇತ್ತೀಚೆಗೆ ದೇಶದಲ್ಲಿ ಅನೇಕ ಭಾಗಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಓಡಾಟವನ್ನು ಪ್ರಾರಂಭಿಸಿದೆ. ಪ್ರಸ್ತುತ ನಿರ್ಮಿಸುತ್ತಿರುವ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋವನ್ನು ವಂದೇ ಭಾರತ್‌ನಂತಹ ರೈಲುಗಳ ನಿರ್ವಹಣೆ ಸಹ ಮಾಡಲು ಅನುಕೂಲ ಆಗುವಂತೆ ಮೇಲ್ದರ್ಜೆಗೇರಿಸುವಂತೆ ಸಂಬಂಧಿಸಿದವರಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ತಾಳಗುಪ್ಪ- ತಡಸ- ಹೊನ್ನಾವರ- ಶಿರಸಿ- ಹುಬ್ಬಳ್ಳಿ ನೂತನ ರೈಲ್ವೆಮಾರ್ಗ ಅಳವಡಿಕೆ ಯೋಜನೆಯನ್ನು ಈ ಹಿಂದೆ ರೈಲ್ವೆ ಬಜೆಟ್‌ನಲ್ಲಿ ಮಂಜೂರು ಮಾಡಿದಂತೆ, ಈಗಾಗಲೇ ರೈಲ್ವೆ ಬೋರ್ಡಿಗೆ ಈ ಮಾರ್ಗದ ಅನುಕೂಲತೆಗಳ ಬಗ್ಗೆ ವರದಿ ಸಲ್ಲಿಸಿದ್ದು, ಆದಷ್ಟು ಬೇಗನೇ ಈ ಮಾರ್ಗವನ್ನು ಮಂಜೂರು ಮಾಡಬೇಕು. ಇದರಿಂದ ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ಉತ್ತರ ಭಾಗಗಳಿಗೆ ಓಡಾಡಲು ತುಂಬಾ ಅನುಕೂಲ ಆಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ದೇಶದ ಆಯ್ದ ಕೆಲವು ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಿಸಲು ಅಮೃತ್ ಸ್ಟೇಷನ್ ಯೋಜನೆ ಜಾರಿಗೊಳಿಸಿದೆ. ಸದರಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಟೌನ್, ಸಾಗರ ಮತ್ತು ತಾಳಗುಪ್ಪ ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಜಿಲ್ಲೆಯ ಭದ್ರಾವತಿ ಪಟ್ಟಣವು ಕೈಗಾರಿಕಾ ಕೇಂದ್ರವಾಗಿರುವುದರಿಂದ, ಭದ್ರಾವತಿ ರೈಲ್ವೆ ನಿಲ್ದಾಣವನ್ನು ಸಹ ಉನ್ನತೀಕರಿಸುವುದು ಅವಶ್ಯಕ. ಹೀಗಾಗಿ, ಅಮೃತ್ ಯೋಜನೆಯಡಿ ಜಿಲ್ಲೆಯ ಭದ್ರಾವತಿ ರೈಲ್ವೆ ನಿಲ್ದಾಣವನ್ನು ಸಹ ಉನ್ನತೀಕರಿಸಲು ಆಯ್ಕೆ ಪಟ್ಟಿಯಲ್ಲಿ ಸೇರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದಿದ್ದಾರೆ.

- - -

ಬಾಕ್ಸ್‌ 20661-20662 ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ಓಡಾಟವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಮಾರ್ಗ ಮಧ್ಯದಲ್ಲಿ ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಈ ರೈಲು ನಿಲುಗಡೆ ನೀಡಲಾಗುತ್ತಿದೆ. ಬೀರೂರು ಜಂಕ್ಷನ್‌ನಲ್ಲಿಯೂ ಈ ರೈಲಿಗೆ ನಿಲುಗಡೆ ನೀಡಿದಲ್ಲಿ, ಬೀರೂರಿನಲ್ಲಿ ಶಿವಮೊಗ್ಗ ಕಡೆಗೆ ರೈಲುಗಳು ಡೈವರ್ಟ್ ಆಗುವ ಕಾರಣ, ಶಿವಮೊಗ್ಗ ಭಾಗದಿಂದ ಪ್ರಯಾಣಿಸುವ ಸಹಸ್ರಾರು ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲ ಎಂದು ಸಚಿವರಿಗೆ ಸಂಸದರು ಮನವಿ ಮಾಡಿದ್ದಾರೆ.

