ಚುನಾವಣೆ ಸ್ಪರ್ಧಿ ಬಗ್ಗೆ ವೈಚಾರಿಕವಾಗಿ ಪರಾಮರ್ಶಿಸಿ

| Published : Mar 29 2024, 01:00 AM IST

ಚುನಾವಣೆ ಸ್ಪರ್ಧಿ ಬಗ್ಗೆ ವೈಚಾರಿಕವಾಗಿ ಪರಾಮರ್ಶಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅಖಂಡ, ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಕಂಕಣ ಬದ್ಧರಾಗಿ, ಕಡ್ಡಾಯವಾಗಿ ನೈತಿಕ ಮತದಾನ ಮಾಡುವಂತೆ ಜಿಪಂ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಲಕ್ಷ್ಮಿ ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಅಖಂಡ, ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಕಂಕಣ ಬದ್ಧರಾಗಿ, ಕಡ್ಡಾಯವಾಗಿ ನೈತಿಕ ಮತದಾನ ಮಾಡುವಂತೆ ಜಿಪಂ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಲಕ್ಷ್ಮಿ ಅವರು ಸಲಹೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಹಳೇ ಕೆಡಿಪಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ಹಾಗೂ ವಿಕಲಚೇತನ ಸಬಲೀಕರಣ ಇಲಾಖೆ ಮತ್ತು ಮೊಬಿಲಿಟಿ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಭಿಮಾನಿ ಭಾರತ ನಿರ್ಮಾಣಕ್ಕಾಗಿ ವಿಶೇಷ ಚೇತನರ ವಿಶೇಷ ನಡಿಗೆ ಧ್ಯೇಯವಾಕ್ಯದಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ವಿಶೇಷಚೇತನರಿಗೆ ಹಮ್ಮಿಕೊಳ್ಳಲಾಗಿದ್ದ ಹೊಂಬೆಳಕು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಗವಿಕಲತೆ ಶಾಪವಲ್ಲ ವರ, ಸಮುದಾಯದಲ್ಲಿ ಈ ಹಿಂದೆ ವಿಕಲಚೇತನರಿಗೆ ಗೌರವವಿರಲಿಲ್ಲ. ಈಗ ಕಾಲ ಬದಲಾಗಿದೆ. ಇಂದಿನ ನಾಗರಿಕ ಸಮಾಜದಲ್ಲಿ ವಿಕಲಚೇತನರು ಎಲ್ಲರಂತೆ ಮತಗಟ್ಟೆಗೆ ಬಂದು ಮತದಾನ ಮಾಡಬಹುದಾಗಿದೆ. ಮತದಾನ ಪ್ರತಿಯೊಬ್ಬರ ಹಕ್ಕು. ನಮ್ಮೆಲ್ಲರ ಒಂದೊಂದು ಮತವು ಅತ್ಯಮೂಲ್ಯವಾಗಿದ್ದು, ಪ್ರತಿಯೊಬ್ಬರು ಮತ ಚಲಾಯಿಸಬೇಕು. ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಮದುವೆ ಪ್ರಕ್ರಿಯೆಯಲ್ಲಿ ಹೆಣ್ಣು ಹಾಗೂ ಗಂಡಿನ ವ್ಯಕ್ತಿತ್ವ, ಗುಣ, ನಡತೆಗಳ ಕುರಿತು ಕೂಲಂಕುಷವಾಗಿ ವಿಚಾರಿಸುವುದು ವಾಡಿಕೆ. ಹಾಗೆಯೇ ಎಲ್ಲರೂ ಸುಭದ್ರ ಜೀವನ, ಸುಭದ್ರ ದೇಶ ಕಟ್ಟುವ ನಿಟ್ಟಿನಲ್ಲಿ ಮತ ಹಾಕುವಾಗ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಯ ಬಗ್ಗೆ ವೈಚಾರಿಕ ಪರಾಮರ್ಶೆ ನಡೆಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೇ ಮತವನ್ನು ಚಲಾಯಿಸಬೇಕು. ಮತವನ್ನು ಮಾರಿಕೊಳ್ಳದೇ ನೈತಿಕ ಮತದಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜಿಲ್ಲೆಯಲ್ಲಿ ಒಟ್ಟು ೧೭೦೦೧ ವಿಕಲಚೇತನ ಮತದಾರರನ್ನು ನೋಂದಾಯಿಸಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಎಸ್.ಎನ್. ಆನಂದ್ ಹಾಗೂ ಜಿಲ್ಲಾ ವಿಕಲಚೇತನರ ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ವಿಶೇಷಚೇತನರಿಗೆ ಮತದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸಂಯೋಜಕ ರಾಜಣ್ಣ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ವಿಕಲಚೇತನರನ್ನು ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಜಿಲ್ಲಾಡಳಿತ ಭವನದ ಮುಂಭಾಗದಿಂದ ಆಯೋಜಿಸಲಾಗಿದ್ದ ಜಾಗೃತಿ ಜಾಥಾಗೆ ಜಿಪಂ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ. ಲಕ್ಷ್ಮಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಜಾಥಾದಲ್ಲಿ ಚುನಾವಣಾ ಪರ್ವ-ದೇಶದ ಗರ್ವ ಹಾಗೂ ನೈತಿಕ ಮತದಾನಕ್ಕೆ ಬೆಂಬಲಿಸುವಂತೆ ಘೋಷಣೆಗಳನ್ನು ಮೊಳಗಿಸಿ ಅರಿವು ಮೂಡಿಸಲಾಯಿತು.