ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾರ್ಮಿಕರಿಗೆ ಅನುಕೂಲವಾಗಲು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ತೆರೆದಿದ್ದ ಎಂಡಿಸಿಸಿ ಬ್ಯಾಂಕ್ ಮುಚ್ಚದಂತೆ ಒತ್ತಾಯಿಸಿ ಕಾರ್ಖಾನೆ ನಿವೃತ್ತ ನೌಕರರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಎದುರು ಸೇರಿದ ನಿವೃತ್ತ ನೌಕರರು ಈಗಿನ ಆಡಳಿತ ಮಂಡಳಿಯಾದ ನಿರಾಣಿ ಶುಗರ್ಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಹಿಂದಿನ ಆಡಳಿತ ಮಂಡಳಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರ ಆರ್ಥಿಕ ವ್ಯವಹಾರ ನಡೆಸಲು ಪಿಎಸ್‌ಎಸ್‌ಕೆ ಎಂಡಿಸಿಸಿ ಬ್ಯಾಂಕ್ ಸಹಕಾರದಲ್ಲಿ ಬ್ಯಾಂಕ್ ಆರಂಭಿಸಿದ್ದರು. ಅಂದಿನಿಂದಲೂ ಅಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು, ನಿವೃತ್ತ ಕಾರ್ಮಿಕರು ಬ್ಯಾಂಕ್‌ನಲ್ಲಿ ವ್ಯವಹರಿಸಿಕೊಂಡು ಬಂದಿದ್ದಾರೆ. ಆದರೆ, ಈಗ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಷುಗರ್ಸ್ ನವರು ಕಾರ್ಮಿಕರ ಬ್ಯಾಂಕ್ ಸರಿಯಾಗಿ ನಿರ್ವಹಣೆ ಮಾಡದೆ ಮುಚ್ಚುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೊದಲಿಂದಲೂ ವ್ಯವಹರಿಸಿಕೊಂಡು ಬಂದಿರುವ ಕಾರ್ಮಿಕರಿಗೆ ಇದರಿಂದ ಅನಾನೂಕೂಲ ಉಂಟಾಗಲಿದೆ. ಈಗ ಕೆಲಸ ಮಾಡುತ್ತಿರುವ ನೌಕರರಿಗೂ ತೊಂದರೆಯಾಗಲಿದೆ. ಈಗಿನ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ಕಾರ್ಮಿಕ ಬ್ಯಾಂಕ್ ಮುಚ್ಚಬಾರದು. ಮುಚ್ಚಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಸಂತೋಷ್ ಅವರು, ಕಾರ್ಖಾನೆ ನಿವೃತ್ತ ನೌಕರರ ಮನವಿಯನ್ನು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ನಿವೃತ್ತ ನೌಕರರ ಎಂ.ನಂಜೇಗೌಡ, ಬೋರೇಗೌಡ, ಸರೋಜಮ್ಮ, ಜಯಮ್ಮ, ನಿಂಗೇಗೌಡ, ಕರೀಗೌಡ, ಕೆಂಪೇಗೌಡ, ಎಚ್.ನಿಂಗೇಗೌಡ, ಭಾಗ್ಯಮ್ಮ, ಶಿವಮ್ಮ ಲಕ್ಷ್ಮಮ್ಮ, ಚಿಕ್ಕತಾಯಮ್ಮ, ಗಂಗಾಧರ್, ನರಸಿಂಹೇಗೌಡ, ಸೇರಿದಂತೆ ಅನೇಕ ಕಾರ್ಮಿಕರು ಇದ್ದರು.
ನ.11ರಂದು ನೇಮಕಾತಿ ಅಭಿಯಾನಪಾಂಡವಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನ.11ರಂದು ಪುಟ್ಟಣ್ಣಯ್ಯ ಫೌಂಡೇಶನ್ ಹಾಗೂ ಟೆಕ್ನೋಟಾಸ್ಕ್ ಸಂಸ್ಥೆಯಿಂದ ನೇಮಕಾತಿ ಅಭಿಯಾನ ನಡೆಯಲಿದೆ.
ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ನಡೆಯಲಿರುವ ಅಭಿಯಾನದಲ್ಲಿ ಪಿಯುಸಿ, ಡಿಪ್ಲೋಮಾ, ಪದವಿ ಪೂರೈಸಿರುವ, ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು ಹಾಗೂ ಮಾತನಾಡಲು ಬಲ್ಲ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದು.ಸ್ಥಳೀಯವಾಗಿ ಉದ್ಯೋಗ ಕಲ್ಪಿಸಬೇಕು, ನಮ್ಮ ನೆಲದ ಕೌಶಲ್ಯವನ್ನು ಇಲ್ಲೇ ಉಳಿಸಿಕೊಳ್ಳಬೇಕೆಂಬುದು ನಮ್ಮ ಪ್ರಯತ್ನ. ಈ ನಿಟ್ಟಿನಲ್ಲಿ ಪಾಂಡವಪುರದಲ್ಲಿ ಆರಂಭವಾಗುತ್ತಿರುವ ಟೆಕ್ನೋಟಾಸ್ಕ್ ಕಾಂಟ್ಯಾಕ್ಟ್ ಸೆಂಟರ್ ನಲ್ಲಿ ಉದ್ಯೋಗ ಸಿಗುವಂತಾಗಲಿ ಎಂಬುದು ಪುಟ್ಟಣ್ಣಯ್ಯ ಫೌಂಡೇಶನ್ ಆಶಯ’ ಎಂದು ಫೌಂಡೇಶನ್ ಕಾರ್ಯಕಾರಿ ನಿರ್ದೇಶಕ ರಣಜಿತ್ ನಾಗರಾಜೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.