ಒಳ್ಳೆಯ ಮಾತಿನಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಏನು ಮಾಡಬೇಕೆಂಬುದು ಗೊತ್ತಿದೆ

| Published : Jan 18 2024, 02:03 AM IST

ಒಳ್ಳೆಯ ಮಾತಿನಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಏನು ಮಾಡಬೇಕೆಂಬುದು ಗೊತ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಈಗಿಂದಲೇ ಎಚ್ಚರವಹಿಸಬೇಕು. ಮುಖ್ಯಮಂತ್ರಿಗಳ ನಡೆಸುವ ಜನತಾ ದರ್ಶನದಲ್ಲಿ ಬರುವ ಅರ್ಧದಷ್ಟು ಅರ್ಜಿಗಳು ನಮ್ಮ ಇಲಾಖೆಗೆ ಸಂಬಂಧಿಸಿರುತ್ತವೆ. ಜನರ ಜೀವನ ಹೈರಾಣಾಗುತ್ತಿದೆ. ಹೊಸ ಸರ್ಕಾರ ಬಂದ ಮೇಲೆ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

- ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಎಚ್ಚರಿಕೆ

---ಕನ್ನಡಪ್ರಭ ವಾರ್ತೆ ಮೈಸೂರು

ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುವಂತೆ ಒಳ್ಳೆಯ ಮಾತಿನಲ್ಲಿ ಹೇಳಿದ್ದೇನೆ. ಆದರೂ ಸುಧಾರಿಸಿಕೊಳ್ಳದಿದ್ದರೆ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಇಲಾಖೆಗೆ ಗೌರವ ಬರುವುದಿಲ್ಲ ಎಂದರು.

ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರರ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡ ಸಚಿವರು, ನಾವು ಎಚ್ಚರ ತಪ್ಪಿದರೆ ರೈತರು ಸಮಸ್ಯೆಗೆ ಸಿಲುಕುತ್ತಾರೆ. ಏಕೆಂದರೆ ಬರಗಾಲ ನಿರ್ವಹಣೆಯಲ್ಲಿ ಇಲಾಖೆ ಪಾತ್ರ ದೊಡ್ಡದು. ರೈತರಿಗೆ ಪರಿಹಾರ ಕೊಡುವುದು ಮತ್ತು ಜನರ ನೆರವಿಗೆ ಬರುವಲ್ಲಿ ನಾವು ಮುಂದಿರಬೇಕು ಎಂದರು.

ಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಈಗಿಂದಲೇ ಎಚ್ಚರವಹಿಸಬೇಕು. ಮುಖ್ಯಮಂತ್ರಿಗಳ ನಡೆಸುವ ಜನತಾ ದರ್ಶನದಲ್ಲಿ ಬರುವ ಅರ್ಧದಷ್ಟು ಅರ್ಜಿಗಳು ನಮ್ಮ ಇಲಾಖೆಗೆ ಸಂಬಂಧಿಸಿರುತ್ತವೆ. ಜನರ ಜೀವನ ಹೈರಾಣಾಗುತ್ತಿದೆ. ಹೊಸ ಸರ್ಕಾರ ಬಂದ ಮೇಲೆ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಕೆಲಸ ಆಗುತ್ತಿಲ್ಲ. ಡಿಸಿ, ಎಸಿ, ತಹಸೀಲ್ದಾರರು ಕಚೇರಿಯಲ್ಲಿ ಕುಳಿತು ದರ್ಬಾರ್ ನಡೆಸುತ್ತಿದ್ದೀರಿ ಎಂದು ಅವರು ತರಾಟೆಗೆ ತೆಗೆದುಕೊಂಡರು.

ತಾಲೂಕು ಕಚೇರಿ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಜನರಿಗೆ ಮುಖ ಕೊಟ್ಟು ಮಾತನಾಡಲು ನಮಗೆ ನಾಚಿಕೆ ಆಗುತ್ತಿದೆ. ಸಾರ್ವಜನಿಕರ ನೋವು ಕೇಳಿದರೆ ಸಚಿವನಾಗಿ ನನಗೆ ನಾಚಿಕೆ ಆಗುತ್ತದೆ. ಅಧಿಕಾರಿಗಳಾಗಿ ನಿಮ್ಮ ಜವಾಬ್ದಾರಿ ಏನು? ನಮ್ಮ ತಾಳ್ಮೆಗೂ ಮಿತಿ ಇದೆ ಅಲ್ಲವೇ? ಅದಕ್ಕೆ ಗೌರವ ಸಿಗದಿದ್ದರೆ ಬೇರೆ ರೀತಿ ಮಾತನಾಡುವುದು, ಕೆಲಸ ಮಾಡುವುದು ನಮಗೂ ಬರುತ್ತದೆ ಎಂದು ಅವರು ಎಚ್ಚರಿಸಿದರು.

ನಮ್ಮಿಂದ ಕಾಲುದಾರಿ ಒತ್ತುವರಿ ತೆರವು ಮಾಡಲಾಗುವುದಿಲ್ಲ ಎನ್ನುವುದಾದರೆ ಏನರ್ಥ? ಇ- ಆಫೀಸ್ ಎಂಬುದು ನಾಮಕಾವಸ್ತೆ ಆಗಿದೆ. ಈ ವಿಷಯದಲ್ಲಿ ಎಷ್ಟು ಹೇಳಿದರೂ ಕೆಲಸ ಆಗುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಜನರ ಶೋಷಣೆ ಮಾಡುವುದಾದರೆ ಹೇಗೆ? ನಾವೆಲ್ಲರೂ ಅವರ ಋಣದಲ್ಲಿದ್ದೇವೆ ಎಂಬುದನ್ನು ಮರೆಯಬೇಡಿ. ತಹಸೀಲ್ದಾರ್ ಹಾಗೂ ಎಸಿಗಳು ಜವಾಬ್ದಾರಿಯಿಂದ ಕೆಲಸ ಮಾಡದೇ ಇರುವುದರಿಂದ ಕೆಳಹಂತದಲ್ಲಿ ಬದಲಾವಣೆ ಆಗುತ್ತಿಲ್ಲ. ಪ್ರಗತಿ ಆಗಿಯೇ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ನಿರೀಕ್ಷಿಸಿದಷ್ಟು ಆಗಿಲ್ಲ ಎಂದು ಹೇಳಿದರು.

ಜನರು ತಾಳ್ಮೆ ಕಳೆದುಕೊಂಡರೆ ಬಹಳ ಕಷ್ಟವಾಗುತ್ತದೆ. ರಸ್ತೆ ಒತ್ತುವರಿ ತೆರವು ಮಾಡಲಿಲ್ಲ ಎನ್ನುವುದಾದರೆ ಸರ್ಕಾರ ಇದೆ ಎಂದು ಹೇಳಲಾಗುತ್ತದೆಯೇ? ಇದೇನು ವ್ಯವಸ್ಥೆಯೋ–ಅವ್ಯವಸ್ಥೆಯೋ? ಸರ್ವೇ ಇಲಾಖೆಯಷ್ಟು ಹದಗೆಟ್ಟಿದ್ದು ಬೇರೆ ಯಾವುದೂ ಇಲ್ಲ. ಮನಸೋ ಇಚ್ಛೆ ಕೇಳುತ್ತಿದ್ದಾರೆ. ಇದು ಶೋಭೆಯಲ್ಲ ಎಂದರು.

ಮೈಸೂರು ಮುಖ್ಯಮಂತ್ರಿಗಳ ಜಿಲ್ಲೆಯಾದ್ದರಿಂದ ಸಣ್ಣ ನ್ಯೂನತೆ ಕಂಡುಬಂದರೂ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮೇಲೆಯೇ ಪ್ರತಿಫಲಿಸುತ್ತದೆ. ಶೇ. 70ರಷ್ಟು ಕೆಲಸ ಮಾಡಿಕೊಡಲು ಅವಕಾಶವಿದೆ. ಆಗುವಂತದ್ದನ್ನು ಬೇಗ ಮುಗಿಸಿ. ಬೆಳೆ ನಷ್ಟದ ಪರಿಹಾರ ಬೇಕಿದ್ದಲ್ಲಿ ಸಂಪೂರ್ಣ ವಿಸ್ತೀರ್ಣವನ್ನು ಡೇಟಾಬೇಸ್ ನಲ್ಲಿ ನೋಂದಾಯಿಸಬೇಕು. ತಪ್ಪಿದರೆ ಪರಿಹಾರ ಸಿಗುವುದಿಲ್ಲ ಎಂದು ಅವರು ಹೇಳಿದರು.

ನಂಜನಗೂಡು ಹಾಗೂ ಟಿ.ನರಸೀಪುರ ತಾಲ್ಲೂಕಿನಲ್ಲಿ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆಯನ್ನು ಎರಡು ತಿಂಗಳಲ್ಲಿ ಒಮ್ಮೆಯೂ ನಡೆಸದಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

80 ಸಾವಿರ ಪೌತಿಖಾತೆ

ಜಿಲ್ಲೆಯಲ್ಲಿ 80 ಸಾವಿರ ಪೌತಿ ಖಾತೆ ಮಾಡಬೇಕಾಗಿದೆ. ವಿಶೇಷ ಅಭಿಯಾನ ನಡೆಸಿ ಫೆಬ್ರುವರಿ ಅಂತ್ಯದೊಳಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸಭೆಗೆ ಮಾಹಿತಿ ನೀಡಿದರು.

ಆರ್.ಟಿ.ಸಿಯಲ್ಲಿನ ಸಣ್ಣಪುಟ್ಟ ದೋಷ ಸರಿಪಡಿಸಲು ತಹಸೀಲ್ದಾರ್ ಗೆ ಅಧಿಕಾರ ಕೊಟ್ಟರೆ ಅನುಕೂಲವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕೋರಿದರು.

ಬಗರ್ ಹುಕುಂನಲ್ಲಿ ಅನರ್ಹರಿಗೂ ಮಂಜೂರಾಗಿದೆ. ಸ್ವಂತ ಜಮೀನು ಇದ್ದವರಿಗೂ, ವಯಸ್ಕರಲ್ಲದವರಿಗೂ ಮಾಡಿಕೊಡಲಾಗಿದೆ. ಇದು ಮುಂದೆಯೂ ಆಗದಂತೆ ನೋಡಿಕೊಳ್ಳಲು ಸ್ಪಷ್ಟ ನಿಯಮಾವಳಿ ರೂಪಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅರ್ಜಿಯನ್ನು 8 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.

ಶಾಸಕರಾದ ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ, ಇಲಾಖೆಯ ಆಯುಕ್ತ ಮಂಜುನಾಥ್, ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಮೊದಲಾದವರು ಇದ್ದರು.