ಕಂದಾಯ ದಾಖಲೆ ತಿದ್ದುಪಡಿ ಪ್ರಕರಣ: ಶಿರಸ್ತೇದಾರ್‌ ಅಮಾನತು

| Published : Oct 27 2025, 12:30 AM IST

ಕಂದಾಯ ದಾಖಲೆ ತಿದ್ದುಪಡಿ ಪ್ರಕರಣ: ಶಿರಸ್ತೇದಾರ್‌ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿ ತಹಸೀಲ್ದಾರ್ ಕಚೇರಿಯಲ್ಲಿ ದಾಖಲೆಗಳ ಮಾಯದ ಪ್ರಕರಣ

ಕಾರಟಗಿ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ರೈತರ ಭೂಮಿಯ ಕಂದಾಯ ವಿವಾದ ಇತ್ಯರ್ಥ ಪಡಿಸಬೇಕಾದ ಕಂದಾಯ ಅಧಿಕಾರಿಗಳೇ ಮೂಲ ದಾಖಲೆ ತಿದ್ದುಪಡಿ ಮಾಡಿ ವ್ಯಾಜ್ಯ ಸೃಷ್ಟಿಸುತ್ತಿದ್ದ ಭಾರಿ ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿ ಪ್ರಾದೇಶಿಕ ಆಯುಕ್ತಾಲಯದ ಶಿಸ್ತು ಪ್ರಾಧಿಕಾರ ಹಿಂದಿನ ಶಿರಸ್ತೇದಾರ್‌ ಪ್ರಕಾಶ ನಾಯಕ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಅವರು ಈಗ ಗಂಗಾವತಿ ತಹಸೀಲ್ದಾರ್‌ ಕಚೇರಿ ಶಿರಸ್ತೇದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಮೂಲ ದಾಖಲೆ ತಿದ್ದುಪಡಿ ಮಾಡಿದ ಹಗರಣಕ್ಕೆ ಸಂಬಂಧ ಈಗಿನ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಕಚೇರಿಯಲ್ಲಿನ ದಾಖಲೆಗಳ ಗೋಲಮಾಲ್ ಪ್ರಕರಣಕ್ಕೆ ಸಂಬಂಧ ಅಂದು ಪ್ರಾಥಮಿಕ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ಸುದೀರ್ಘ ಪತ್ರ ಬರೆದಿದ್ದರು. ಈ ಪ್ರಕರಣ ತಾಲೂಕಿನಾದ್ಯಂತ ಭಾರಿ ಸಂಚಲನ ಉಂಟು ಮಾಡಿತ್ತು.

ಇದೀಗ ಪ್ರಕರಣವನ್ನು ಪ್ರಾದೇಶಿಕ ಆಯುಕ್ತಾಲಯದ ಅಧಿಕಾರಿಗಳು ತನಿಖೆ ಮಾಡಿ ಪ್ರಕಾಶ ನಾಯಕ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

2023ರಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾರಟಗಿ ಮತ್ತು ಸಿದ್ದಾಪುರ ಹೋಬಳಿ ವ್ಯಾಪ್ತಿಯ ಬೆಲೆ ಬಾಳುವ ರೈತರ ಜಮೀನುಗಳನ್ನು ಪಹಣಿ ಮತ್ತು ಇತರ ದಾಖಲೆಗಳ ತಿದ್ದುಪಡಿ ಮಾಡಿದ್ದು ಬೆಳಕಿಗೆ ಬಂದಿತ್ತು. ಕಂದಾಯ ಇಲಾಖೆ ನಿಯಮಾವಳಿ ಪ್ರಕಾರ ಮೇಲಧಿಕಾರಿಗಳ ಗಮನಕ್ಕೆ ತರದೆ ದಾಖಲೆ ತಿದ್ದುಪಡಿ ಮಾಡಲಾಗಿತ್ತು. ಅಗತ್ಯ ದಾಖಲೆ ಪರಭಾರೆ ಮಾಡಲು ಸಹ ಮೇಲಧಿಕಾರಿಗಳ ಒಪ್ಪಿಗೆ ಪಡೆದಿರಲಿಲ್ಲ. ಒಟ್ಟು 9 ತಿಂಗಳ ಅವಧಿಯಲ್ಲಿ ಜ. 1ರಿಂದ ಸೆ. 5, 2023ರ ವರೆಗೆ ಒಟ್ಟು 123 ಪ್ರಕರಣಗಳು ದಾಖಲೆ, ಪಹಣಿ ತಿದ್ದುಪಡಿ ಪ್ರಕರಣ ಬೆಳಕಿಗೆ ಬಂದಿದ್ದವು.

