ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗುತ್ತಿದ್ದರೂ, ಕೈಗಾರಿಕೆಗಳು ಅಂತರ್ಜಲದ ಮೇಲೆ ಅವಲಂಬಿತವಾಗಿರುವುದನ್ನು ಕಡಿಮೆ ಮಾಡಬೇಕು. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ವಿಫಲವಾದ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕೇಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಂತರ್ಜಲ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿರುವ ಕೆ.ಸಿ. ವ್ಯಾಲಿ ನೀರಿನಿಂದ ಅಂತರ್ಜಲ ಮರುಪೂರಣ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಭಾಗದ ಸುಮಾರು 171 ಕೊಳವೆ ಬಾವಿಗಳ ನೀರಿನ ಮಾದರಿ ಪರೀಕ್ಷಿಸಲಾಗಿದ್ದು, 15 ಬಾವಿಗಳಲ್ಲಿ ನೈಟ್ರೇಟ್ ಮತ್ತು ನೀರಿನ ಗಡಸುತನದ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ ಎಂದರು.ಶುದ್ಧೀಕರಿಸಿದ ನೀರು ಭೂಮಿಯ ವಿವಿಧ ಪದರಗಳ ಮೂಲಕ ಹಾದುಹೋಗುವಾಗ ನೈಸರ್ಗಿಕವಾಗಿ ಸೋಸಲ್ಪಡುವುದರಿಂದ ಆಳವಾದ ಕೊಳವೆ ಬಾವಿಗಳಲ್ಲಿ ಕಲ್ಮಶಗಳಿಲ್ಲದ ನೀರು ಲಭ್ಯವಾಗುತ್ತಿದೆ ಎಂದು ಭೂವಿಜ್ಞಾನಿಗಳು ಸಭೆಗೆ ಮಾಹಿತಿ ನೀಡಿದರು.ಕೈಗಾರಿಕೆಗಳು ಸ್ವಂತ ಮರುಪೂರಣ ಘಟಕಗಳನ್ನು ಹೊಂದಿದ್ದರೂ ಅಂತರ್ಜಲದ ಮೇಲಿನ ಅವಲಂಬನೆ ತಗ್ಗಿಸಿಲ್ಲ. ಉತ್ಪಾದನೆ ಮತ್ತು ಕಾರ್ಮಿಕರ ಸಂಖ್ಯೆ ಹೆಚ್ಚಳದ ನೆಪವೊಡ್ಡಿ ಹೆಚ್ಚಿನ ನೀರು ಬಳಸುವುದನ್ನು ನಿಯಂತ್ರಿಸಬೇಕು ಎಂದರು.ಕೈಗಾರಿಕಾ ಘಟಕಗಳಲ್ಲಿ ಫ್ಲೋ ಮೀಟರ್’ ರೀಡಿಂಗ್ ಮತ್ತು ಟೆಲಿಮೆಟ್ರಿ ದತ್ತಾಂಶ ಪ್ರತಿ ತಿಂಗಳು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಅಂತರ್ಜಲ ಲಭ್ಯತೆ ಆಧರಿಸಿ ಇಂಡೋ ನಿಪ್ಪಾನ್ ಮತ್ತು ಎಎಸ್‌ಕೆ ಆಟೋಮೋಟಿವ್ ಅಂತಹ ಸಂಸ್ಥೆಗಳ ಪ್ರಸ್ತಾವನೆ ನಿಯಮಾನುಸಾರ ವಿಲೇವಾರಿ ಮಾಡಲು ಸೂಚಿಸಲಾಯಿತು.ಪಾಪರಾಜನಹಳ್ಳಿಯ ಅಂತಗಂಗೆ ಬೆಟ್ಟದಲ್ಲಿ ವ?ವಿಡೀ ಹರಿಯುವ ನೈಸರ್ಗಿಕ ಬುಗ್ಗೆಯ ಮೂಲವನ್ನು ವೈಜ್ಞಾನಿಕವಾಗಿ ಪತ್ತೆಹಚ್ಚಲು ಜಿಲ್ಲಾಧಿಕಾರಿ ಸೂಚಿಸಿದರು.ಸಾರ್ವಜನಿಕರು ಈ ಬುಗ್ಗೆಯ ನೀರನ್ನು ಕಲುಷಿತಗೊಳಿಸದಂತೆ ತಡೆಯಲು ಕೂಡಲೇ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಶ್ರೀನಿವಾಸಪುರ ತಾಲ್ಲೂಕು ಅಂತರ್ಜಲ ಅತಿಯಾದ ಬಳಕೆಯ ಪಟ್ಟಿಯಲ್ಲಿರುವುದರಿಂದ ಅಲ್ಲಿ ಹೊಸ ಕೊಳವೆ ಬಾವಿಗಳಿಗೆ ಅನುಮತಿ ನೀಡುತ್ತಿಲ್ಲ. ಆದರೆ, ಸರ್ಕಾರದ ’ಗಂಗಾ ಕಲ್ಯಾಣ’ ಯೋಜನೆಗೆ ಮಾತ್ರ ವಿನಾಯಿತಿ ನೀಡಲಾಗಿದೆ. ರೀ-ಡ್ರಿಲ್ಲಿಂಗ್ ಕಾಮಗಾರಿಗಳಲ್ಲಿ ಕಂಡುಬಂದಿರುವ ತಾಂತ್ರಿಕ ಲೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಲಾಯಿತು.ಸಭೆಯಲ್ಲಿ ವಿವಿಧ ಅಭಿವೃದ್ಧಿ ನಿಗಮಗಳ ಕೊಳವೆ ಬಾವಿ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಅಂಬೇಡ್ಕರ್ ಅಭಿವೃದ್ಧಿ ನಿಗಮ: ೩೮೦ ಬಾವಿಗಳು. ದೇವರಾಜ ಅರಸು ಅಭಿವೃದ್ಧಿ ನಿಗಮ: ೨೬೮ ಬಾವಿಗಳು. ಭೋವಿ ಅಭಿವೃದ್ಧಿ ನಿಗಮ: ೪೬ ಬಾವಿಗಳು. ಜಿಲ್ಲೆಯಲ್ಲಿ ಬಳಕೆಯಾಗದ ಅಥವಾ ವಿಫಲವಾದ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ತೆರೆದ ಬಾವಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು ಮತ್ತು ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಸಭೆಯಲ್ಲಿ ಜಿಪಂ ಸಿಇಓ ಡಾ.ಪ್ರವೀಣ್ ಪಿ. ಬಾಗೇವಾಡಿ, ಹಿರಿಯ ಭೂವಿಜ್ಞಾನಿ ತಿಪ್ಪೆಸ್ವಾಮಿ, ಯೋಜನಾ ನಿರ್ದೇಶಕಿ ಅಂಬಿಕಾ ಇದ್ದರು.