ಅಡಮಾನ ಸಾಲ ಗ್ರಾಹಕರಿಗೆ ಶೀಘ್ರ ಆಭರಣ ಹಿಂದಿರುಗಿಸಿ

| Published : Sep 13 2025, 02:04 AM IST

ಅಡಮಾನ ಸಾಲ ಗ್ರಾಹಕರಿಗೆ ಶೀಘ್ರ ಆಭರಣ ಹಿಂದಿರುಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಎಸ್‌ಬಿಐ ಬ್ಯಾಂಕಿನಲ್ಲಿ ಆಭರಣ ಅಡಮಾನವಾಗಿ ಸಾಲ ಪಡೆದಿದ್ದ ಗ್ರಾಹಕರು ತಮಗೆ ಬಂಗಾರ ಬೇಕೇ ಬೇಕು ಎಂಬ ಘೋಷಣೆಯೊಂದಿಗೆ ಶುಕ್ರವಾರ ಎಸ್‌ಬಿಐ ಬ್ಯಾಂಕ್‌ ಮುಂದೆ ನೂರಾರು ಗ್ರಾಹಕರು ನ್ಯಾಮತಿಯಲ್ಲಿ ಧರಣಿ ನಡೆಸಿದರು.

- ನ್ಯಾಮತಿಯಲ್ಲಿ ಎಸ್‌ಬಿಐ ಗ್ರಾಹಕರ ಪ್ರತಿಭಟನೆ । ಬ್ಯಾಂಕ್‌ ಸಿಬ್ಬಂದಿ ಸಾಮೂಹಿಕ ವರ್ಗಾವಣೆಗೆ ಒತ್ತಾಯ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಪಟ್ಟಣದ ಎಸ್‌ಬಿಐ ಬ್ಯಾಂಕಿನಲ್ಲಿ ಆಭರಣ ಅಡಮಾನವಾಗಿ ಸಾಲ ಪಡೆದಿದ್ದ ಗ್ರಾಹಕರು ತಮಗೆ ಬಂಗಾರ ಬೇಕೇ ಬೇಕು ಎಂಬ ಘೋಷಣೆಯೊಂದಿಗೆ ಶುಕ್ರವಾರ ಎಸ್‌ಬಿಐ ಬ್ಯಾಂಕ್‌ ಮುಂದೆ ನೂರಾರು ಗ್ರಾಹಕರು ಧರಣಿ ನಡೆಸಿದರು.

ಪಟ್ಟಣದ ನೆಹರೂ ರಸ್ತೆಯ ಭಾರತೀಯ ಸ್ಟೇಟ್‌ ಬ್ಯಾಂಕ್‌ ನ್ಯಾಮತಿ ಶಾಖೆ ವ್ಯವಸ್ಥಾಪಕ ಸುನೀಲ್‌ ಯಾದವ್‌ ನಿರ್ಲಕ್ಷದ ನಡೆಯನ್ನು ಗ್ರಾಹಕರು ಖಂಡಿಸಿದರು. ಗ್ರಾಹಕರು ಆಭರಣ ಅಡವಿಟ್ಟು ಸಾಲ ಪಡೆದಿದ್ದು ಸರಿಯಷ್ಟೆ. ಅಕ್ಟೋಬರ್‌ ತಿಂಗಳು ಬಂದರೆ ಬ್ಯಾಂಕ್‌ ದರೋಡೆ ಪ್ರಕರಣ ಘಟಿಸಿ ಬಂದು ವರ್ಷವಾಗುತ್ತದೆ. ದರೋಡೆ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಗಾರವನ್ನು ಖಜಾನೆಗೆ ನೀಡಿ ತಿಂಗಳುಗಳೇ ಆಗಿವೆ. ಆದರೆ ಗ್ರಾಹಕರಿಗೆ ಇದುವರೆವಿಗೂ ಅಡಮಾನ ಸಾಲದ ಬಂಗಾರ ಕೈ ಸೇರದೇ, ಗ್ರಾಹಕರನ್ನು ಅಲೆದಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಗ್ರಾಹಕರು ಅಡವಿಟ್ಟ ಆಭರಣ ವಾಪಸ್‌ ನೀಡಬೇಕು. ಸಿಬಿಲ್‌ ಸ್ಕೋರ್‌ ಸರಿಪಡಿಸಿ ನ್ಯಾಯ ನೀಡಬೇಕು. ವ್ಯವಸ್ಥಾಪಕ ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವಂತೆ ಗ್ರಾಹಕರು ಆಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ನ್ಯಾಮತಿ ಪೊಲೀಸ್‌ ಠಾಣೆಯ ಪಿಐ ಎನ್‌.ಎಸ್‌.ರವಿ ಆಗಮಿಸಿ, ಗ್ರಾಹಕರ ಸಮಸ್ಯೆ ಪರಿಹರಿಸಲು ಬರುವ ಶುಕ್ರವಾರ ತಾಲೂಕಿನ ಸುರಹೊನ್ನೆ ಗ್ರಾಮದ ಬನಶಂಕರಿ ದೇವಸ್ಥಾನದ ಸಮುದಾಯ ಭವನದಲ್ಲಿ ಸಭೆ ನಡೆಸಲಾಗುವುದು. ಗ್ರಾಹಕರ ಬೇಡಿಕೆಗಳನ್ನು ಕಾನೂನು ನಿಯಮದಂತೆ ಈಡೇರಿಸುವಂತೆ ನ್ಯಾಮತಿ ಎಸ್‌ಬಿಐ ಶಾಖೆ ವ್ಯವಸ್ಥಾಪಕರಿಗೆ ತಿಳಿಸಿದರು.

ಬ್ಯಾಂಕ್‌ ಕಡೆಯಿಂದ ಕಾನೂನು ಅಧಿಕಾರಿ ಪ್ರಭಾಕರ್‌, ವಕೀಲ ಲೀಗಲ್‌ ಅಡ್ವೈಸರ್‌ ರವಿ, ದಾವಣಗೆರೆ ಮ್ಯಾನೇಜರ್‌ ಆನಂದ ನಲುಕುದರೆ, ಆಭರಣ ಅಡಮಾನ ಸಾಲ ಪಡೆದಿದ್ದ ಗ್ರಾಹಕರಾದ ತೀರ್ಥಪ್ಪ, ಮಂಜುನಾಥ, ಕವಿತಮ್ಮ, ಜಯಮ್ಮ, ಮಹೇಶಪ್ಪ, ಸತೀಶ್‌ ಸೇರಿದಂತೆ ಇತರ ಗ್ರಾಹಕರು ಇದ್ದರು.

- - -

(ಕೋಟ್‌) ಗ್ರಾಹಕರು ಬ್ಯಾಂಕ್‌ಗೆ ಬಂದು ವಿಚಾರಿಸಿದರೂ ನ್ಯಾಮತಿ ಬ್ಯಾಂಕ್‌ ಶಾಖೆ ವ್ಯವಸ್ಥಾಪಕ ಸುನೀಲ್‌ ಯಾದವ್‌ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಆಭರಣ ಅಡಮಾನ ಸಾಲಕ್ಕೆ ಬಡ್ಡಿ ಕಟ್ಟುವಂತೆ ಇನ್ನೂ ನೋಟಿಸ್‌ಗಳು ಬರುತ್ತಿವೆ. ನಮಗೆ ಬೇರೆ ಕಡೆ ಸಾಲ ದೊರೆಯದೆ ಅನಾನುಕೂಲವಾಗುತ್ತಿದೆ. ನಮ್ಮ ಸಿಬಿಲ್‌ ಸ್ಕೋರ್‌ ಕೂಡ ಕಡಿಮೆ ಆಗಿರುವುದಕ್ಕೆ ಬ್ಯಾಂಕ್‌ ವ್ಯವಸ್ಥಾಪಕರೇ ನೇರ ಹೊಣೆ.

- ಎಸ್‌ಬಿಐ ಗ್ರಾಹಕರು, ನ್ಯಾಮತಿ ಶಾಖೆ.

- - -

-ಚಿತ್ರ:

ನ್ಯಾಮತಿ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಆಭರಣ ಅಡಮಾನ ಸಾಲ ಪಡೆದಿದ್ದ ಗ್ರಾಹಕರು ಬಂಗಾರ ಬೇಕೇ ಬೇಕು ಎಂಬ ಘೋಷಣೆಯೊಂದಿಗೆ ಎಸ್‌ಬಿಐ ಬ್ಯಾಂಕ್‌ ಮುಂದೆ ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿದರು.