ಸಾರಾಂಶ
ಅರಸನಘಟ್ಟ 66/11 ಕೆವಿ ಕೇಂದ್ರದಿಂದ ಚಿಕ್ಕಂದವಾಡಿ, ಅರಸನಘಟ್ಟ, ಹಿರೇಕಂದವಾಡಿ ಗ್ರಾಮದ ರೈತರ ಪಂಪು ಸೆಟ್ಟುಗಳಿಗೆ ನೇರ ವಿದ್ಯುತ್ ಸಂಪರ್ಕಕಲ್ಪಿಸಿದ ಹಿನ್ನಲೆ ವಿದ್ಯುತ್ ವಿತರಣಾ ಕೇಂದ್ರದ ಮುಂಭಾಗ ರೈತರು ಸಿಹಿ ಹಂಚಿ ಸಂಭ್ರಮಿಸಿದರು.
ಅರಸನಘಟ್ಟ 66/11 ಕೆವಿ ಕೇಂದ್ರದಿಂದ ಸರಬರಾಜು । ರೈತರು ಸಿಹಿ ಹಂಚಿ ಸಂಭ್ರಮಕನ್ನಪ್ರಭ ವಾರ್ತೆ ಹೊಳಲ್ಕೆರೆ
ತಾಲೂಕಿನ ಅರಸನಘಟ್ಟದಲ್ಲಿರುವ 66/11 ಕೆವಿ ಕೇಂದ್ರದಿಂದ ಚಿಕ್ಕಂದವಾಡಿ, ಅರಸನಘಟ್ಟ, ಹಿರೇಕಂದವಾಡಿ ಪ್ರದೇಶದ ಹಳ್ಳಿಗಳಿಗೆ ನೇರ ಸಂಪರ್ಕದ ಮೂಲಕ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಒಪ್ಪಿಗೆ ನೀಡಿ ಕಾರ್ಯಾಚರಣೆ ಕೈಗೊಂಡಿದೆ.ಅರಸನಘಟ್ಟ 66/11 ಕೆವಿ ಕೇಂದ್ರದಿಂದ ಶಿವಗಂಗದ ಆಸುಪಾಸಿನ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಚಿಕ್ಕಂದವಾಡಿ ಭಾಗದ ಹಳ್ಳಿಗಳಿಗೆ ತೊಂದರೆಯಾಗುತ್ತದೆ. ಬೇಸಿಗೆ ಅರಂಭವಾಗಿದ್ದು ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಅಗತ್ಯವಾಗಿದೆ. ಇಲ್ಲವಾದಲ್ಲಿ ತೋಟಗಳ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ ರೈತರು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಸಾಲದೆಂಬಂತೆ ಅರಸನಘಟ್ಟ ವಿದ್ಯುತ್ ವಿತರಣಾ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿದ್ದರು.
ರೈತರ ಅಹವಾಲು ಆಲಿಸಲು ಸ್ಥಳಕ್ಕೆ ಆಗಮಿಸಿದ್ದ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ತಿಮ್ಮರಾಯಪ್ಪ, ಬೆಸ್ಕಾಂ ಹೊಳಲ್ಕೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಡಿ.ಆರ್.ವಿರುಪಾಕ್ಷಪ್ಪ, ಚಿಕ್ಕಜಾಜೂರು ಶಾಖೆಯ ಸಹಾಯಕ ಎಂಜಿನಿಯರ್ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿ ನಂತರ ಪ್ರತ್ಯೇಕ ಮಾರ್ಗದ ಮೂಲಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಂಡಿದ್ದಾರೆ.ಪ್ರತ್ಯೇಕ ಮಾರ್ಗದ ಮೂಲಕ ವಿದ್ಯುತ್ ಪೂರೈಕೆ ಮಾಡಿದ ಬೆಸ್ಕಾಂ ಅಧಿಕಾರಿಗಳ ಕ್ರಮಕ್ಕೆ ಸ್ವಾಗತಿಸಿದ ರೈತರು, ಈ ಸಂಬಂಧ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಅರಿಶಿನಘಟ್ಟ ಹಾಗೂ ಚಿಕ್ಕಂದವಾಡಿ ಗ್ರಾಮಸ್ಥರಾದ ಎ.ಎಂ.ಗಿರೀಶ್, ಎ.ಆರ್.ದಿನೇಶ್, ಜಿ.ಟಿ.ಹರೀಶ್, ಎನ್.ಆನಂದ್, ಎಸ್.ಶಿವಣ್ಣ, ನ್ಯಾಯಬೆಲೆ ಅಂಗಡಿ ತಿಪ್ಪೇಶ್, ಅಜ್ಜಯ್ಯ, ಬಸವರಾಜ್, ಎಂ. ಅರುಣ್ ಕುಮಾರ್ ಈ ವೇಳೆ ಉಪಸ್ಥಿತರಿದ್ದರು.