ಪ್ರವಾಸಿ ತಾಣವಾಗಲಿರುವ ರೇವಣಸಿದ್ದೇಶ್ವರ ಗುಡ್ಡ

| Published : Jul 08 2024, 12:41 AM IST

ಸಾರಾಂಶ

ಇಂಗಳೇಶ್ವರ ಗ್ರಾಮದ ರೇವಣಸಿದ್ದೇಶ್ವರ ಗುಡ್ಡವು ಪವಿತ್ರ ಸ್ಥಳವಾಗುವ ಜೊತೆಗೆ ಇತಿಹಾಸ ಪ್ರಸಿದ್ಧವಾಗಿದೆ. ಈ ಗುಡ್ಡದಲ್ಲಿ ಹೆಚ್ಚು ಗಿಡ-ಮರಗಳನ್ನು ನೆಟ್ಟಿರುವುದರಿಂದಾಗಿ ಮುಂಬರುವ ದಿನಗಳಲ್ಲಿ ಇದೊಂದು ಭಕ್ತಿ ತಾಣವಾಗುವ ಜೊತೆಗೆ ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ ಎಂದು ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಇಂಗಳೇಶ್ವರ ಗ್ರಾಮದ ರೇವಣಸಿದ್ದೇಶ್ವರ ಗುಡ್ಡವು ಪವಿತ್ರ ಸ್ಥಳವಾಗುವ ಜೊತೆಗೆ ಇತಿಹಾಸ ಪ್ರಸಿದ್ಧವಾಗಿದೆ. ಈ ಗುಡ್ಡದಲ್ಲಿ ಹೆಚ್ಚು ಗಿಡ-ಮರಗಳನ್ನು ನೆಟ್ಟಿರುವುದರಿಂದಾಗಿ ಮುಂಬರುವ ದಿನಗಳಲ್ಲಿ ಇದೊಂದು ಭಕ್ತಿ ತಾಣವಾಗುವ ಜೊತೆಗೆ ಪ್ರವಾಸಿ ತಾಣವಾಗುವುದರಲ್ಲಿ ಸಂದೇಹವಿಲ್ಲ ಎಂದು ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ರೇವಣಸಿದ್ದೇಶ್ವರ ಸಮುದಾಯ ಭವನದಲ್ಲಿ ಗ್ರಾಮದ ಆರಾಧ್ಯ ದೈವ ಜಗದ್ಗುರು ರೇವಣಸಿದ್ದೇಶ್ವರ ಬೆಳ್ಳಿಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ರೇವಣಸಿದ್ದೇಶ್ವರ ಗುಡ್ಡದಲ್ಲಿರುವ ಅಕ್ಕನಾಗಮ್ಮ ಗುಹೆಯಲ್ಲಿ ಅಕ್ಕನಾಗಮ್ಮ, ಚನ್ನಬಸವಣ್ಣ ಮತ್ತು ಬಸವಣ್ಣನವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನೈಸರ್ಗಿಕ ತಾಣಗಳು ಇಂದಿನ ಒತ್ತಡದ ಬದುಕಿಗೆ ಶಾಂತಿ,ನೆಮ್ಮದಿ ನೀಡುತ್ತವೆ. ಅರಣ್ಯ ಇಲಾಖೆಯ ನೆರವಿನೊಂದಿಗೆ ಇಲ್ಲಿನ ಜನರು ಈ ಗುಡ್ಡದಲ್ಲಿ ಸಸಿಗಳನ್ನು ನೆಟ್ಟಿರುವುದು ಸಂತಸದಾಯಕ ಸಂಗತಿ. ಮುಂಬರುವ ದಿನಗಳಲ್ಲಿ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ನೈಸರ್ಗಿಕ ಸೌಂದರ್ಯ ಸವಿಯುವ ಜೊತೆಗೆ ಆಹ್ಲಾದಕರ ಭಾವ ಮೂಡಿಸಿಕೊಳ್ಳುವದರಲ್ಲಿ ಸಂದೇಹವಿಲ್ಲ. ಈ ಗುಡ್ಡದಲ್ಲಿ ರೇವಣಸಿದ್ದೇಶ್ವರರ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಕಡೆಗೆ ಗಮನ ಹರಿಸಬೇಕು. ತಮ್ಮ ಕಾರ್ಯಕ್ಕೆ ಸದಾ ನಮ್ಮ ಬೆಂಬಲವಿದೆ ಎಂದರು.

ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಅರಣ್ಯ ಇಲಾಖೆಯೊಂದಿಗೆ ಸಂಪರ್ಕಿಸಿ ಈ ಗುಡ್ಡದಲ್ಲಿ ಸಸಿಗಳನ್ನು ನೆಡುವಲ್ಲಿ ಸಹಕಾರ ನೀಡಲಾಗಿದೆ. ಇದೊಂದು ಪ್ರವಾಸಿ ತಾಣ ಮಾಡಲು ಕ್ಷೇತ್ರ ಶಾಸಕ,ಸಚಿವ ಶಿವಾನಂದ ಪಾಟೀಲರು ಮುತುವರ್ಜಿ ವಹಿಸಿದ್ದಾರೆ ಎಂದರು.

ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಬಸವೇಶ್ವರರ ಕೃಪಾಶೀರ್ವಾದದಿಂದ ನಮ್ಮ ತಂದೆಯವರು ಈ ಭಾಗದಿಂದ ಶಾಸಕರಾಗಿ ಆಯ್ಕೆಯಾಗುವ ಜೊತೆಗೆ ಸಚಿವರಾಗಿ ರಾಜ್ಯದ, ಮತಕ್ಷೇತ್ರದ ಜನರ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ತಂದೆಯವರು ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಮತಕ್ಷೇತ್ರದ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿಯೂ ಮತಕ್ಷೇತ್ರದ ಅಭಿವೃದ್ಧಿ ಸದಾ ಅವರು ಶ್ರಮಿಸುತ್ತಾರೆ. ಇಂಗಳೇಶ್ವರ ಗುಡ್ಡವನ್ನು ಒಂದು ಪ್ರವಾಸಿ ತಾಣ ಮಾಡುವ ಕಡೆಗೆ ನಮ್ಮ ತಂದೆ ಗಮನ ಹರಿಸಿದ್ದಾರೆ ಎಂದರು.

ಶಿಕ್ಷಕ ಅಶೋಕ ಹಂಚಲಿ ಅವರು ಉಪನ್ಯಾಸ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಇಂಗಳೇಶ್ವರ ವಚನ ಶಿಲಾ ಮಂಟಪದ ಚನ್ನಬಸವ ಸ್ವಾಮೀಜಿ, ಹಿರೇಮಠದ ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿ, ವಲಯ ಅರಣಾಧಿಕಾರಿ ಮಹೇಶ ಪಾಟೀಲ, ಮುಖಂಡ ಸಂಗಮೇಶ ಓಲೇಕಾರ ಮಾತನಾಡಿದರು. ಅಧ್ಯಕ್ಷತೆಯನ್ನು ಇಂಗಳೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬನ್ನೆಪ್ಪ ಡೋಣೂರ ವಹಿಸಿದ್ದರು. ವೇದಿಕೆಯಲ್ಲಿ ರೇವಣಸಿದ್ದೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಭೋಜನಗೌಡ ಪಾಟೀಲ, ಉಪವಲಯ ಅರಣ್ಯಾಧಿಕಾರಿ ಮಹೇಶ ಕೊಟ್ಲಗಿ, ವಿಂಡ ಪವರ್‌ದ ವಿಶ್ವನಾಥ ಪಾಪಶೆಟ್ಟಿ, ಬೀಟ್ ಪಾರೆಸ್ಟ್ ಮಹ್ಮದಶಫೀಕ ನಾಗೂರ,ಸಾಮಾಜಿಕ ಅರಣ್ಯ ಇಲಾಖೆಯ ಶರಣು ಹಚ್ಯಾಳ, ರೇವಣಸಿದ್ದೇಶ್ವರ ಟ್ರಸ್ಟ್ ಕಮೀಟಿ ಸದಸ್ಯರು ಇತರರು ಇದ್ದರು.ಉಮೇಶ ಹಡಪದ ಪ್ರಾಸ್ತವಿಕವಾಗಿ ಮಾತನಾಡಿದರು. ಪಿ.ಎಸ್.ಬಾಗೇವಾಡಿ ಸ್ವಾಗತಿಸಿದರು.ಬಿ.ಬಿ.ಬಾಗೇವಾಡಿ ನಿರೂಪಿಸಿದರು. ಕೆ.ಎಸ್.ಬಾಗೇವಾಡಿ ವಂದಿಸಿದರು. ಧಾರವಾಡದ ಹೆಜ್ಜೆ ಗೆಜ್ಜೆ ಕಲಾತಂಡದಿಂದ ವಚನ ಗಾಯನ ಜರುಗಿತು. ಬೆಳಗ್ಗೆ ಬರಡೋಲದ ವಿಶ್ವನಾಥ ಶಾಸೀಯವರಿಂದ ಅಕ್ಕನಾಗಮ್ಮ ಗುಹೆಯಲ್ಲಿ ಶಾಸೋಕ್ತವಾಗಿ ಅಕ್ಕನಾಗಮ್ಮ, ಚನ್ನಬಸವಣ್ಣ ಮತ್ತು ಬಸವಣ್ಣನವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಜರುಗಿತು.