ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯಾವ ರಾಜ್ಯದಲ್ಲಿ ಸರ್ಕಾರ ಬೀಳಿಸಬೇಕು? ಯಾವ ನಾಯಕರ ಮನೆ ಮೇಲೆ ಐಟಿ ದಾಳಿ ಮಾಡಿಸಬೇಕು? ಯಾರನ್ನು ಇಡಿಯಲ್ಲಿ ಸಿಲುಕಿಸಬೇಕು ಎಂಬುದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೆಲಸ. ಬರಪೀಡಿತ ರಾಜ್ಯಗಳಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಿ ನೆರವು ಬಿಡುಗಡೆ ಮಾಡಬೇಕು ಎಂಬ ಕಳಕಳಿ ಅವರಿಗೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.ಬೆನಕಟ್ಟಿ ಗ್ರಾಮದಲ್ಲಿ ಮಂಗಳವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿಯನ್ನು ನೀವು ಸೋಲಿಸಿದ್ದೀರಿ ಎಂಬ ಏಕೈಕ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಬರಪರಿಹಾರ ನೆರವು ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.ಬರ-ನೆರೆ ಸಂದರ್ಭಗಳಲ್ಲಿ ಸಂಕಷ್ಟಕ್ಕೀಡಾಗುವ ರೈತಾಪಿ ಸಮೂಹಕ್ಕೆ ನೆರವು ನೀಡುವುದು ಧರ್ಮ. ಹಿಂದಿನ ಎಲ್ಲ ಕೇಂದ್ರ ಸರ್ಕಾರಗಳು ಕೂಡ ಯಾವುದೇ ರಾಜ್ಯ ಬರದಿಂದ ಸಂಕಷ್ಟಕ್ಕೆ ಸಿಲುಕಿದಾಗ ನೆರವು ನೀಡುತ್ತಲೇ ಬಂದಿವೆ. ರಾಜ್ಯದ 223 ತಾಲೂಕುಗಳು ಬರಕ್ಕೆ ತುತ್ತಾಗಿವೆ. ರೈತರ ನೆರವಿಗೆ ಧಾವಿಸಬೇಕು. ಹೀಗಾಗಿ ಪರಿಹಾರ ಬಿಡುಗಡೆ ಮಾಡಿ ಎಂದರೆ ಕುಂಟು ನೆಪ ಹೇಳಿದರು ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ 28 ಸಂಸದರ ಪೈಕಿ ಕಾಂಗ್ರೆಸ್ ಪಕ್ಷದ ಸಂಸದ ಡಿ.ಕೆ.ಸುರೇಶ್ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಸಂಸದರು ನೆರವು ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿಲ್ಲ. ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ. ಆದರೆ, ಇವರಿಗೆ ಪ್ರಧಾನಿಗೆ ರಾಜ್ಯದ ಪರಿಸ್ಥಿತಿ ಮನವರಿಕೆ ಮಾಡಿ ನೆರವು ತರಲು ಸಾಧ್ಯವಾಗಲಿಲ್ಲ. ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಮತ್ತು ಸುಮಲತಾ ಕೂಡ ಮಾತನಾಡಲಿಲ್ಲ ಎಂದು ಕುಟುಕಿದರು.ಸಂಸತ್ತಿನಲ್ಲಿ ಮಾತನಾಡುವವರನ್ನು ಆಯ್ಕೆ ಮಾಡಬೇಕು. ತುಟಿ ಬಿಚ್ಚದವರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು ಕಾನೂನು ಪದವೀಧರೆಯಾಗಿದ್ದು, ದೂರದೃಷ್ಟಿ ಹೊಂದಿದ್ದಾರೆ. ತರುಣಿಯಾಗಿದ್ದು, ಕೆಲಸ ಮಾಡುವ ಉತ್ಸಾಹ ಹೊಂದಿದ್ದಾರೆ. ಈ ಬಾರಿ ಅವರಿಗೆ ಆಶೀರ್ವಾದ ಮಾಡಿ ದೆಹಲಿಗೆ ಕಳುಹಿಸಿ. ನಿಮ್ಮ ಸಮಸ್ಯೆಗಳ ಬಗ್ಗೆ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.
