ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂರಾರು ರೈತರಿಂದ ತಹಸೀಲ್ದಾರ್ ಗೆ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರೈತರ ಸಮಸ್ಯೆಗಳಿಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸ್ಪಂದಿಸುತ್ತಿದ್ದು ರೈತರಿಗೆ ಸಹಾಯ ಮಾಡಲು ಕಂದಾಯ ಇಲಾಖೆ ಯಿಂದ ಕೆಲವು ಮಾಹಿತಿ, ದಾಖಲೆ ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಹಾಗೂ ರೈತ ಮುಖಂಡರು ಶನಿವಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಗದ್ದೇಮನೆ ಮಾತನಾಡಿ, ನರಸಿಂಹರಾಜಪುರ ತಾಲೂಕಿನಲ್ಲಿ ಯಾವ, ಯಾವ ಗ್ರಾಮಗಳಲ್ಲಿ ಯಾವ ಸರ್ವೆ ನಂಬರಿನಲ್ಲಿ ಎಷ್ಟು ವಿಸ್ತೀರ್ಣದ ಗೋಮಾಳ ಜಾಗವನ್ನು ಸೆಕ್ಷನ್ 17 ಮಾಡಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಯಾವ ಕ್ರಮ ಕೈಗೊಳ್ಳಲಾಗಿದೆ. ಯಾವ ಸರ್ವೆ ನಂಬರಿನಲ್ಲಿ ಎಷ್ಟು ಕಂದಾಯ ಭೂಮಿ ಉಳಿಸಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಬೇಕು. ಪ್ರತಿ 100 ಗೋವುಗಳಿಗೆ ಕನಿಷ್ಠ 30 ಎಕರೆ ಗೋಮಾಳ ಮೀಸಲು ಇಡಬೇಕು ಎಂಬ ಸರ್ಕಾರದ ಆದೇಶ ಇದೆ.ಎನ್‌.ಆರ್.ಪುರ ತಾಲೂಕಿನಲ್ಲಿ ಯಾವ,ಯಾವ ಗ್ರಾಮದಲ್ಲಿ ಎಷ್ಟು ಎಕರೆ ಗೋಮಾಳ ಇದೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದರು.

1980 ರ ನಂತರ ಎಷ್ಟು ರೈತರಿಗೆ ಹಕ್ಕು ಪತ್ರ ಹಾಗೂ ಸಾಗುವಳಿ ಪತ್ರ ನೀಡಲಾಗಿದೆ ? ಸರ್ಕಾರ ನಿಯೋಜಿಸಿರುವ ಎಸ್.ಐ.ಟಿ. ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸರ್ವೆ ಕಾರ್ಯ ಮಾಡುವಾಗ ಕಡ್ಡಾಯವಾಗಿ ಗ್ರಾಪಂ ಪಿಡಿಒ ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಸರ್ವೆ ಮಾಡುವಾಗ ರೈತರ ಭೂಮಿ, ಶಾಲೆ, ಆಟದ ಮೈದಾನ,ಸ್ಮಶಾನ,ಆಶ್ರಯ ನಿವೇಶನಗಳಿಗೆ ಮುಂದಿನ 50 ವರ್ಷಗಳಲ್ಲಿ ಆಗಬಹುದಾದ ಜನ ಸಂಖ್ಯೆ ಅಂದಾಜಿಸಿ ನಾಗರಿಕ ಅಗತ್ಯಗಳಿಗೆ ಭೂಮಿ ಮೀಸಲಿಟ್ಟು ನಂತರ ಅರಣ್ಯ ಸ್ವರೂಪದ ಭೂಮಿಗಳನ್ನು ಮಾತ್ರ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ನಕ್ಷೆ ತಯಾರಿಸಬೇಕು ಎಂದು ಒತ್ತಾಯಿಸಿದರು.


ಬಯಲು ಸೀಮೆಯ ದಾವಣಗೆರೆ, ಚಿತ್ರದುರ್ಗದ ರೈತರಿಗೆ ನೀರು ಕೊಡಲು ಭದ್ರಾ ಡ್ಯಾಂ ಕಟ್ಟಲಾಯಿತು. ಇದರಿಂದ ಎನ್‌.ಆರ್.ಪುರ ತಾಲೂಕಿನ ಬಹುತೇಕ ಭೂಮಿ ಮುಳುಗಡೆಯಾಯಿತು. ಸರ್ಕಾರ ಬದಲಿ ಭೂಮಿ ಮಂಜೂರು ಮಾಡಿದ್ದರೂ ಈವರೆಗೂ ಪೋಡಿ ಆಗಿಲ್ಲ. ಇದರಿಂದ ಈ ಭೂಮಿ ಮೇಲೆ ಬ್ಯಾಂಕಿನಿಂದ ಸಾಲ ಮಾಡಲು ಸಾದ್ಯವಿಲ್ಲ ವಾಗಿದೆ. ಆದಷ್ಟು ಶೀಘ್ರ ಪೋಡಿ ಮಾಡಬೇಕು. ಅಲ್ಲದೆ ಸರ್ಕಾರ ಅರಣ್ಯ ಭೂಮಿ ಮಂಜೂರು ಮಾಡಲು ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಇಂತಹ ಭೂಮಿ ಮಂಜೂರು ಮಾಡಲು 75 ವರ್ಷ ಮೇಲ್ಪಟ್ಟವರ ಸಾಕ್ಷಿ ಕೇಳಲಾಗಿತ್ತು.75 ವರ್ಷದ ತೆಂಗಿನ ಮರ ಸಾಕ್ಷಿ ತೋರಿಸಲಾಗಿತ್ತು.ಆದರೆ, ಶೃಂಗೇರಿ ಕ್ಷೇತ್ರದ 3 ತಾಲೂಕುಗಳಲ್ಲೂ ಈ ಅರ್ಜಿಗಳು ತಹಸೀಲ್ದಾರ್, ಎಸಿ ಹಾಗೂ ಡಿಸಿ ಕಚೇರಿಗಳಿಗೆ ತಲುಪಿದೆ. ವಿಲೇವಾರಿ ಮಾತ್ರ ಆಗಿಲ್ಲ. ಆದ್ದರಿಂದ ಈ ಕಡತಗಳನ್ನು ಪುನರ್ ಪರಿಶೀಲನೆ ಮಾಡಿ ಅರ್ಹ ರೈತರಿಗೆ ಮಂಜೂರು ಮಾಡಿಸಬೇಕು ಎಂದು ಒತ್ತಾಯಿಸಿದರು.

ನಂತರ ತಹಸೀಲ್ದಾರ್ ಡಾ.ನೂರಲ್ ಹುದಾ ಅವರಿಗೆ ಮನವಿ ಪತ್ರ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಂಚಿನಮನೆ, ರೈತ ಒಕ್ಕೂಟದ ಪದಾಧಿಕಾರಿಗಳಾದ ಪ್ರದೀಪ ಕಿಚೇಬಿ, ಶೇವಿಯಾರ್, ವಿಕಾಸ್, ವಿವೇಕ್, ಮನೀಶ್ ಖಾಂಡ್ಯ, ಮುರುಳಿ ಸೇರಿದಂತೆ ನೂರಾರು ರೈತರು ಇದ್ದರು.