ತಹಸೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಪತ್ತೆಯಾಗದ ದಾಖಲೆಗಳು ಪರಶುರಾಮ ನಿವಾಸದಲ್ಲಿ ದೊರೆತಿವೆ. ಕಚೇರಿ ತಡಕಾಡಿ, ದಾಖಲೆ ಇಲ್ಲವೆಂದು ಹೇಳಿದ ಮೇಲೆ ಅಲ್ಲಿಗೆ ಹೋಗಿ, ದಾಖಲೆ ತಂದು ಕಚೇರಿಗೆ ಸಲ್ಲಿಸಲಾಗುತ್ತಿತ್ತು.

ಕೊಪ್ಪಳ:

ತಹಸೀಲ್ದಾರ್‌ ಕಚೇರಿ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಇರಬೇಕಾದ ದಾಖಲೆಗಳು ವ್ಯಕ್ತಿಯ ಖಾಸಗಿ ಮನೆಯಲ್ಲಿ ಇರುವುದನ್ನು ನೋಡಿ ಕಂದಾಯ ಇಲಾಖೆ ಅಧಿಕಾರಿಗಳೇ ದಂಗಾಗಿದ್ದಾರೆ.

ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಕೊಪ್ಪಳ ತಹಸೀಲ್ದಾರ್‌ ವಿಠ್ಠಲ ಚೌಗಲೆ ಹಾಗೂ ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಮಂಗಳವಾರ ಕಿನ್ನಾಳ ಗ್ರಾಮದಲ್ಲಿರುವ ಪರಶುರಾಮ ಚಿತ್ರಗಾರ ನಿವಾಸದ ಮೇಲೆ ದಾಳಿ ಮಾಡಿ, ಬೆಳಗ್ಗೆಯಿಂದ ಸಂಜೆ ವರೆಗೂ ದಾಖಲೆ ಪರಿಶೀಲಿಸಿ ಮಹಜರು ಮಾಡಿದ್ದಾರೆ.

ತಹಸೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಪತ್ತೆಯಾಗದ ದಾಖಲೆಗಳು ಪರಶುರಾಮ ನಿವಾಸದಲ್ಲಿ ದೊರೆತಿವೆ. ಕಚೇರಿ ತಡಕಾಡಿ, ದಾಖಲೆ ಇಲ್ಲವೆಂದು ಹೇಳಿದ ಮೇಲೆ ಅಲ್ಲಿಗೆ ಹೋಗಿ, ದಾಖಲೆ ತಂದು ಕಚೇರಿಗೆ ಸಲ್ಲಿಸಲಾಗುತ್ತಿತ್ತು. ಇದರಿಂದ ಕಂದಾಯ ಇಲಾಖೆಯ ಅಧಿಕಾರಿಗಳೂ ಬೆರಗಾಗಿ ಹೋಗಿದ್ದರು. ಈ ಕುರಿತು ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ದಾಖಲೆ ಪರಿಶೀಲಿಸಲಾಗಿದೆ.

ನಾಲ್ಕು ತಾಲೂಕಿನ ದಾಖಲೆ:

ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕಿನ ಬಹುತೇಕ ದಾಖಲೆಗಳು ಪರಶುರಾಮ ನಿವಾಸದಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ದಾಖಲೆಗಳು ಸಹ ಇವೆ ಎನ್ನಲಾಗುತ್ತಿದೆ. ನಿಜಾಮರ ಕಾಲದಲ್ಲಿನ ಆಡಳಿತದಲ್ಲಿನ ದಾಖಲೆಯಿಂದ ಹಿಡಿದು ಸ್ವಾತಂತ್ರ್ಯ ನಂತರ ರಾಜ್ಯ ಸರ್ಕಾರದ ಅವಧಿಯಲ್ಲಿ ಹಳೆಯ ದಾಖಲೆಗಳ ರಾಶಿಯೇ ಪತ್ತೆಯಾಗಿದೆ. ತಹಸೀಲ್ದಾರ್‌ ವಿಠ್ಠಲ್‌ ಜೌಗಲೆ ಹಾಗೂ ಕಂದಾಯ ಇಲಾಖೆಯ ಇತರ ಸಿಬ್ಬಂದಿ ಸಂಜೆಯ ನಂತರವೂ ದಾಖಲೆ ಪರಿಶೀಲನೆ ನಡೆಸಿದರು.

ಈ ಹಿಂದೆಯೂ ಇವರ ಮನೆ ಮೇಲೆ ದಾಳಿ ಮಾಡಿ, ಅಪಾರ ಪ್ರಮಾಣದ ದಾಖಲೆ ವಶಕ್ಕೆ ಪಡೆಯಲಾಗಿತ್ತು. ಅದಾದ ನಂತರವೂ ಮತ್ತೆ ದಾಖಲೆಗಳಿಗಾಗಿ ಜನರು ಸರ್ಕಾರಿ ಕಚೇರಿಗಿಂತ ಇವರ ಮನೆಯಿಂದ ತರುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಈಗ ಪುನಃ ದಾಳಿ ಮಾಡಲಾಗಿದೆ.

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕಿನ್ನಾಳ ಗ್ರಾಮದ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗಿವೆ. ಅವುಗಳ ಪರಿಶೀಲನೆ ಕಾರ್ಯವನ್ನು ತಹಸೀಲ್ದಾರ್‌ ವಿಠ್ಠಲ್‌ ಜೌಗಲೆ ಮಾಡುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಹೇಳಿದರು.