ರೇವಣ್ಣ 4 ದಿನ ಎಸ್‌ಐಟಿ ವಶಕ್ಕೆ : 'ಊಟ ಸೇವಿಸದೇ ಏನ್ ಕೇಳಿದ್ರು ಒಂದೇ ಉತ್ತರ'

| Published : May 06 2024, 12:40 AM IST / Updated: May 06 2024, 06:26 AM IST

ರೇವಣ್ಣ 4 ದಿನ ಎಸ್‌ಐಟಿ ವಶಕ್ಕೆ : 'ಊಟ ಸೇವಿಸದೇ ಏನ್ ಕೇಳಿದ್ರು ಒಂದೇ ಉತ್ತರ'
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಜಿಲ್ಲೆ ಕೆ.ಆರ್‌.ನಗರದ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.

 ಬೆಂಗಳೂರು :  ಮೈಸೂರು ಜಿಲ್ಲೆ ಕೆ.ಆರ್‌.ನಗರದ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಭಾನುವಾರ ನ್ಯಾಯಾಲಯಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡವು, ಆರೋಪಿ ರೇವಣ್ಣ ಅವರನ್ನು ಸಂಜೆ ಕೋರಮಂಗಲದಲ್ಲಿರುವ ನ್ಯಾಯಾಧೀಶ ರವೀಂದ್ರ ಕುಮಾರ್‌ ಕಟ್ಟಿಮನಿ ಅವರ ನಿವಾಸಕ್ಕೆ ಹಾಜರುಪಡಿಸಿತು.

ಈ ವೇಳೆ ಎಸ್‌ಐಟಿ ಪರ ವಕೀಲರು ಪ್ರಕರಣದ ಗಂಭೀರತೆ ವಿವರಿಸಿ, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿರುವುದರಿಂದ ಎಸ್ಐಟಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ರೇವಣ್ಣ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಆರೋಪಿ ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ಎಸ್‌ಐಟಿ ವಶಕ್ಕೆ ಒಪ್ಪಿಸಿ ಆದೇಶಿಸಿದರು.

ಇದಕ್ಕೂ ಮುನ್ನ ಆರೋಪಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದರು. ಬಳಿಕ ಭಾರೀ ಭದ್ರತೆಯಲ್ಲಿ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದರು.

ವಿಚಾರಣೆಗೆ ಸಿದ್ಧತೆ:  ನ್ಯಾಯಾಲಯವು ಆರೋಪಿ ರೇವಣ್ಣನನ್ನು ನಾಲ್ಕು ದಿನಗಳ ಕಾಲ ವಶಕ್ಕೆ ನೀಡಿರುವುದರಿಂದ ಎಸ್ಐಟಿ ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ. ಕೆ.ಆರ್‌.ನಗರ ಠಾಣೆಯಲ್ಲಿ ದಾಖಲಾಗಿರುವ ಮಹಿಳೆ ಅಪಹರಣ ಪ್ರಕರಣ ಮತ್ತು ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಆರೋಪಿಯನ್ನು ಪ್ರಶ್ನಿಸಿ, ಹೇಳಿಕೆ ಪಡೆದುಕೊಳ್ಳಲಿದ್ದಾರೆ.

ಎಸ್‌ಐಟಿ ಪ್ರಶ್ನೆಗಳಿಗೆ ರೇವಣ್ಣ ಒಂದೇ ಉತ್ತರ : ನಾನು ಕಿಡ್ನಾಪ್‌ ಮಾಡಿಲ್ಲ!

ಪ್ರಕರಣ ಸಂಬಂಧ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳೂ ಶನಿವಾರ ರಾತ್ರಿ ಸುಮಾರು ಎರಡು ತಾಸು ಪ್ರಶ್ನಿಸಿದರು. ‘ನಾನು ಯಾರನ್ನೂ ಅಪಹರಣ ಮಾಡಿಲ್ಲ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ರೇವಣ್ಣ ಒಂದು ಸಾಲಿನ ಉತ್ತರ ನೀಡಿದರು. ಉಳಿದಂತೆ ಯಾವುದೇ ಪ್ರಶ್ನೆಗಳಿಗೂ ರೇವಣ್ಣ ಉತ್ತರಿಸದೆ ಮೌನವಹಿಸಿದರು. ಬಳಿಕ ತಡರಾತ್ರಿ 1.30ರ ಸುಮಾರಿಗೆ ರೇವಣ್ಣ ಸಿಐಡಿ ಕಚೇರಿಯಲ್ಲೇ ನಿದ್ರೆಗೆ ಜಾರಿದರು. ಭಾನುವಾರ ಬೆಳಗ್ಗೆ ಸಹ ಎಸ್ಐಟಿ ಅಧಿಕಾರಿಗಳು, ರೇವಣ್ಣ ಅವರನ್ನು ಪ್ರಕರಣ ಕುರಿತು ಪ್ರಶ್ನೆ ಮಾಡಿದಾಗ, ಸಮರ್ಪಕವಾಗಿ ಉತ್ತರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. 

ಊಟ ಮಾಡದೆ ಎಸ್ಐಟಿ ಮೇಲೆ ರೇವಣ್ಣ ರೇಗಾಟ : 
 ಶನಿವಾರ ಸಂಜೆ ಎಚ್‌.ಡಿ.ರೇವಣ್ಣ ಬಂಧನದ ಬಳಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ ಎಸ್‌ಐಟಿ ಅಧಿಕಾರಿಗಳು, ರಾತ್ರಿ 11 ಗಂಟೆಗೆ ಅರಮನೆ ರಸ್ತೆಯ ಕಾರ್ಲಟನ್‌ ಕಟ್ಟದಲ್ಲಿರುವ ಸಿಐಡಿ ಕಚೇರಿಗೆ ಕರೆತಂದರು. ಸಪ್ಪೆ ಮೋರೆಯಲ್ಲಿದ್ದ ರೇವಣ್ಣ ಅವರು ಸರಿಯಾಗಿ ಊಟ ಮಾಡಿಲ್ಲ. ಎಸ್‌ಪಿ ದರ್ಜೆಯ ಇಬ್ಬರು ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ. ಈ ವೇಳೆ ಅಧಿಕಾರಿಗಳ ಯಾವುದೇ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಿಲ್ಲ. ಒಂದು ಹಂತದಲ್ಲಿ ಅಧಿಕಾರಿಗಳ ಮೇಲೆಯೇ ರೇವಣ್ಣ ರೇಗಾಡಲು ಮುಂದಾದರು ಎನ್ನಲಾಗಿದೆ.