ಸಿದ್ದಾಪುರ ಮತ್ತು ಕಾರಟಗಿಯಲ್ಲಿನ ರೈತರೊಬ್ಬರ ಪೋತಿ ವಿರಾಸಾತ್ ದಾಖಲೆ ತಿದ್ದುಪಡಿ ಮಾಡಿದ ಮೊದಲ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಇಲ್ಲಿನ ವಕೀಲ ಗವಿಸಿದ್ದಪ್ಪ ಸಾಲೋಣಿ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ್ದರು. ದಾಖಲೆ ಪರಿಶೀಲಿಸಿದಾಗ 26 ಪ್ರಕರಣಗಳಲ್ಲಿ ಮಾತ್ರ ಅಗತ್ಯ ದಾಖಲಗಳಿದ್ದು, ಉಳಿದ 97 ಪ್ರಕರಣಗಳಲ್ಲಿ ಕಡತ, ದಾಖಲೆ ಮಾಯ ಮಾಡಿದ್ದು ಬೆಳಕಿಗೆ ಬಂದಿತ್ತು.

ರೈತರ ಜಮೀನಿನ ಪಹಣಿ, ದಾಖಲೆ ಮನಬಂದಂತೆ ತಿದ್ದುಪಡಿ ಕೈಗೊಂಡು ಅನ್ಯಾಯವಾಗಿದೆ ಎನ್ನುವುದನ್ನು ಖಚಿತ ಪಡಿಸಿಕೊಂಡ ನಂತರ ವಕೀಲ ಗವಿಸಿದ್ದಪ್ಪ ಮತ್ತು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದಾಖಲೆ ಮತ್ತು ರೈತರನ್ನು ಸಂಪರ್ಕಿಸಿ ಜಿಲ್ಲಾಧಿಕಾರಿಗೆ ಸುದೀರ್ಘ ಪತ್ರ ಬರೆದಿದ್ದರು. ಪ್ರಕರಣಕ್ಕೆ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಹ ಹೂಡಲಾಗಿತ್ತು.

ಜಿಲ್ಲಾಧಿಕಾರಿ ಕಚೇರಿ ಪ್ರಕಾಶ ನಾಯಕ ಅವರಿಗೆ ಲಿಖಿತ ನೋಟಿಸ್ ನೀಡಿ, ಕಳೆದು ಹೋದ ದಾಖಲೆ ಕಚೇರಿಗೆ ಸಲ್ಲಿಸುವಂತೆ ಸೂಚಿಸಿತ್ತು. ಹಾರಿಕೆ ಉತ್ತರ ನೀಡಿ ಕೈತೊಳೆದುಕೊಂಡ ಹಿನ್ನೆಲೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಂದಾಯ ಇಲಾಖೆ ಪ್ರಾದೇಶ ಆಯುಕ್ತರಿಗೆ ಕಾರಟಗಿ ತಹಸೀಲ್ದಾರ್ ಕಚೇರಿ ಕಡತ ನಾಪತ್ತೆ ಮತ್ತು ಅಕ್ರಮ ತಿದ್ದುಪಡಿ ಪ್ರಕರಣ ಹಸ್ತಾಂತರಿಸಿತ್ತು. ದೀರ್ಘ ಕಾಲ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಶಿಸ್ತು ಪ್ರಾಧಿಕಾರ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಎಸಗಿರುವುದು ಕಂಡ ಬಂದ ಹಿನ್ನೆಲೆಗೆ ಪ್ರಕಾಶ ನಾಯಕ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕಾರಟಗಿ ತಹಸೀಲ್ದಾರ್ ಕಚೇರಿ ಮೂಲ ದಾಖಲೆಗಳ ನಾಪತ್ತೆ ಪ್ರಕರಣ, ಕಂದಾಯ ಅಧಿಕಾರಿಗಳಿಂದಲೇ ವ್ಯಾಜ್ಯ ಸೃಷ್ಟಿ ಕುರಿತು ''''ಕನ್ನಡಪ್ರಭ'''' ಸೆ. 30, 2023ರಂದು ಪ್ರಕರಣದ ಕುರಿತು ಬೆಳಕು ಚೆಲ್ಲಿ ವರದಿ ಮಾಡಿತ್ತು.