ರೇವಣ್ಣ ತೋಟದ ಮನೆಗಳ ಜಾಲಾಡಿದ ಎಸ್ಐಟಿ

| Published : May 04 2024, 12:35 AM IST

ಸಾರಾಂಶ

ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಶೇಷ ತನಿಖಾ ತಂಡ ಶುಕ್ರವಾರ ಬೆಳಗಿನ ಜಾವ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಅವರ ಫಾರಂ ಹೌಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಶೇಷ ತನಿಖಾ ತಂಡ ಶುಕ್ರವಾರ ಬೆಳಗಿನ ಜಾವ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಅವರ ಫಾರಂ ಹೌಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೇವಣ್ಣರ ಮನೆ ಕೆಲಸದಾಕೆ ವೀಡಿಯೋ ಬಹಿರಂಗವಾದ ಹಿನ್ನೆಲೆಯಲ್ಲಿ ನೀಡಿದ ದೂರನ್ನಾಧರಿಸಿ ಪರಿಶೀಲನೆಗಾಗಿ ಆಗಮಿಸಿದ್ದಾರೆ. ಅಸ್ಸಾಂ ಮೂಲದ ಕಾರ್ಮಿಕರನ್ನು ವಿಚಾರಿಸಿದಾಗ ತನಿಖಾ ತಂಡದ ೪ ಕಾರಿನಲ್ಲಿ ಒಟ್ಟು ೮ ಜನ ಅಧಿಕಾರಿಗಳು ಬಂದಿದ್ದರು. ಮಹಿಳೆಯೊಬ್ಬರ ಫೋಟೋ ತೋರಿಸಿ ಈಕೆ ಇಲ್ಲಿ ಕೆಲಸ ಮಾಡಿಕೊಂಡಿದ್ದರಾ ಎಂದು ಕೇಳಿದರು. ನಾನು ನೋಡಿಲ್ಲ ಎಂದು ಹೇಳಿದೆ. ಪ್ರಜ್ವಲ್ ಬಂದಾಗ ಉಳಿಯಲು ಮನೆ ಇದೆಯಾ ಎಂದು ಕೇಳಿದರು. ಇಲ್ಲ ಎಂದು ಹೇಳಿದ್ದಾಗಿ ತಿಳಿಸಿದೆ ಎಂದಿದ್ದಾನೆ.

ಬೆಳಗಿನ ಜಾವ 3.30 ರಲ್ಲೇ ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ಗಡಿ ಭಾಗದಲ್ಲಿರುವ ಗನ್ನಿಕಡದ ತೋಟಕ್ಕೆ ಭೇಟಿ ನೀಡಿದ್ದು, ಅಲ್ಲಿಯೂ ಕೂಡ ಏನಾದರೂ ಸಾಕ್ಷ ಸಿಗಬಹುದೆನ್ನುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಹೊಳೆನರಸೀಪುರ ಪಟ್ಟಣದ ಚನ್ನಾಂಬಿಕ ನಿವಾಸಕ್ಕೂಭೇಟಿ ನೀಡಿರುವ ಎಸ್‌ಐಟಿ ತಂಡ ಭವಾನಿ ರೇವಣ್ಣಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

ಬಿಕೋ ಎನ್ನುತ್ತಿರುವ ಎಂಪಿ ನಿವಾಸ:

ಹಾಸನ: ಸದಾ ಕಾರ್ಯಕರ್ತರು ಹಾಗೂ ಹಿಂಬಾಲಕರಿಂದ ಗಿಜಿಗುಡುತ್ತಿದ್ದ ಸಂಸದರ ನಿವಾಸ ಇದೀಗ ಬಿಕೋ ಎನ್ನುತ್ತಿದೆ. ಸಂಸದ ಪ್ರಜ್ವಲ್‌ ಗೆ ಸಂಬಂಧಪಟ್ಟಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್‌ ದೇಶ ತೊರೆದಿದ್ದು, ಅವರ ಹಿಂಬಾಲಕರು ಕೂಡ ಯಾರೊಬ್ಬರು ಇತ್ತ ಸುಳಿಯುತ್ತಿಲ್ಲ. ನಗರದ ಆರ್.ಸಿ. ರಸ್ತೆಯ ಎಸ್ಪಿ ಕಛೇರಿ ಪಕ್ಕದಲ್ಲಿರುವ ಲೋಕಸಭಾ ಸದಸ್ಯರ ನಿವಾಸ ಇದೀಗ ದಾತಿಕರೇ ಇಲ್ಲದಂತಾಗಿದ್ದು, ಚುನಾವಣಾ ನೀತಿಸಂಹಿತೆ ಇರುವ ಕಾರಣಕ್ಕೆ ಯಾರೂ ಇತ್ತ ಬರುತ್ತಿಲ್ಲವೋ, ಅಥವಾ ಸಂಸದ ಪ್ರಜ್ವಲ್‌ ಅಶ್ಲೀಲ ವೀಡಿಯೋ ಸುಳಿಗೆ ಸಿಕ್ಕಿ ದೇಶ ತೊರೆದಿರುವುದರಿಂದ ಯಾರೂ ಬರುತ್ತಿಲ್ಲವೋ ತಿಳಿಯದು. ಕಡೆ ಪಕ್ಷ ಅಲ್ಲಿನ ಡಿ ದರ್ಜೆ ನೌಕರರು ಕೂಡ ಯಾರೂ ಇಲ್ಲದಾಗಿದ್ದು, ಸಂಸದರಿಗೆ ಬಂದ ಹಲವು ಅಂಚೆ ಪತ್ರಗಳು ಬಾಗಿಲಿನಲ್ಲೇ ಬಿದ್ದಿವೆ.