ಸಾರಾಂಶ
ನಿವೃತ್ತ ಯೋಧ ನಾರಾಯಣ ರೈ ಅವರು ಹಾರೆ ಹಾಗೂ ಕತ್ತಿಯಿಂದ ಚರಂಡಿಯ ಹೂಳೆತ್ತಿ ಹಾಗೂ ಗಿಡ ಗಂಟಿಗಳನ್ನು ಸ್ವತಃ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹಾದು ಹೋಗುವಂತೆ ಶ್ರಮದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಭಾರಿ ಮಳೆಗೆ ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಬೆವೂರು- ಶಿಮಂತೂರು ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಮಳೆಯ ನೀರು ಹರಿದು ಕೆಸರುಮಯವಾಗಿ ಪರಿಣಮಿಸಿತ್ತು. ಪಂಚಾಯಿತಿಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿವೃತ್ತ ಯೋಧ ನಾರಾಯಣ ರೈ ಅವರು ಹಾರೆ ಹಾಗೂ ಕತ್ತಿಯಿಂದ ಚರಂಡಿಯ ಹೂಳೆತ್ತಿ ಹಾಗೂ ಗಿಡ ಗಂಟಿಗಳನ್ನು ಸ್ವತಃ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹಾದು ಹೋಗುವಂತೆ ಶ್ರಮದಾನ ಮಾಡಿದರು.ಈ ಭಾಗದ ರಸ್ತೆಯ ಜಾರಂದಾಯ ದೈವಸ್ಥಾನದ ದ್ವಾರದ ಬಳಿ ಅವೈಜ್ಞಾನಿಕ ಕಿರು ಮೋರಿ ಕಾಮಗಾರಿಯಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಹೊಂಡಮಯವಾಗಿ ಪರಿಸರದಲ್ಲಿ ಕೃತಕ ನೆರೆ ಉಂಟಾಗಿತ್ತು. ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಕಿಲ್ಪಾಡಿ ರಾಘವೇಂದ್ರ ಮಠದ ಗುಡ್ಡೆಯಿಂದ ಬರುವ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸ್ಥಳೀಯ ವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ನಿವೃತ್ತ ಯೋಧರ ಕಾರ್ಯಕ್ಕೆ ಸ್ಥಳೀಯರು ಶ್ಲಾಘಿಸಿದ್ದಾರೆ.