ರಾಜ್ಯದಂತೆ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಅಗತ್ಯವಿದ್ದು, ಈ ಬಾರಿ ಮತ್ತೆ ಮೋದಿ ಅವರ ಬಣ್ಣದ ಮಾತುಗಳಿಗೆ ಮರುಳಾಗದೆ ಕಾಂಗ್ರೆಸ್ ಗೆ ಮತ ನೀಡಿ ಎಂದು ನಟ, ನಿರ್ದೇಶಕ ಎಸ್. ನಾರಾಯಣ ಮನವಿ ಮಾಡಿದರು.ಮೋದಿ ಅವರಿಗೆ ಅಧಿಕಾರ ನಡೆಸಲು ಹತ್ತು ವರ್ಷ ಅವಕಾಶ ನೀಡಿದ್ದೀರಿ. ಈ ಕ್ಷೇತ್ರದ ಸಂಸದರಿಗೆ 20 ವರ್ಷ ಅವಕಾಶ ಕೊಟ್ಟಿದ್ದೀರಿ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಬಾಗಲಕೋಟೆಯಿಂದಲೇ ಗೆಲುವು ಆರಂಭವಾಗಲಿ. ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಎಚ್.ವೈ. ಮೇಟಿ, ಬಾಯಕ್ಕಮೇಟಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಅಜಯಕುಮಾರ ಸರನಾಯಕ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.ನಾವೇನು ಭಿಕ್ಷುಕರಾ?:
ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸ್ಪಂದಿಸಲು ನಮ್ಮ ಹಕ್ಕಿನ ಬರಪರಿಹಾರ ನೆರವು ಬಿಡುಗಡೆ ಮಾಡಿ ಎಂದು ಕೇಂದ್ರಕ್ಕೆ ಮನವಿ ಮಾಡುತ್ತಿದ್ದೇವೆ. ಕಾನೂನು ಬದ್ಧವಾಗಿ ಕೊಡಬೇಕಾದ ನೆರವು ಕೊಡಿ ಎಂದು ಕೇಳುತ್ತಿದ್ದೇವೆ. ನಾವೇನು ಭಿಕ್ಷುಕರಾ? ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ವಾಗ್ದಾಳಿ ನಡೆಸಿದರು.ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಸಂದಾಯ ಮಾಡುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಮ್ಮ ಹಕ್ಕನ್ನು ನಾವು ಕೇಳಿದರೆ ಸಬೂಬು ಹೇಳುತ್ತಾರೆ. ರಾಜ್ಯ ಸರ್ಕಾರ ಬರ ಪರಿಹಾರ ನೆರವಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು ಎಂದರು.
ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಲು ಸಾಧ್ಯವಿದ್ದರೆ ರೈತರ ಸಾಲ ಮನ್ನಾ ಮಾಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ ಸಂಯುಕ್ತಾ ಪಾಟೀಲ, ಅಂಬಾನಿ, ಅದಾನಿ ಅವರ ಎದುರು ಮೋದಿ ಅವರಿಗೆ ಅನ್ನದಾತರು ಕಾಣಿಸುತ್ತಿಲ್ಲವೇ ಎಂದು ಲೇವಡಿ ಮಾಡಿದರು.ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಲೇವಡಿ ಮಾಡುವವರು ಈ ಯೋಜನೆಗಳಿಂದ ಬದುಕು ಕಟ್ಟಿಕೊಂಡ ಕುಟುಂಬಗಳನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಲಿ ಎಂದು ಸವಾಲು ಹಾಕಿದರು.ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ನಾವು ಗುಲಾಮರಾಗಿ ಬದುಕಬೇಕಾಗುತ್ತದೆ. ಸಂವಿಧಾನ ಬದಲಾವಣೆಯ ಪ್ರಯತ್ನಗಳು ನಡೆಯುವುದರಲ್ಲಿ ಅನುಮಾನ ಇಲ್ಲ. ಬಿಜೆಪಿಯ ಹಲವು ಮುಖಂಡರು ಈ ಸುಳಿವು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ದೇಶವನ್ನು ಪಾರು ಮಾಡಲು ಮೋದಿಯನ್ನು ಮನೆಗೆ ಕಳುಹಿಸಿ.
- ಎಸ್.ನಾರಾಯಣ, ನಟ, ನಿರ್ದೇಶಕ