ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ : ಪತ್ನಿ ಪಲ್ಲವಿ ಬಂಧನ

| N/A | Published : Apr 22 2025, 01:47 AM IST / Updated: Apr 22 2025, 08:42 AM IST

ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ : ಪತ್ನಿ ಪಲ್ಲವಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ ಪ್ರಕರಣ ಸಂಬಂಧ ಪತ್ನಿ ಪಲ್ಲವಿಯನ್ನು (64) ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ ಪ್ರಕರಣ ಸಂಬಂಧ ಪತ್ನಿ ಪಲ್ಲವಿಯನ್ನು (64) ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಘಟನೆ ಬಳಿಕ ಪಲ್ಲವಿ ಮತ್ತು ಆಕೆಯ ಪುತ್ರಿ ಕೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಪತಿ ಓಂ ಪ್ರಕಾಶ್‌ ಅವರನ್ನು ತಾನೇ ಕೊಲೆ ಮಾಡಿದ್ದಾಗಿ ಪಲ್ಲವಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇನ್ನು ಘಟನೆ ವೇಳೆ ಮನೆಯಲ್ಲೇ ಇದ್ದ ಪುತ್ರಿ ಕೃತಿ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಕೃತಿಯನ್ನು ಪೊಲೀಸರು ಬಂಧಿಸದೆ ಕೇವಲ ವಿಚಾರಣೆಗೆ ಒಳಪಡಿಸಿದ್ದಾರೆ.

ಸ್ಥಳ ಮಹಜರು: ಸೋಮವಾರ ಸಂಜೆ ಪೊಲೀಸರು ಪಲ್ಲವಿಯನ್ನು ಎಚ್‌ಎಸ್‌ಆರ್‌ ಲೇಔಟ್‌ನ ಮನೆಗೆ ಕರೆತಂದು ಘಟನಾ ಸ್ಥಳದ ಮಹಜರು ನಡೆಸಿದರು. ಪೊಲೀಸರು ಮಹಜರ್‌ಗೆ ಕರೆತರುವ ವೇಳೆ ಡೊಮೆಸ್ಟಿಕ್‌ ವೈಲೆನ್ಸ್‌ ಎನ್ನುವ ಮೂಲಕ ಪಲ್ಲವಿ ಪೊಲೀಸರ ಹೊಯ್ಸಳ ವಾಹನ ಏರಿ ಕುಳಿತರು. ಇದಕ್ಕೂ ಮುನ್ನ ಬೆಳಗ್ಗೆ ಪೊಲೀಸರು ಹಾಗೂ ಎಫ್‌ಎಸ್ಎಲ್‌ ತಂಡ ಘಟನಾ ಸ್ಥಳದಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿತು.

ಗನ್‌ ತೋರಿಸಿ ಹೆದರಿಸಿದರು:

ಕೌಟುಂಬಿಕ ಸೇರಿ ಕೆಲ ವಿಚಾರಗಳ ಸಂಬಂಧ ಹಲವು ದಿನಗಳಿಂದ ಮನೆಯಲ್ಲಿ ಗಲಾಟೆಯಾಗುತ್ತಿತ್ತು. ಸೋಮವಾರ ಬೆಳಗ್ಗೆ ಸಹ ಪತಿ ಓಂ ಪ್ರಕಾಶ್‌ ಜತೆಗೆ ಜಗಳವಾಗಿತ್ತು. ಈ ವೇಳೆ ಅವರು ನನಗೆ ಮತ್ತು ಮಗಳಿಗೆ ಗನ್‌ ತೋರಿಸಿ ಹೆದರಿಸಿದ್ದರು. ಬಳಿಕ ನಾವು ಸುಮ್ಮನಾಗಿದ್ದೆವು. ಮಧ್ಯಾಹ್ನ ಊಟ ಮಾಡುವಾಗ ಮತ್ತೆ ಜಗಳ ಶುರುವಾಯಿತು. ಜಗಳ ವಿಕೋಪಕ್ಕೆ ತಿರುಗಿದಾಗ ಚಾಕು ತೆಗೆದು ಹಲವು ಬಾರಿ ಇರಿದೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಪತಿ ಓಂ ಪ್ರಕಾಶ್‌ ಮೃತಪಟ್ಟರು ಎಂದು ಪ್ರಾಥಮಿಕ ವಿಚಾರಣೆ ವೇಳೆ ಪಲ್ಲವಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣ ಸಿಸಿಬಿಗೆ ವರ್ಗಾವಣೆ:

ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಕ್ಕೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೋಮವಾರ ಆದೇಶಿಸಿದ್ದಾರೆ. ಇನ್ನು ಮುಂದೆ ಸಿಸಿಬಿ ಅಧಿಕಾರಿಗಳು ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಲಿದ್ದಾರೆ. ಸದ್ಯ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದಾರೆ.