ಸಾರಾಂಶ
ಸಾರ್ವಜನಿಕರೊಂದಿಗೆ ಬೆರೆತು ಕೆಲಸ ಮಾಡುವ ಇಲಾಖೆ ಕಂದಾಯ ಇಲಾಖೆಯಾಗಿದ್ದು, ಸೇವೆ ಜತೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.
ಹೊಸಪೇಟೆ: ಸಾರ್ವಜನಿಕರೊಂದಿಗೆ ಬೆರೆತು ಕೆಲಸ ಮಾಡುವ ಇಲಾಖೆ ಕಂದಾಯ ಇಲಾಖೆಯಾಗಿದ್ದು, ಸೇವೆ ಜತೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಕಂದಾಯ ದಿನಾಚರಣೆ ನಿಮಿತ್ತ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ, ಕಂದಾಯ ನೌಕರರು, ಗ್ರಾಮ ಸಹಾಯಕರಿಂದ ಪ್ರತಿಭಾ ಪುರಸ್ಕಾರ ಹಾಗೂ ಕಾರ್ಯಾಗಾರ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದುವ, ಅವರ ಕಷ್ಟ ಸುಖಗಳಿಗೆ ಹೆಚ್ಚು ಸ್ಪಂದಿಸುವ ಅವಕಾಶ ಕಂದಾಯ ಇಲಾಖೆಯ ನೌಕರರಿಗೆ ಸಿಗಲಿದೆ. ಆ ನಿಟ್ಟಿನಲ್ಲಿ ಇಲಾಖೆ ಇನ್ನಷ್ಟು ಜನಸ್ನೇಹಿಯಾಗಬೇಕು. ಸರ್ಕಾರ ಪ್ರತಿ ವಿದ್ಯಮಾನಕ್ಕೂ ಮಾತೃ ಇಲಾಖೆಯಾದ ಕಂದಾಯ ಇಲಾಖೆಯ ಕಡೆಗೆ ನೋಡುತ್ತದೆ. ಅದಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದರೆ ಎಚ್ಚರಿಕೆಯಿಂದಿರುವುದು ಮುಖ್ಯ. ಸರ್ಕಾರಿ ನೌಕರಿ ಶೇ.1ರಷ್ಟು ಜನರಿಗೆ ಮಾತ್ರ ಸಿಗುತ್ತದೆ. ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕಂದಾಯ ಇಲಾಖೆ ಹುಟ್ಟಿನಿಂದ ಸಾಯುವವರೆಗೆ ಜನರ ಜತೆ ಸಂಬಂಧ ಹೊಂದಿದೆ. ಸಿಬ್ಬಂದಿ ಅಶಿಸ್ತಿನಿಂದ ಇದ್ದರೆ ಸಹಿಸಲ್ಲ. ನಮ್ಮ ಸೇವೆಯಲ್ಲಿ ಕೊರತೆಯಿದ್ದಾಗ ಮಾತ್ರ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಇದಕ್ಕೆ ಆಸ್ಪದ ಕೊಡಬಾರದು. ನಾವು ತಪ್ಪು ಮಾಡಿದರೆ ಕುಟುಂಬಕ್ಕೆ ಶಾಪವಾಗಲಿದೆ. ಸಾರ್ಜನಿಕರು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಸೇವೆಯ ಜತೆ ಕುಟುಂಬಕ್ಕೆ ಸಮಯ ಕೊಟ್ಟು, ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ರಕ್ತದಾನ ಶಿಬಿರ ಉದ್ಘಾಟಿಸಿದರು. ಉಪವಿಭಾಗಾಧಿಕಾರಿಗಳಾದ ಚಿದಾನಂದ ಗುರುಸ್ವಾಮಿ, ಪಿ.ವಿವೇಕಾನಂದ, ತಹಸೀಲ್ದಾರ್‌ಗಳಾದ ವಿಶ್ವಜೀತ್ ಮೇಹತಾ, ಬಿ.ವಿ.ಗಿರೀಶ್ ಬಾಬು, ಚಂದ್ರಶೇಖರ್ ಗಾಳಿ, ಎಂ.ರೇಣುಕಾ, ಜಿ.ಕೆ.ಅಮರೇಶ ಮತ್ತಿತರರಿದ್ದರು. ಹೊಸಪೇಟೆಯಲ್ಲಿ ಪ್ರತಿಭಾ ಪುರಸ್ಕಾರ, ಕಾರ್ಯಾಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿದರು.