ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸರ್ಕಾರ ಸಾರ್ವಜನಿಕರ ತೆರಿಗೆ ಹಣದಿಂದ ಅಧಿಕಾರಿಗಳಿಗೆ ಸಂಬಳ ನೀಡುತ್ತಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಬಂದಾಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಲೆದಾಡಿಸದೆ ಸೌಜನ್ಯದಿಂದ ವರ್ತಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಲಿಬಾಷಾ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆ ಹಾಗೂ ಅಹವಾಲು ಸ್ವಿಕಾರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅಲೆದಾಡುವ ಪ್ರವೃತ್ತಿ ಒಳ್ಳೆಯದಲ್ಲ. ತಾಲೂಕು ಕಚೇರಿಗಳಲ್ಲಿ ಇರುವ ದೂರುಗಳು ಬಗ್ಗೆ ಲೋಕಅದಾಲತ್ ಮೂಲಕ ಸಮಸ್ಯೆ ಪರಿಹಾರವಾಗಬೇಕು. ತಾಲೂಕು ಕಚೇರಿ ಮತ್ತು ತಾ.ಪಂ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಹೆಚ್ಚಿದ್ದು ಈ ಬಗ್ಗೆ ತಹಸೀಲ್ದಾರ್ ಮತ್ತು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಗಮನಹರಿಸಬೇಕಿದೆ ಎಂದರು.
ನಮಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ. ನಗರದ ಅಮಾನಿಕೆರೆ ಅಕ್ಕಪಕ್ಕದಲ್ಲಿ ಕೆರೆಯ ಜಾಗದಲ್ಲಿ ಅನಧಿಕೃತ ಮನೆ ನಿರ್ಮಾಣ ಮಾಡಲಾಗಿದೆ ಎಂದು ದೂರು ಲೋಕಾಯುಕ್ತ ಇಲಾಖೆಗೆ ಬಂದಿದ್ದು ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಕ್ರಮ ಕೈಗಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರದಲ್ಲಿ ಬೀದಿನಾಯಿಗಳ ಸಮಸ್ಯೆ ಹೆಚ್ಚಾಗಿದ್ದು, ನಾಯಿಗಳ ಹಾವಳಿ ತಡೆಗಟ್ಟಲು ನಗರಸಭೆ ಅಧಿಕಾರಿಗಳು ಕ್ರಕೈಗೊಳ್ಳಬೇಕು. ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಟೆಂಡರ್ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ನಗರಸಭೆ ಆರೋಗ್ಯ ಅಧಿಕಾರಿ ಶ್ರೀನಿವಾಸ್‌ಗೆ ಜಿಲ್ಲಾ ಲೋಕಾಯುಕ್ತರು ತಿಳಿಸಿದರು.
ವಸತಿ ಶಾಲೆಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈ ಬಗ್ಗೆ ತಹಸೀಲ್ದಾರ್, ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗಮನಹರಿಸಬೇಕೆಂದು ಸೂಚಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸೇವೆ ಇಲ್ಲದಿರುವ ದೂರುಗಳು ಬರುತ್ತಿವೆ. ಈ ಬಗ್ಗೆ ತಾಲೂಕಿನ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು ಆದೇಶಿಸಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು ಈ ಬಗ್ಗೆ ಅಬಕಾರಿ ಇನ್ಸ್‌ಪೆಕ್ಟರ್ ವನಜಾಕ್ಷಿ ಅವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ತಾಲೂಕು ಆಡಳಿದ ಸೌಧದಲ್ಲಿ ಇರುವ ಸುಮಾರು ಆರು ಸಾರ್ವಜನಿಕ ಶೌಚಾಲಯಗಳಿಗೆ ನಿರ್ವಹಣೆ ಇಲ್ಲದೆ ಬೀಗ ಹಾಕಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್. ಗಣೇಶ್ ಲೋಕಾಯುಕ್ತರಿಗೆ ದೂರು ನೀಡಿದರು.
ಗ್ರಾಮೀಣ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ನನ್ನ ಮೊಬೈಲ್ ಅನ್ನು ಹೊನ್ನವಳ್ಳಿ ಗ್ರಾಮಾಂತರ ಪೊಲೀಸರು ಕಸಿದುಕೊಂಡಿದ್ದಾರೆ ಎಂದು ಆದಿನಾಯಕನಹಳ್ಳಿಯ ಗೋಪಿ ಲೋಕಾಯುಕ್ತರಿಗೆ ದೂರು ನೀಡಿದರು. ಮತ್ತಿಹಳ್ಳಿ ಗೊಲ್ಲರಹಟ್ಟಿ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಬಗ್ಗೆ ಕೆ.ಆರ್.ಎಸ್. ಪಕ್ಷದ ತಿಮ್ಮಣ್ಣ ಲೋಕಾಯುಕ್ತರಿಗೆ ದೂರು ನೀಡಿದರು. ಈ ಎಲ್ಲಾ ದೂರುಗಳನ್ನು ಸ್ವೀಕರಿಸಿದ ಲೋಕಾಯುಕ್ತ ಎಸ್ಪಿಯವರು ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದರು ಸೂಚಿಸಿದರು.ಸಭೆಯಲ್ಲಿ ಲೋಕಾಯಕ್ತ ಡಿವೈಎಸ್ಪಿ ಉಮಾಶಂಕರ್, ರಾಮಕೃಷ್ಣಪ್ಪ, ಇನ್ಸ್‌ಪೆಕ್ಟರ್ ರಾಮಿರೆಡ್ಡಿ, ಶಿವರುದ್ರಪ್ಪ ಮೇಟಿ, ತಹಸೀಲ್ದಾರ್ ಪವನ್‌ಕುಮಾರ್ ತಾಪಂ ಇಒ ಸುದರ್ಶನ್, ಸಿಬ್ಬಂದಿಗಳಾದ ಯತೀಗೌಡ, ರವೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಭಾಗವಹಿಸಿದ್ದರು.