ಮಧು ಬಂಗಾರಪ್ಪಗೆ ಫಲಿತಾಂಶವೇ ಉತ್ತರ: ಸಂಸದ ರಾಘವೇಂದ್ರ

| Published : Mar 12 2024, 02:03 AM IST

ಮಧು ಬಂಗಾರಪ್ಪಗೆ ಫಲಿತಾಂಶವೇ ಉತ್ತರ: ಸಂಸದ ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನವರು ಮೊದಲು ಅವರ ಐಎನ್‌ಡಿಐಎ ಟೀಮ್ ಎಲ್ಲಿದೆ ಎಂದು ಹುಡುಕಿಕೊಳ್ಳಲಿ. ಅದನ್ನು ಬಿಟ್ಟು ಬಿಜೆಪಿ ಎ ಟೀಂ, ಬಿ ಟೀಂ ಅಂತ ನಮ್ಮ ಬಗ್ಗೆ ಯೋಚನೆ ಮಾಡೋದು ಬೇಡ. ಕಾಂಗ್ರೆಸ್‌ನವರು ಅವರ ಪಕ್ಷದ ಬಗ್ಗೆ ಯೋಚನೆ ಮಾಡಬೇಕು. ಮಧು ಬಂಗಾರಪ್ಪ ಅವರ ಹಣ ಸಾಗಾಟ ಹೇಳಿಕೆ ಅಸಹ್ಯ ಅನಿಸುತ್ತದೆ. ಬಂಗಾರಪ್ಪನವರ ಮಗನ ಬಾಯಲ್ಲಿ ಈ ರೀತಿ ಹಗುರ ಮಾತು ಬರಬಾರದು ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸಂಸದ ರಾಘವೇಂದ್ರ ಶಿವಮೊಗ್ಗದಲ್ಲಿ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕಾಂಗ್ರೆಸ್‌ನವರು ಮೊದಲು ಅವರ ಐಎನ್‌ಡಿಐಎ ಟೀಮ್ ಎಲ್ಲಿದೆ ಎಂದು ಹುಡುಕಿಕೊಳ್ಳಲಿ. ಅದನ್ನು ಬಿಟ್ಟು ಬಿಜೆಪಿ ಎ ಟೀಂ, ಬಿ ಟೀಂ ಅಂತ ನಮ್ಮ ಬಗ್ಗೆ ಯೋಚನೆ ಮಾಡೋದು ಬೇಡ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸಂಸದ ರಾಘವೇಂದ್ರ ತಿರುಗೇಟು ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ನವರು ಅವರ ಪಕ್ಷದ ಬಗ್ಗೆ ಯೋಚನೆ ಮಾಡಬೇಕು. ಮಧು ಬಂಗಾರಪ್ಪ ಅವರ ಹಣ ಸಾಗಾಟ ಹೇಳಿಕೆ ಅಸಹ್ಯ ಅನಿಸುತ್ತದೆ. ಬಂಗಾರಪ್ಪನವರ ಮಗನ ಬಾಯಲ್ಲಿ ಈ ರೀತಿ ಹಗುರ ಮಾತು ಬರಬಾರದು. ಆ ರೀತಿಯ ಚುನಾವಣೆ ಅನುಭವ ಅವರಿಗೆ ಇರಬೇಕು ಎಂದು ಹರಿಹಾಯ್ದರು.

ದುಡ್ಡಿನಲ್ಲಿ ಚುನಾವಣೆ ನಡೆಸುವ ಅವಶ್ಯಕತೆ ನಮಗಿಲ್ಲ. ನನ್ನ ಬಗ್ಗೆ ಒಂದು ಬೆರಳು ತೋರಿಸಿದರೆ ಅವರ ಬಗ್ಗೆ ನಾಲ್ಕು ಬೆರಳು ತೋರಿಸುತ್ತದೆ. ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ರಾಘವೇಂದ್ರ ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಮತದಾರರು ಮೂರು ಬಾರಿ ಉತ್ತರ ಕೊಟ್ಟಿದ್ದಾರೆ. ಈ ಬಾರಿಯೂ ಮಧು ಬಂಗಾರಪ್ಪ ಪ್ರಶ್ನೆಗೆ ಮತದಾರರು ಉತ್ತರ ಕೊಡುತ್ತಾರೆ ಎಂದು ಕುಟುಕಿದರು.

ಒಳ್ಳೆಯ ಕೆಲಸ ಮಾಡಿದರೆ ಜನ ಆಶೀರ್ವಾದ ಮಾಡುತ್ತಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರು ನಾವು. ತಪ್ಪು ಮಾಡಿದವರನ್ನು ಜನರು ಮೂಲೆಗೆ ಕೂರಿಸುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಶಕ್ತಿ. ನನಗೂ ಕೂಡ ಮಧು ಬಂಗಾರಪ್ಪ ಅವರ ಭಾಷೇಲಿ ಮಾತನಾಡಲು ಬರುತ್ತೆ. ಆ ರೀತಿ ಮಾತನಾಡುವ ಅವಶ್ಯಕತೆ ನಮಗಿಲ್ಲ. ಚುನಾವಣಾ ಫಲಿತಾಂಶದ ಮೂಲಕ ಅವರಿಗೆ ಉತ್ತರ ಕೊಡುತ್ತೇನೆ. ಮೋದಿ ಗ್ಯಾರಂಟಿ ಎಂದರೆ ಬೇಳೆಕಾಳು ಅಲ್ಲ. ಹತ್ತು ವರ್ಷದಲ್ಲಿ ದೇಶದ ಅಭಿವೃದ್ಧಿಯನ್ನು ನಾವು ಮಾಡಿದ್ದೇವೆ ಎಂದು ಖಾರವಾಗಿ ಹೇಳಿದರು.

ಲೋಕಸಭಾ ಟಿಕೆಟ್ ಗೊಂದಲಕ್ಕೆ ಇವತ್ತು ಅಥವಾ ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ. ಕೇಂದ್ರದ ಹಾಗೂ ರಾಜ್ಯದ ನಾಯಕರು ಒಟ್ಟಾಗಿ ಕೂತು ಚರ್ಚೆ ನಡೆಸುತ್ತಿದ್ದಾರೆ. ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಕಾರಣ ಆಕಾಂಕ್ಷಿಗಳು ಹೆಚ್ಚಾಗಿ ಇರುತ್ತಾರೆ. ಬೇಸರ ವ್ಯಕ್ತಪಡಿಸುತ್ತಿರುವವರನ್ನು ಕರೆದು ಕೂರಿಸಿ, ಹಿರಿಯ ನಾಯಕರು ಸಮಾಧಾನ ಪಡಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

- - - -11ಎಸ್‌ಎಂಜಿಕೆಪಿ09: ಬಿ.ವೈ.ರಾಘವೇಂದ್ರ, ಸಂಸದ