ಸಾರಾಂಶ
ಗದಗ: ಕಳೆದ ಬಾರಿ ಗದಗ ಜಿಲ್ಲೆಯ ಪಿಯುಸಿ ಫಲಿತಾಂಶ ಕ್ಷೀಣಿಸಿದ್ದರಿಂದ ಇಲ್ಲಿನ ಉಪನ್ಯಾಸಕರು ಆತಂಕಗೊಳ್ಳುವ ಅಗತ್ಯವಿಲ್ಲ, ಈ ಬಾರಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಗದಗ ಜಿಲ್ಲೆಯ ಫಲಿತಾಂಶ ಒಂದಂಕಿಗೆ ತರುವ ನಿಟ್ಟಿನಲ್ಲಿ ಉಪನ್ಯಾಸಕರು ಗಮನ ಹರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗ ಬಂಡು ಮಸನಾಯ್ಕ ಹೇಳಿದರು.
ಅವರು ನಗರದ ಮನೋರಮಾ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಶಾಲಾ ಶಿಕ್ಷಣ (ಪಪೂ) ಇಲಾಖೆ ಹಾಗೂ ಜಿಲ್ಲಾ ಪಪೂ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಸಂಯುಕ್ತಾಶ್ರದಲ್ಲಿ ಜರುಗಿದ ಕನ್ನಡ ಭಾಷಾ ವಿಷಯದ ಉಪನ್ಯಾಸಕರ ಒಂದು ದಿನದ ಪುನಶ್ಚೇತನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಕನ್ನಡ ಭಾಷಾ ಉಪನ್ಯಾಸಕರಿಗಾಗಿ ನಡೆದಿರುವ ಈ ಪುನಶ್ಚೇತನ ತರಬೇತಿ ಶಿಬಿರ ಜ್ಞಾನಿಗಳ-ವಾಗ್ಮಿಗಳ ಸಮಾಗಮವಾಗಿದೆ. ಉಪನ್ಯಾಸಕರು ಜೀವನದಲ್ಲಿ ಸದಾ ವಿದ್ಯಾರ್ಥಿಯಾಗಿರಬೇಕಿದ್ದು, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬೋಧನಾ ಕೌಶಲ್ಯ ನವೀಕರಣಗೊಳಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆ ವಿದ್ಯಾರ್ಥಿಗಳ ಮನಗೆಲ್ಲುವ ಸವಾಲು ಉಪನ್ಯಾಸಕರ ಎದುರಿಗೆ ಇದ್ದು, ಉಪನ್ಯಾಸಕರ ವ್ಯಕ್ತಿತ್ವ ಸಹ ಮಾದರಿಯಾಗಿರಬೇಕು ಎಂದರು.
ಜಿಲ್ಲಾ ಪಪೂ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಂ.ಸಿ. ಕಟ್ಟಿಮನಿ ಮಾತನಾಡಿ, ಗದಗ ಜಿಲ್ಲೆಯ ಪಿಯು ಫಲಿತಾಂಶ ಸುಧಾರಣೆಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸುದೀರ್ಘ ಸಭೆ ನಡೆದಿದ್ದು, ಉಪನ್ಯಾಸಕರ ಸಲಹೆ-ಅಶೋತ್ತರಗಳ ವರದಿ ನೀಡಲಾಗಿದೆ. ಕನ್ನಡ ಭಾಷಾ ಉಪನ್ಯಾಸಕರು ಸೇರಿದಂತೆ ಗದುಗಿನ ಪಿಯು ಉಪನ್ಯಾಸಕರ ಸತತ ಪರಿಶ್ರಮದಿಂದ ಫಲಿತಾಂಶ ಉತ್ತಮಗೊಳಿಸೋಣ ಎಂದರು.ಈ ವೇಳೆ ಜಿಲ್ಲಾ ಪಪೂ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮಾತನಾಡಿದರು.
ಚಾಮರಾಜನಗರದ ಆಲೂರಿನ ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲ ಡಾ. ತಿಮ್ಮರಾಜು, ಚಿಕ್ಕಮಗಳೂರು ಬಸವನಹಳ್ಳಿಯ ಕನ್ನಡ ಉಪನ್ಯಾಸಕ ಡಾ. ಎಚ್.ಎಸ್ ಸತ್ಯನಾರಾಯಣ ಹಾಗೂ ಡಾ. ಸಿದ್ಧರಾಮ ಖಾನಾಪುರ ತರಬೇತಿ ನೀಡಿದರು.ಕಳೆದ ಸಾಲಿನ ಪಿಯು ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ನೂರಕ್ಕೆ ನೂರು ಫಲಿತಾಂಶ ನೀಡಿದ ಕಾಲೇಜುಗಳ ಕನ್ನಡ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಕನ್ನಡ ಭಾಷೆಯಲ್ಲಿ ಉತ್ತೀರ್ಣವಾಗಲು ನೆರವಾಗುವಂತ ಕೈಪಿಡಿ ಬಿಡುಗಡೆ ಮಾಡಲಾಯಿತು.
ಮನೋರಮಾ ಕಾಲೇಜಿನ ಚೇರಮನ್ ನರಸಿಂಹ ಕುಡ್ತರಕರ, ಗೌರವಾಧ್ಯಕ್ಷ ಸತೀಶ್ ಪಾಶಿ ಸೇರಿದಂತೆ ಇತರರು ಇದ್ದರು. ಎಫ್.ಎನ್. ಹುಡೇದ ನಿರೂಪಿಸಿದರು. ಎಸ್.ಎಚ್. ಮಲ್ಲಾಪೂರ ವಂದಿಸಿದರು.