ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಂದಾಯ ಇಲಾಖೆಯಲ್ಲಿನ ಪ್ರಕರಣಗಳ ತ್ವರಿತ ವಿಲೇವಾರಿ, ಸರ್ಕಾರಿ ಜಮೀನು ಅತಿಕ್ರಮಣ ತಡೆಗೆ ಲ್ಯಾಂಡ್ ಬೀಟ್ ವ್ಯವಸ್ಥೆ ಸೇರಿದಂತೆ ಕಂದಾಯ ಇಲಾಖೆಯ ಪ್ರತಿಯೊಂದು ಕೆಲಸಗಳನ್ನು ಚುರುಕುಗೊಳಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ನಗರದ ಸುವರ್ಣ ವಿಧಾನಸೌಧದಲ್ಲಿ ಶನಿವಾರ ನೈಋತ್ಯ ಮುಂಗಾರು ಸಿದ್ಧತೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿ ನಡೆದ ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಮರ್ಪಕ ಬೆಳೆ ಸಮೀಕ್ಷೆ, ಆರ್‌ಟಿಸಿಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ, ಸರ್ಕಾರಿ ಜಮೀನು ಅತಿಕ್ರಮಣ ತಡೆಗೆ ನಿಯಮಿತವಾಗಿ ಲ್ಯಾಂಡ್ ಬೀಟ್ ವ್ಯವಸ್ಥೆ, ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದು ಸೇರಿದಂತೆ ಕಾಲಕ್ಕೆ ಅನುಗುಣವಾಗಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಆರ್‌ಟಿಸಿಗಳನ್ನು ಆಧಾರ್ ಸಂಖ್ಯೆಗೆ ಜೋಡಣೆಯನ್ನು ವಿಶೇಷ ಆಂದೋಲನ ರೀತಿ ಕೈಗೆತ್ತಿಕೊಳ್ಳಬೇಕು. ಆರ್‌ಟಿಸಿಗೆ ಆಧಾರ್ ಜೋಡಣೆಯಿಂದ ಮುಂಬರುವ ದಿನಗಳಲ್ಲಿ ಮ್ಯೂಟೇಶನ್, ಬೆಳೆಹಾನಿ ಪರಿಹಾರ ವಿತರಣೆ ಸೇರಿದಂತೆ ಸಾಕಷ್ಟು ಅನುಕೂಲವಾಗಲಿದೆ.
ಸರ್ಕಾರಿ ಜಮೀನು, ಕೆರೆಗಳು, ಸ್ವಾಧೀನಪಡಿಸಿಕೊಂಡಿರುವ ಭೂಮಿ, ಸ್ಮಶಾನ ಸೇರಿದಂತೆ ಪ್ರತಿಯೊಂದು ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಜಮೀನಿನ ಸಂರಕ್ಷಣೆ ಮತ್ತು ಅತಿಕ್ರಮಣ ತಡೆಗಾಗಿ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದ್ದರಿಂದ ಪ್ರತಿಯೊಂದು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನಿನ ಬೀಟ್ ಕಡ್ಡಾಯ ನಡೆಸುವ ಮೂಲಕ ವರದಿ ಸಲ್ಲಿಸಬೇಕು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬೀಟ್ ಮಾಡುವುದರಿಂದ ಸರ್ಕಾರಿ ಭೂಮಿಯ ಅತಿಕ್ರಮಣಕ್ಕೆ ಕಡಿವಾಣ ಹಾಕಬಹುದು ತಿಳಿಸಿದರು.ಗೋಮಾಳ ಹಂಚಿಕೆಗೆ ಅವಕಾಶ:
ಗೋಮಾಳ ಭೂಮಿ ಹಂಚಿಕೆಯನ್ನು ಕಾಯ್ದೆ ಅನುಸಾರ ಸರ್ಕಾರ ನಿರ್ಬಂಧಿಸಿದೆ. ಆದರೆ ಹೆಚ್ಚುವರಿ ಭೂಮಿಯನ್ನು ಗುರುತಿಸಿ ನಿಯಮಾನುಸಾರ ಹಂಚಿಕೆ ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.ಬಗರ್ ಹುಕುಂ ಸಮಿತಿ ಮುಂದೆ ಮಂಡಿಸುವ ಪ್ರತಿ ಅನರ್ಹ ಪ್ರಕರಣವನ್ನು ತಿರಸ್ಕರಿಸುವ ಮುಂಚೆ ಸಕಾರಣ ಸಮೇತ ವಿವರಿಸಬೇಕು. ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕರಿಸಿರುವ ಮನವಿ/ಅರ್ಜಿಗಳು ಮತ್ತು ಕುಂದುಕೊರತೆಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ವಿಶೇಷವಾಗಿ 90 ರಿಂದ 180 ದಿನಗಳರೆಗಿನ ಪ್ರಕರಣಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಪಡಿಸಬೇಕು ಎಂದು ಸೂಚನೆ ನೀಡಿದರು.
ಕಂದಾಯ ಇಲಾಖೆ ಬದಲಾವಣೆ:ಕಂದಾಯ ಇಲಾಖೆಯ ಕೆಲಸ ನಿರಂತರವಾಗಿರುತ್ತದೆ. ಜನರ ನಿರೀಕ್ಷೆ ಹೆಚ್ಚಾಗಿರುತ್ತದೆ. ಅವರ ನಿರೀಕ್ಷೆಯಂತೆ ಉತ್ತಮ ಸೇವೆ ಒದಗಿಸಬೇಕು. ಕೆಲಸದ ಹೊರೆ ಹೆಚ್ಚಾಗಿದೆ ಎಂಬುದಕ್ಕಿಂತ ಸೀಮಿತ ಅವಧಿಯಲ್ಲಿ ಮಾಡುತ್ತಿರುವುದರಿಂದ ಕಾರ್ಯ ಭಾರ ಎನಿಸುತ್ತಿದೆ.
ಕಂದಾಯ ಇಲಾಖೆಯು ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದೆ. ಎಲ್ಲರ ಸಹಕಾರದಿಂದ ನಿಗದಿತ ಗುರಿ ಸಾಧನೆ ಸಾಧ್ಯವಾಗಲಿದೆ ಎಂದರು.ಈ ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಖಟಾರಿಯಾ, ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಇಲಾಖೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಇಲಾಖೆಯ ಆಯುಕ್ತೆ ಮಮತಾ ಬಿ.ಆರ್, ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ವಿಭಾಗ ವ್ಯಾಪ್ತಿಯ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು, ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ರು ಸಭೆಯಲ್ಲಿ ಪಾಲ್ಗೊಂಡಿದ್ದರು.----------------ಬಾಕ್ಸ್....
ಸಂಭವನೀಯ ಪ್ರವಾಹ ತಡೆಗೆ ಸನ್ನದ್ಧರಾಗಲು ಸೂಚನೆಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಜಿಲ್ಲಾಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ನದಿಯ ಒಳಹರಿವು ಹಾಗೂ ಮಳೆಯ ಪ್ರಮಾಣದ ಮೇಲೆ ನಿರಂತರ ನಿಗಾ ವಹಿಸುವ ಮೂಲಕ ಜನ ಹಾಗೂ ಜಾನುವಾರುಗಳ ಜೀವಹಾನಿ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದರು.ಸುವರ್ಣ ವಿಧಾನಸೌಧದಲ್ಲಿ ಸಂಭವನೀಯ ಪ್ರವಾಹ ನಿರ್ವಹಣೆ, ನೈಋತ್ಯ ಮುಂಗಾರು ಸಿದ್ಧತೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಶನಿವಾರ ನಡೆದ ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಾಹುತ ಸಂಭವಿಸಿದಾಗ ರಕ್ಷಣಾ ತಂಡಗಳು ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂಬುದರ ಕುರಿತು ಕಂದಾಯ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಮುಂಚಿತವಾಗಿಯೇ ಸಮನ್ವಯತೆ ಸಾಧಿಸಬೇಕು ಎಂದರು.
ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೇ ಪ್ರವಾಹಬಾಧಿತಗೊಳ್ಳಲಿರುವ ತಾಲೂಕು ಮಟ್ಟದಲ್ಲೂ ಇಂತಹ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ರವಾಹ ಮಾತ್ರವಲ್ಲದೇ ಮನೆಕುಸಿತ ಮತ್ತಿತರ ತುರ್ತು ಸಂದರ್ಭಗಳಲ್ಲಿ ತುರ್ತು ಕ್ರಮಕ್ಕೆ ರಕ್ಷಣಾ ವ್ಯವಸ್ಥೆ ಮತ್ತು ತಂಡಗಳು ಸಜ್ಜಾಗಿರಬೇಕು ಎಂದರು.ಪ್ರವಾಹ ನಿರ್ವಹಣೆ ಕುರಿತು ಜಿಲ್ಲಾ, ತಾಲ್ಲೂಕು ಹಾಗೂ ಪ್ರವಾಹದಿಂದ ಬಾಧಿತಗೊಳ್ಳಲಿರುವ ಗ್ರಾಮಗಳ ಮಟ್ಟದಲ್ಲಿ ಅಣುಕು ಕಾರ್ಯಾಚರಣೆ ನಡೆಸಬೇಕು. ಆಗಾಗ ಸಭೆ ನಡೆಸುವ ಮೂಲಕ ತಂಡಗಳನ್ನು ಸದಾ ಜಾಗೃತವಾಗಿಡಬೇಕು. ಜಿಲ್ಲಾ ಹಂತದಲ್ಲಿರುವ ಸಮಿತಿಗಳನ್ನು ಪ್ರಬಾಹಬಾಧಿತಗೊಳ್ಳಲಿರುವ ತಾಲ್ಲೂಕು ಮತ್ತು ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಬೇಕು ಎಂದರು.ಪ್ರವಾಹ ನಿರ್ವಹಣೆ ಪೂರ್ವಸಿದ್ಧತೆ ಕುರಿತು ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕೊಯ್ನಾದಿಂದ ಬಿಡುಗಡೆ ಮಾಡಲಾದ 3.44 ಲಕ್ಷ ಕ್ಯೂಸೆಕ್ ನೀರು ಹಾಗೂ ಮಳೆಯಿಂದ ಹಿಂದೆ ಪ್ರವಾಹ ಉಂಟಾಗಿತ್ತು. ಆದ್ದರಿಂದ ನೀರು ಬಿಡುಗಡೆ ಕುರಿತು ಮಹಾರಾಷ್ಟ್ರದ ಜತೆ ಸಮನ್ವಯ ಸಾಧಿಸಿಕೊಂಡು ಉಭಯ ರಾಜ್ಯಗಳ ಉನ್ನತಮಟ್ಟದ ಸಮಿತಿ ರಚಿಸಿಕೊಂಡು ಜಲಾಶಯಗಳ ನೀರಿನ ಮಟ್ಟ ನಿರ್ವಹಣೆ ಮಾಡುವುದರಿಂದ ಪ್ರವಾಹ ಪರಿಸ್ಥಿತಿ ತಡೆಗಟ್ಟಬಹುದು ಎಂದು ತಿಳಿಸಿದರು. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.