ಕಂದಾಯ ನಿರೀಕ್ಷಕ- ಉಪ ತಹಸೀಲ್ದಾರ ಮಾರಾಮಾರಿ

| Published : Feb 19 2025, 12:49 AM IST

ಸಾರಾಂಶ

ತಹಸೀಲ್ದಾರ್ ಕಚೇರಿಗೆ ಬಂದ ವಿಕ್ರಮಸಿಂಗ್, ಏರು ದನಿಯಲ್ಲಿ ಜಿ.ಬಿ. ಭಟ್ ಅವರೊಂದಿಗೆ ಜಗಳಕ್ಕೆ ನಿಂತಿದ್ದಾರೆ.

ಮುಂಡಗೋಡ: ದಾಖಲೆಗಳ ಪರಿಶೀಲನೆ ವಿಷಯದಲ್ಲಿ ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ರಜಪೂತ ಹಾಗೂ ಉಪ ತಹಸೀಲ್ದಾರ್ ಜಿ.ಬಿ.ಭಟ್ ಮಂಗಳವಾರ ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಸಾರ್ವಜನಿಕರ ಎದುರಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ!

ಸಾರ್ವಜನಿಕರಿಗೆ ನೀಡಲಾಗುವ ಪ್ರಮಾಣ ಪತ್ರಗಳ ವಿತರಣೆಗೂ ಮುನ್ನ ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ದಾಖಲೆಗಳ ಪರಿಶೀಲಿಸಿ ತಹಸೀಲ್ದಾರ್ ಕಚೇರಿಗೆ ವರದಿ ಕಳುಹಿಸಬೇಕು. ಆದರೆ ರಜಪೂತ್ ಸರಿಯಾಗಿ ಪರಿಶೀಲನಾ ವರದಿ ನೀಡುತ್ತಿಲ್ಲ ಎನ್ನಲಾಗಿದೆ. ಈ ಕುರಿತು ಭಟ್ ಅವರು ಪೊನ್ ಮಾಡಿ, ನೀವು ಯಾಕೆ ಸರಿಯಾಗಿ ವರದಿ ನೀಡುತ್ತಿಲ್ಲ? ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರೂ ಅವಾಚ್ಯವಾಗಿ ಬೈದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಕ್ರೋಶಗೊಂಡು ತಹಸೀಲ್ದಾರ್ ಕಚೇರಿಗೆ ಬಂದ ವಿಕ್ರಮಸಿಂಗ್, ಏರು ದನಿಯಲ್ಲಿ ಜಿ.ಬಿ. ಭಟ್ ಅವರೊಂದಿಗೆ ಜಗಳಕ್ಕೆ ನಿಂತಿದ್ದಾರೆ. ಆಗ ಇಬ್ಬರ ಮಧ್ಯೆ ಹೊಡೆದಾಟ ನಡೆದಿದೆ. ಆಗ ಕಚೇರಿಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಇವರ ಜಗಳ ಬಿಡಿಸಿದ್ದಾರೆ.

ಬಳಿಕ ಕಂದಾಯ ಇಲಾಖೆ ಕೆಲ ಸಿಬ್ಬಂದಿ ಇವಬ್ಬರನ್ನು ಕರೆದು ರಾಜಿ ಸಂಧಾನ ಮಾಡಲು ಪ್ರಯತ್ನ ನಡೆಸಿದ್ದಾರೆ. ಅದೂ ಸಾಧ್ಯವಾಗಿಲ್ಲ. ಈ ಅಧಿಕಾರಿಗಳ ಮಧ್ಯದ ರೋಷಾವೇಶ ಇನ್ನೂ ತಣ್ಣಗಾಗಿಲ್ಲ.

ಸರ್ಕಾರಿ ನೌಕರರಾಗಿ ಸಾರ್ವಜನಿಕರೆದುರು ಹೊಡೆದಾಡುವುದು ನಾಗರಿಕ ಸಮಾಜಕ್ಕೆ ಶೋಭೆ ತರುವಂತಹ ವಿಷಯವಲ್ಲ. ಈ ಬಗ್ಗೆ ವರದಿ ನೀಡುವಂತೆ ಮುಂಡಗೋಡ ತಹಸೀಲ್ದಾರರಿಗೆ ಸೂಚಿಸಲಾಗಿದೆ. ವರದಿ ಬಂದ ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ ಮುಲ್ಲಾ ತಿಳಿಸಿದ್ದಾರೆ.