ಇದೇ ರೀತಿ ಪ್ರತಿ ರಾತ್ರಿ ತೆರಳುವ 16228 ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್ ರೈಲು ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು, ವ್ಯಾಪಾರಸ್ಥರು ಮತ್ತು ಜನಸಾಮಾನ್ಯರಷ್ಟೇ ಅಲ್ಲದೇ, ಮಲೆನಾಡು ಜಿಲ್ಲೆಯ ಅಕ್ಕಪಕ್ಕದ ಕರಾವಳಿ ಜಿಲ್ಲೆಯ ಪ್ರಯಾಣಿಕರೂ ಬೆಂಗಳೂರಿಗೆ ತೆರಳಲು ಈ ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ಆದರೆ ಕಳೆದ 6 ತಿಂಗಳುಗಳಿಂದ ಈ ರೈಲು ಶಿವಮೊಗ್ಗ ಟೌನ್ ನಿಲ್ದಾಣವನ್ನು ರಾತ್ರಿ 11ರ ಬದಲಿಗೆ ರಾತ್ರಿ 11.30ಕ್ಕೆ ಬಿಡುತ್ತಿರುವುದರಿಂದ, ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ತೊಂದರೆ ಆಗುತ್ತಿದೆ. ಪ್ರಯುಕ್ತ ಸಂಬಂಧಿಸಿದ ಅಧಿಕಾರಿಗಳಿಗೆ ನಿಗದಿತ ಸಮಯವಾದ ರಾತ್ರಿ 11 ಗಂಟೆಗೆ ಶಿವಮೊಗ್ಗ ಬಿಡುವಂತೆ ನಿರ್ದೇಶನ ನೀಡಬೇಕು ಎಂದಿದ್ದಾರೆ.

12089/90 ಬೆಂಗಳೂರು- ಶಿವಮೊಗ್ಗ ನಡುವಿನ ಜನಶತಾಬ್ಧಿ ಎಕ್ಸ್‌ಪ್ರೆಸ್ ಮತ್ತು 16227/ 16228 ತಾಳಗುಪ್ಪ- ಮೈಸೂರು ನಡುವಿನ ಎಕ್ಸ್‌ಪ್ರೆಸ್ ರೈಲುಗಳ ಸಾಮಾನ್ಯ ಕೋಚ್‌ಗಳು ಹಾಗೂ ಎ.ಸಿ. ಕೋಚ್‌ಗಳು ತುಂಬಾ ಹಳೆಯದಾಗಿವೆ. ನಿರ್ವಹಣೆಯೂ ಸಾಕಾಗುತ್ತಿಲ್ಲ. ಈ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರು ಕೋಚ್‌ಗಳ ಅವ್ಯವಸ್ಥೆಗಳ ಬಗ್ಗೆ ಸಾಕಷ್ಟು ದೂರುಗಳನ್ನು ನೀಡುತ್ತಿರುವುದರಿಂದ, ಈ ರೈಲುಗಳನ್ನು ಹೊಸ LHB ಕೋಚ್‌ಗಳ ಅಳವಡಿಕೆಯೊಂದಿಗೆ ಸೇವೆ ನೀಡಲು ಸಂಬಂಧಿಸಿದವರಿಗೆ ಸೂಚಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

- - - -ಫೋಟೋ: ಬಿ.ವೈ.ರಾಘವೇಂದ್ರ, ಸಂಸದ