ರಾಗಿಗುಡ್ಡಕ್ಕೆ ನಿರ್ಬಂಧ<bha>;</bha> ಹೈಕೋರ್ಟ್ ನಲ್ಲಿ ಪ್ರಶ್ನಿಸುವೆ?
2 Min read
Author : KannadaprabhaNewsNetwork
Published : Oct 19 2023, 12:46 AM IST
Share this Article
FB
TW
Linkdin
Whatsapp
18ಕೆಡಿವಿಜಿ4-ದಾವಣಗೆರೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha
Image Credit: KP
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಪ್ರಶ್ನೆ । ಶಿವಮೊಗ್ಗ ಜಿಲ್ಲೆ ಪ್ರವೇಶ ನಿರ್ಬಂಧ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಸ್ಪಷ್ಟ
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಪ್ರಶ್ನೆ । ಶಿವಮೊಗ್ಗ ಜಿಲ್ಲೆ ಪ್ರವೇಶ ನಿರ್ಬಂಧ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಸ್ಪಷ್ಟ ಕನ್ನಡಪ್ರಭ ವಾರ್ತೆ ದಾವಣಗೆರೆ ಶಿವಮೊಗ್ಗ ರಾಗಿಗುಡ್ಡದ ಸಂತ್ರಸ್ತ ಹಿಂದೂಗಳ ಮನೆಗೆ ಭೇಟಿ ನೀಡಿ, ಆತ್ಮಸ್ಥೈರ್ಯ ತುಂಬಲು ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ತಮ್ಮನ್ನು ನಡುರಾತ್ರಿ 50ಕ್ಕೂ ಹೆಚ್ಚು ಪೊಲೀಸರು, ಅಧಿಕಾರಿಗಳು ಮಾಸ್ತಿಕಟ್ಟೆ ಬಳಿ ಬಸ್ ನಿಂದ ಇಳಿಸಿ, ದಾವಣಗೆರೆಗೆ ಬುಧವಾರ ಬೆಳಗಿನ ಜಾವ ತಂದು ಬಿಟ್ಟಿದ್ದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಎಚ್ಚರಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಗಿಗುಡ್ಡದ ಸಂತ್ರಸ್ತ ಹಿಂದೂಗಳಿಗೆ ಧೈರ್ಯ ತುಂಬುವುದು ಪೂರ್ವ ನಿರ್ಧರಿತ ಕಾರ್ಯಕ್ರಮವಾಗಿತ್ತು. ಆದರೆ, ಶಿವಮೊಗ್ಗ ಪೊಲೀಸರು ಅಕ್ಟೋಬರ್ ಅಂತ್ಯದವರೆಗೂ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧವಿದೆ ಎಂದು ಮಾಸ್ತಿಕಟ್ಟೆ ಬಳಿ ತಡೆದು, ನನಗೆ ದಾವಣಗೆರೆಗೆ ಬಿಟ್ಟು ಹೋಗಿದ್ದನ್ನು ಹೈಕೋರ್ಟ್‌ನಲ್ಲಿ ಶಿವಮೊಗ್ಗದ ಆ ಎಲ್ಲಾ ಅಧಿಕಾರಿಗಳನ್ನೂ ಪ್ರಶ್ನಿಸಲಿದ್ದೇನೆ ಎಂದರು. ರಾಗಿಗುಡ್ಡಕ್ಕೆ ಯಾವುದೇ ಸಭೆ, ಸಮಾರಂಭಕ್ಕೆ ನಾನು ಹೋಗುತ್ತಿರಲಿಲ್ಲ. ತಮ್ಮನ್ನು ಶಿವಮೊಗ್ಗ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಿಸಿರುವ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಮತ್ತೊಮ್ಮೆ ಸ್ಪಷ್ಟವಾಗಿದೆ. ಕೊಯಮತ್ತೂರು ಸರಣಿ ಸ್ಪೋಟದ ಉಗ್ರ ಅಬ್ದುಲ್ ನಾಜೀರ ಮಜನಿಗೆ ತಂದೆ ಅನಾರೋಗ್ಯ, ಕುಟುಂಬದಲ್ಲಿ ಯಾರದ್ದೋ ಮದುವೆಯೆಂದು ಜಾಮೀನು ಕೊಟ್ಟು ರಕ್ಷಣೆಯಲ್ಲಿ ಕರೆದೊಯ್ಯುವ ಕಾಂಗ್ರೆಸ್ ಸರ್ಕಾರ ಒಬ್ಬ ಹಿಂದೂ ಸಂಘಟನೆ ಮುಖಂಡ, ಕಾರ್ಯಕರ್ತನಾಗಿ ನಾನು ಶಿವಮೊಗ್ಗಕ್ಕೆ ಕಾಲಿಡದಂತೆ ತಡೆದಿದೆ. ಆದರೆ, ಭಯೋತ್ಪಾದಕರು ಎಲ್ಲಿಗೆ ಬೇಕಾದರೂ ಕಾಂಗ್ರೆಸ್ ಆಳ್ವಿಕೆಯಲ್ಲಿ ಹೋಗಬಹುದು ಎಂದು ಕಿಡಿಕಾರಿದರು. ಬ್ಯಾನರ್ ಹಾಕಿದವರ ಇನ್ನೂ ಬಂಧಿಸಿಲ್ಲ: ಶಿವಮೊಗ್ಗದಲ್ಲಿ ಈಚೆಗೆ ಗೋರಿಯಿಂದ ಔರಂಗಜೇಬ್ ಹೊರ ಬಂದಿದ್ದಾನೆ. ಹಿಂದೂಗಳ ಮಾರಣ ಹೋಮ, ಕಾಶಿ ವಿಶ್ವನಾಥನ ಮಂದಿರ ನಾಶ, ದೇವಸ್ಥಾನಗಳು, ದೇವರ ವಿಗ್ರಹಗಳ ನಾಶಪಡಿಸಿ, ತನ್ನ ಸ್ವಂತ ತಂದೆ ಷಹಜಹಾನ್, ಸಹೋದರರನ್ನು ಕೊಂದ ನೀಚ, ಕ್ರೂರಿ ಔರಂಗಜೇಬನ ಚಿತ್ರವನ್ನ ಅಖಂಡ ಭಾರತದ ಭೂಪಟದಲ್ಲಿ ವಿಜೃಂಭಿಸುವಂತೆ ಬ್ಯಾನರ್ ಹಾಕಿದವರ ಶಿವಮೊಗ್ಗ ಪೊಲೀಸರು ಇನ್ನೂ ಬಂಧಿಸಿಲ್ಲ. ಸ್ವತಃ ಶಿವಮೊಗ್ಗ ಎಸ್ಪಿ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೇಲೆ ಮತಾಂಧರು ಕಲ್ಲು ತೂರಾಟ ನಡೆಸಿದ್ದಾರೆ. ಎಸ್ಪಿಗೆ ಅಲ್ಲಿ ಸುರಕ್ಷತೆ ಇಲ್ಲವೆಂದರೆ ಬೇರೆ ಯಾರಿಗೆ ರಕ್ಷಣೆ ನೀಡುತ್ತಾರೆ? ಎಂದು ಆಕ್ರೋಶ ಹೊರ ಹಾಕಿದರು. ನವೆಂಬರ್ ಮೊದಲ ವಾರ ಭೇಟಿ ನೀಡುವೆ: ನವೆಂಬರ್ ಮೊದಲ ವಾರವೇ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿ, ಶಾಂತಿಯುತವಾಗಿ ಅಲ್ಲಿನ ಹಿಂದೂಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತೇನೆ. ಅಲ್ಲದೇ, ತಮ್ಮ ವಿರುದ್ಧ ಮುಕ್ತಾಯವಾಗಿರುವ ಕೇಸ್‌ಗಳನ್ನೂ ತೋರಿಸಿ, ಶಿವಮೊಗ್ಗ ಪ್ರವೇಶಕ್ಕೆ ನಿರ್ಬಂಧಿಸಿದ ಪ್ರತಿಯೊಬ್ಬ ಅಧಿಕಾರಿಗಳನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಪ್ರಮೋದ ಮುತಾಲಿಕ್ ಎಚ್ಚರಿಸಿದರು. ಶ್ರೀರಾಮ ಸೇನೆ ಮುಖಂಡರಾದ ಪರಶುರಾಮ ನಡುಮನಿ, ಮಣಿ ಸರ್ಕಾರ, ಸಾಗರ್, ರಾಹುಲ್, ಅನಿಲ್ ಸುರ್ವೆ, ಶ್ರೀಧರ್, ಮಧು, ಶ್ರೀಧರ್, ಸಿದ್ಧಾರ್ಥ, ವಿನಯ್, ರಘು ಇತರರಿದ್ದರು. ................................ ಹಾಡು ಹಾಕಬೇಡಿ ಎನ್ನಲು ಇವರ್‍ಯಾರು? ದಾವಣಗೆರೆ: ನಗರದ ಬಸವರಾಜ ಪೇಟೆ ಶ್ರೀ ಗಣೇಶ ಮೆರವಣಿಗೆ ವೇಳೆ ಡಿಜೆ ಹಾಕಬೇಡಿ, ಬನಾಯೇಂಗೆ ಮಂದಿರ್ ಹಾಡು ಹಾಕಬೇಡಿ ಅನ್ನಲು ಇವರೆಲ್ಲಾ ಯಾರ್ರೀ? ಸಾವಿರಾರು ಮುಸ್ಲಿಮರು ಮೆರವಣಿಗೆಗೆ ಅಡ್ಡಿಪಡಿಸಿದ್ದ ವೇಳೆ ಪೊಲೀಸರು ಅಂತಹವರ ಮೇಲೆ ಲಾಠಿಚಾರ್ಜ್ ಮಾಡದೇ, ಶಾಂತಿಯುತವಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಹಿಂದೂ ಯುವಕರ ಮೇಲೆ ಲಾಠಿ ಬೀಸಿದ್ದಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು: ಕಾಂಗ್ರೆಸ್ ಸರ್ಕಾರ ಪಿಎಫ್‌ಐ ಸೇರಿ ಮುಸ್ಲಿಂ ಕಿಡಿಗೇಡಿಗಳ ವಿರುದ್ಧ ದಾಖಲಾದ ಕೇಸ್‌ಗಳನ್ನು ಹಿಂಪಡೆಯಲು ಮುಂದಾಗಿರುವುದು ಸರಿಯಲ್ಲ. ಹೀಗೆ ಕಿಡಿಗೇಡಿಗಳ ಕೇಸ್ ಗಳ ಹಿಂಪಡೆಯುತ್ತಿರುವುದು ಅಪರಾಧ. ಸ್ವತಃ ಕಾಂಗ್ರೆಸ್ ಸರ್ಕಾರವೋ ಅಪರಾಧ ಕೃತ್ಯಗಳಿಗೆ, ಗಲಭೆಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಪ್ರಮೋದ ಮುತಾಲಿಕ್ ಎಚ್ಚರಿಸಿದರು. .............
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.