ಹೆತ್ತವರನ್ನು ಪೂಜ್ಯ ಭಾವನೆಯಿಂದ ಕಾಣಿರಿ

| Published : Feb 10 2025, 01:47 AM IST

ಸಾರಾಂಶ

ಇತ್ತೀಚಿಗೆ ಹೆತ್ತವರನ್ನು ಇಳಿ ವಯಸ್ಸಿನಲ್ಲಿ ನೋಡಿಕೊಳ್ಳಲಾಗದೆ ವೃದ್ದಾಶ್ರಮಕ್ಕೆ ಬಿಡುವ ಬಹಳಷ್ಟು ಮಕ್ಕಳನ್ನು ನೋಡುತ್ತಿದ್ದೇವೆ. ಹಾಳಾಗಿರುವ ಸಮಾಜದ ವ್ಯವಸ್ಥೆ ಸರಿದಾರಿಗೆ ಬರಬೇಕಾದರೆ ಹೆತ್ತವರನ್ನು ಪೂಜ್ಯ ಭಾವನೆಯಿಂದ ಕಾಣಬೇಕಾಗುತ್ತದೆ. ಹೆತ್ತವರನ್ನು ಗೌರವದಿಂದ ಕಂಡು ಪೂಜಿಸಿದರೆ ಮುಕ್ಕೋಟಿ ದೇವರನ್ನು ಪೂಜಿಸಿದ ಫಲ ದೊರಕುತ್ತದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಇತ್ತೀಚಿಗೆ ಹೆತ್ತವರನ್ನು ಇಳಿ ವಯಸ್ಸಿನಲ್ಲಿ ನೋಡಿಕೊಳ್ಳಲಾಗದೆ ವೃದ್ದಾಶ್ರಮಕ್ಕೆ ಬಿಡುವ ಬಹಳಷ್ಟು ಮಕ್ಕಳನ್ನು ನೋಡುತ್ತಿದ್ದೇವೆ. ಹಾಳಾಗಿರುವ ಸಮಾಜದ ವ್ಯವಸ್ಥೆ ಸರಿದಾರಿಗೆ ಬರಬೇಕಾದರೆ ಹೆತ್ತವರನ್ನು ಪೂಜ್ಯ ಭಾವನೆಯಿಂದ ಕಾಣಬೇಕಾಗುತ್ತದೆ. ಹೆತ್ತವರನ್ನು ಗೌರವದಿಂದ ಕಂಡು ಪೂಜಿಸಿದರೆ ಮುಕ್ಕೋಟಿ ದೇವರನ್ನು ಪೂಜಿಸಿದ ಫಲ ದೊರಕುತ್ತದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.

ಅಫಜಲಪುರದ ಪದಕಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ದಿ. ಸಿದ್ದರಾಮ ಪದಕಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ದಿ. ಸಿದ್ದರಾಮ ಪದಕಿ ರೈತ ಕುಟುಂಬದಲ್ಲಿ ಜನಿಸಿ ಸಮಾಜಮುಖಿ ಜೀವನ ಸಾಗಿಸಿದವರಾಗಿದ್ದರು. ಅವರ ದೈವಾಧಿನರಾದ ಬಳಿಕ ಅವರ ಮಕ್ಕಳು ಕೂಡ ತಂದೆಯ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇಂತ ಮಕ್ಕಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ತಂದೆಯ ಆಸೆಯಂತೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿಸಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತಿದ್ದಾರೆ. ಅಲ್ಲದೆ ತಂದೆಯನ್ನು ಸದಾ ಸ್ಮರಿಸುವ ಉದ್ದೇಶದಿಂದ ಪುತ್ತಳಿ ನಿರ್ಮಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದರು.

ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಹೆತ್ತವರನ್ನು ದೇವರ ಸ್ವರೂಪದಲ್ಲಿ ಕಂಡಿರುವ ದಿ. ಸಿದ್ದರಾಮ ಪದಕಿ ಮಕ್ಕಳು ಎಲ್ಲರಿಗೂ ಮಾದರಿ ಎನಿಸುವಂತ ಕೆಲಸ ಮಾಡಿದ್ದಾರೆ ಎಂದರು.

ಪುರಸಭೆ ಸದಸ್ಯ ಶಿವುಕುಮಾರ ಪದಕಿ ಮಾತನಾಡಿ, ನಮ್ಮ ತಂದೆ ನಮಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಹೇಗಿರಬೇಕೆನ್ನುವ ಮೌಲೀಕ ಸಿದ್ದಾಂತ ತುಂಬಿದ್ದಾರೆ. ನಮ್ಮ ಕುಟುಂಬದ ಎಲ್ಲರ ಆಸೆಯಂತೆ ತಂದೆಯವರ ಪುತ್ತಳಿ ಅನಾವರಣವನ್ನು ಪೂಜ್ಯರು ಮತ್ತು ಗಣ್ಯರಿಂದ ಮಾಡಿಸಿದ್ದು ಖುಷಿ ತಂದಿದೆ. ಎಲ್ಲರೂ ತಂದೆ, ತಾಯಿಯನ್ನು ದೇವರ ಸ್ವರೂಪದಂತೆ ಕಂಡಾಗ ನಿಜಕ್ಕೂ ರಾಮರಾಜ್ಯದ ಕಲ್ಪನೆ ಸಾಕಾರವಾಗಲಿದೆ ಎಂದರು.

ಮಾಜಿ ಗೃಹ ಸಚಿವ ಸಿದ್ದರಾಮ ಮೇತ್ರೆ ಮಾತನಾಡಿ, ತಂದೆ, ತಾಯಿಗಳೆ ನಮಗೆ ಮೊದಲ ದೇವರಾಗಿದ್ದಾರೆ, ಅವರು ಇರುವಾಗಲೂ ನಾವು ಚೆನ್ನಾಗಿ ನೋಡಿಕೊಳ್ಳಬೇಕು. ಅವರು ಅಗಲಿದ ಬಳಿಕ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕು ನಡೆಸಬೇಕು. ಈ ಕೆಲಸವನ್ನು ಪದಕಿ ಕುಟುಂಬದವರು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಅಕ್ಕಲಕೋಟ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಮೇತ್ರೆ, ಮುಖಂಡರಾದ ಚಂದ್ರಶೇಖರ ಕರ್ಜಗಿ, ಸಂಗ್ರಾಮಗೌಡ ಪಾಟೀಲ್, ಸಿದ್ದಯ್ಯ ಸ್ವಾಮಿ, ವಿಶ್ವನಾಥ ಮಲಘಾಣ, ಮತೀನ್ ಪಟೇಲ್, ಗುರುಶಾಂತ ಡಾಂಗೆ, ಶಂಕರ ಮ್ಯಾಕೇರಿ, ಎಸ್.ಎಸ್ ಪಾಟೀಲ್, ಲಕ್ಷ್ಮೀಪುತ್ರ ಪದಕಿ, ತಹಸೀಲ್ದಾರ ಸಂಜೀವಕುಮಾರ ದಾಸರ್ ಸೇರಿದಂತೆ ಅನೇಕರು ಇದ್ದರು.