ವಿಶೇಷ ಚೇತನರ ಕುಂದು ಕೊರತೆ ಅಹವಾಲು ಆಲಿಸುವ ಸಭೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಮಡಿಕೇರಿ: ವಿಶೇಷ ಚೇತನರ ಕುಂದು ಕೊರತೆ ಅಹವಾಲು ಆಲಿಸುವ ಸಭೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಸೋಮಶೇಖರ್ ಎರಡು ಗಂಟೆಗೂ ಹೆಚ್ಚು ಕಾಲ ವಿಶೇಷಚೇತನರ ಅಹವಾಲನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ವಿಶೇಷಚೇತನರ ಕುಂದುಕೊರತೆ ಆಲಿಸುವ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು. ತಮ್ಮ ಹಂತದಲ್ಲಿ ಪರಿಹಾರ ಆಗದಿರುವ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ತಾಲೂಕು ಮಟ್ಟದಲ್ಲೂ ವಿಶೇಷಚೇತನರ ಕುಂದುಕೊರತೆ ಆಲಿಸುವ ಸಭೆ ಏರ್ಪಡಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಜೊತೆಗೆ ಸೌಲಭ್ಯಗಳ ಬಗ್ಗೆಯೂ ಸಹ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ವಿಶೇಷಚೇತನರಿಗಾಗಿ ನಿಗದಿ ಮಾಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸವನ್ನು ಆದ್ಯತೆ ಮೇಲೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೋಮಶೇಖರ್ ತಾಕೀತು ಮಾಡಿದರು. ಕಚೇರಿ ಹಾಗೂ ಶಾಲೆಗಳಲ್ಲಿ ವಿಶೇಷಚೇತನರಿಗೆ ರ್‍ಯಾಂಪ್ ವ್ಯವಸ್ಥೆ ಇರಬೇಕು. ವಿಶೇಷಚೇತನರು ಕಚೇರಿ ಒಳ ಭಾಗಕ್ಕೆ ಬರಲು ಕಷ್ಟಸಾಧ್ಯವಾದರೆ ಅವರ ಬಳಿಗೆ ಭೇಟಿ ನೀಡಿ, ಆಗಬೇಕಿರುವ ಕೆಲಸಗಳಿಗೆ ಸ್ಪಂದಿಸಬೇಕು. ವಿಶೇಷಚೇತನರಿಗಾಗಿ ತಾಲೂಕು ಮಟ್ಟದಲ್ಲೂ ಆಧಾರ್ ನೋಂದಣಿ ಶಿಬಿರ ಏರ್ಪಡಿಸುವಂತೆ ಸೂಚಿಸಿದರು. ಕೊಡಗು ವಿದ್ಯಾಲಯದ ವೀಣಾ ಚಂಗಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂದರ್ಭ ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭ ಮಾತನಾಡಿದ ವಿಶೇಷಚೇತನರ ಅಧಿಕಾರಿ ವಿಮಲ ಅವರು ಜಿಲ್ಲೆಯಲ್ಲಿ ಮಡಿಕೇರಿ, ಶನಿವಾರಸಂತೆ, ಸುಂಟಿಕೊಪ್ಪ, ಪಾಲಿಬೆಟ್ಟದಲ್ಲಿ ವಿಶೇಷ ಶಾಲೆಗಳು ನಡೆಯುತ್ತಿವೆ. ಹಾಗೆಯೇ ಮನೆಯಿಂದಲೂ 276 ವಿಶೇಷಚೇತನ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿಶೇಷಚೇತನ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಲ್ಲಿ ಶಿಕ್ಷಣ ಇಲಾಖೆ ಜೊತೆ ಸಮನ್ವಯ ಸಾಧಿಸಲಾಗುವುದು ಎಂದರು. ವಿಶೇಷಚೇತನರ ಅಧಿಕಾರಿ ವಿಮಲ ಮಾತನಾಡಿ, ವಿಶೇಷಚೇತನರಿಗೆ ಸರ್ಕಾರದಿಂದ ಗುರುತಿನ ಚೀಟಿ, ತ್ರಿಚಕ್ರ ವಾಹನ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ದೇಹದ ಯಾವುದೇ ಭಾಗದಲ್ಲಿ ಶೇ. 40ಕ್ಕಿಂತ ಹೆಚ್ಚು ವಿಕಲತೆ ಹೊಂದಿದ್ದರೆ ಅಂತವರನ್ನು ವಿಶೇಷಚೇತನರೆಂದು ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ವಿಶೇಷಚೇತನರ ಜಿಲ್ಲಾಧ್ಯಕ್ಷ ಬಿ.ಎಂ. ತಿರುಮಲೇಶ್ ಮಾತನಾಡಿ, ಕಳೆದ ನಾಲ್ಕು ತಿಂಗಳಿನಿಂದ ಪಿಂಚಣಿ ತಲುಪದೆ ತೊಂದರೆ ಆಗಿದೆ ಎಂದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ಆದಾಯ ಮಿತಿ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಗಳು ಪರಿಹಾರ ಆಗಲಿದೆ ಎಂದರು.ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯ ಆರತಿ ಸೋಮಯ್ಯ ಮಾತನಾಡಿ, ಎಸ್ಸೆಸ್ಸೆಲ್ಸಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ನೀಡುವಂತಾಗಬೇಕು. ಇದರಿಂದ ವಿಶೇಷಚೇತನ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಹಕಾರಿಯಾಗಲಿದೆ ಎಂದರು.
ಬೇಟೋಳಿಯ ಆಯಿಷಾ ಮಾತನಾಡಿ, ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷಚೇತನರಿಗೆ ಪ್ರಥಮ ಆದ್ಯತೆಯಲ್ಲಿ ಚಿಕಿತ್ಸೆ ನೀಡಬೇಕು. ಅವರನ್ನು ಯಾವುದೇ ಕಾರಣಕ್ಕೂ ಕಾಯಿಸಬಾರದು ಎಂದರು.ಮೂರ್ನಾಡು ಗ್ರಾಮದ ವಿಶೇಷಚೇತನರೊಬ್ಬರು ಮಾತನಾಡಿ, ಮನೆ/ನಿವೇಶನ ಇಲ್ಲದ ವಿಶೇಷಚೇತನರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.
ಪಾಲಿಬೆಟ್ಟದ ಗೀತಾ ಚಂಗಪ್ಪ, ಶಿವರಾಜ್ ಅವರು ವಿಶೇಷಚೇತನರ ಕುಂದುಕೊರತೆ ಬಗ್ಗೆ ಗಮನ ಸೆಳೆದರು. ಜಿಲ್ಲಾ ಸರ್ಜನ್ ಡಾ. ನಂಜುಂಡಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುಮಂಗಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಅವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ವಿಶೇಷಚೇತನರಿಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸ್ವಾಮಿ ವಿವೇಕಾನಂದ ಯುವ ಸಂಸ್ಥೆಯ ಅಂಕಾಚಾರಿ ಮಾತನಾಡಿ, ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ‘ಸಮುದಾಯ ಪುನರ್ವಸತಿ ಕೇಂದ್ರ’ ಹಾಗೂ ಮಡಿಕೇರಿಯ ತಾಪಂ ಕಚೇರಿಯ ಹತ್ತಿರದ ‘ಪುನರ್ವಸತಿ ಸಂಪನ್ಮೂಲ ಕೇಂದ್ರ’ದಲ್ಲಿ ವಿಶೇಷಚೇತನರಿಗೆ ಫಿಸಿಯೋಥೆರಪಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.