ಧಾರವಾಡದಲ್ಲಿದ್ದ ಆಧಾರ್ ಸೇವಾ ಕೇಂದ್ರವು ನ. 28ರಿಂದ ದಿಢೀರ್ ಆಗಿ ಕಾರ್ಯ ನಿರ್ವಹಣೆ ಸ್ಥಗಿತಗೊಳಸಿ ಇದೀಗ ಹುಬ್ಬಳ್ಳಿಯ ಕೇಶ್ವಾಪುರಕ್ಕೆ ಸ್ಥಳಾಂತರಗೊಂಡಿದ್ದು ಜನರಿಗೆ ತೀವ್ರ ತೊಂದರೆಯಾಗಿದೆ.
ಧಾರವಾಡ:
ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಸೇವಾ ಕೇಂದ್ರ ಸೌಲಭ್ಯ ಮುಂದುವರಿಸುವಂತೆ ಒತ್ತಾಯಿಸಿ ಧಾರವಾಡ ಧ್ವನಿ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ನಗರದ ಕಿತ್ತೂರ ಚೆನ್ನಮ್ಮ ಪಾರ್ಕ್ ಬಳಿಯ ಮಂಡಿ ಪ್ಲಾಜಾದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಲಾಯಿತು. ಮಂಡಿ ಪ್ಲಾಜಾ ಕಟ್ಟಡದಲ್ಲಿ ಆಧಾರ್ ಸೇವಾ ಕೇಂದ್ರವು ಕಾರ್ಯನಿರ್ವಹಿಸುತ್ತಿತ್ತು. ಆದರೆ, ಆಧಾರ್ ಸೇವಾ ಕೇಂದ್ರವು ನ. 28ರಿಂದ ದಿಢೀರ್ ಆಗಿ ಕಾರ್ಯ ನಿರ್ವಹಣೆ ಸ್ಥಗಿತಗೊಳಸಿ ಇದೀಗ ಹುಬ್ಬಳ್ಳಿಯ ಕೇಶ್ವಾಪುರಕ್ಕೆ ಸ್ಥಳಾಂತರಗೊಂಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಧಾರವಾಡಕ್ಕೆ ಕೇಂದ್ರಕ್ಕೆ ಹೊಸ ಆಧಾರ ಕಾರ್ಡ್, ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ, ಮೊಬೈಲ್ ನಂಬರ್ ಜೋಡಣೆ ಇನ್ನಿತರ ಸೇವೆಗಳಿಗಾಗಿ ನಿತ್ಯ ನೂರಾರು ಜನರು ಆಗಮಿಸುತ್ತಿದ್ದರು. ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಮಿಸುವ ಸಾರ್ವಜನಿಕರಿಗೆ ಸರಳ ಮತ್ತು ಕಡಿಮೆ ಸಮಯದಲ್ಲಿ ಸೇವೆ ಸಿಗುತ್ತಿತ್ತು. ಇದರಿಂದ ಧಾರವಾಡ ನಗರ, ಗ್ರಾಮೀಣ ಭಾಗ ಮಾತ್ರವಲ್ಲದೇ ಪಕ್ಕದ ತಾಲೂಕುಗಳಿಂದ ಜನರು ಬರುತ್ತಿದ್ದರು. ಆದರೆ, ಈ ಕೇಂದ್ರವು ಈಗ ಹುಬ್ಬಳ್ಳಿಗೆ ಸ್ಥಳಾಂತರ ಆಗಿರುವ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.ನಗರದಲ್ಲಿ ಅಂಚೆ ಕಚೇರಿ, ಕೆಲವು ಖಾಸಗಿ ಆನ್‌ಲೈನ್ ಕೇಂದ್ರಗಳಲ್ಲಿ ಆಧಾರ ಕಾರ್ಡ್ ಸಂಬಂಧಿತ ಸೇವೆಗಳು ಸಿಗುತ್ತಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಆಗಮಿಸುವ ಜನರಿಗೆ ಸಕಾಲದಲ್ಲಿ ಸೇವೆ ಲಭ್ಯವಾಗುತ್ತಿಲ್ಲ. ಅಲ್ಲದೇ ಸೇವೆಗೆ ಅಧಿಕ ದರ ನಿಗದಿಪಡಿಸಿರುವುದರಿಂದ ಜನಸಾಮಾನ್ಯರ ಸುಲಿಗೆಗೆ ಅವಕಾಶ ಸಿಕ್ಕಂತಾಗಿದೆ. ಆದ್ದರಿಂದ ನಗರದ ಹೃದಯ ಭಾಗದಲ್ಲಿ ಆಧಾರ ಸೇವಾ ಕೇಂದ್ರವನ್ನು ಆರಂಭಿಸುವ ಅಗತ್ಯವಿದೆ. ವಿಳಂಬ ಮಾಡದೇ ಅಗತ್ಯ ಕ್ರಮ ಕೈಕೊಳ್ಳುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಈ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ನಮ್ಮ ಮನವಿಗೆ ಸ್ಪಂದಿಸಬೇಕು. ಒಂದು ವೇಳೆ ಕೇಂದ್ರ ಆರಂಭಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ವೇಳೆ ಪಕ್ಷಾತೀತ ಹೋರಾಟ ಸಮಿತಿಯ ಬಸವರಾಜ ಜಾಧವ, ಗೌರಮ್ಮ ಬಲೋಗಿ, ಶಿವಾನಂದ ಕವಳಿ, ಧಾರವಾಡ ಧ್ವನಿಯ ಕಾರ್ಯದರ್ಶಿ ಮಂಜು ನಡಟ್ಟಿ, ಸಂತೋಷ ಪಟ್ಟಣಶೆಟ್ಟಿ, ಭೀಮಪ್ಪ ಕಾಸಾಯಿ, ಶರಣಗೌಡ ಗಿರಡ್ಡಿ, ವೆಂಕಟೇಶ ರಾಯ್ಕರ, ಬಸವರಾಜ ಪೊಮೋಜಿ, ಇಮ್ರಾನ್ ತಾಳಿಕೋಟಿ, ಪರಮೇಶ್ವರ ಉಳವಣ್ಣವರ, ಸುರೇಖಾ ಪೂಜಾರ, ರಾಜೇಶ ಮನಗುಂಡಿ, ಶೇಖಪ್ಪ ಕಟ್ಟಿಮನಿ ಇತರರಿದ್ದರು.