ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ, ನೌಕರರ ಉದ್ಯೋಗ ಭದ್ರತೆ ಹಾಗೂ ಹೈನುಗಾರ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಮತ್ತು ಹಾಲಿನ ದರ ಪರಿಷ್ಕರಣೆ ನಿರ್ಧಾರ ಕೈಗೊಂಡಿದೆ. ಡೀಸೆಲ್, ಪೆಟ್ರೋಲ್, ಬಸ್ ನಿರ್ವಹಣೆ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದ್ದು, ಸಂಸ್ಥೆಗಳಿಗೆ ಗುಣಮಟ್ಟದ ಸೇವೆ ಮುಂದುವರಿಸಲು ದರ ಪರಿಷ್ಕರಣೆ ಅನಿವಾರ್ಯ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಸುರೇಖಾ ಚಂದ್ರಹಾಸ್ ಹೇಳಿದರು.
ಉಳ್ಳಾಲ : ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ, ನೌಕರರ ಉದ್ಯೋಗ ಭದ್ರತೆ ಹಾಗೂ ಹೈನುಗಾರ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಮತ್ತು ಹಾಲಿನ ದರ ಪರಿಷ್ಕರಣೆ ನಿರ್ಧಾರ ಕೈಗೊಂಡಿದೆ. ಡೀಸೆಲ್, ಪೆಟ್ರೋಲ್, ಬಸ್ ನಿರ್ವಹಣೆ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದ್ದು, ಸಂಸ್ಥೆಗಳಿಗೆ ಗುಣಮಟ್ಟದ ಸೇವೆ ಮುಂದುವರಿಸಲು ದರ ಪರಿಷ್ಕರಣೆ ಅನಿವಾರ್ಯ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಸುರೇಖಾ ಚಂದ್ರಹಾಸ್ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಪ್ರತಿದಿನ ಲಕ್ಷಾಂತರ ಜನರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿವೆ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳ ನಡುವೆಯೂ ಸಂಸ್ಥೆಗಳು ನಷ್ಟದಲ್ಲಿಯೇ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದು ಕಷ್ಟವಾಗಲಿದೆ. ಸಾರಿಗೆ ಸಂಸ್ಥೆಗಳನ್ನು ಉಳಿಸುವುದು ಎಂದರೆ ಲಕ್ಷಾಂತರ ಪ್ರಯಾಣಿಕರಿಗೆ ದೊರೆಯುವ ಸೇವೆ ಹಾಗೂ ಸಾವಿರಾರು ನೌಕರರ ಉದ್ಯೋಗ ಭದ್ರತೆಯನ್ನು ಕಾಪಾಡುವುದಾಗಿದೆ ಎಂದರು.ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಪ್ರತಿದಿನ ಶಿಕ್ಷಣ, ಉದ್ಯೋಗ ಹಾಗೂ ಇತರ ಅಗತ್ಯ ಕಾರ್ಯಗಳಿಗಾಗಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಯೋಜನೆಯ ವೆಚ್ಚವನ್ನು ಸರ್ಕಾರವೇ ಸಾರಿಗೆ ಸಂಸ್ಥೆಗಳಿಗೆ ಭರಿಸುತ್ತಿರುವುದರಿಂದ ಶಕ್ತಿ ಯೋಜನೆಯಿಂದ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ ಎಂಬ ಆರೋಪ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಹೈನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳಿಗೆ ಜಾನುವಾರುಗಳ ಮೇವು, ಆಹಾರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹಾಲಿನ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಪ್ರತಿ ಲೀಟರ್ ಹಾಲಿನ ಮೇಲೆ ರೈತರಿಗೆ ಹೆಚ್ಚುವರಿ ಹಣ ನೀಡುವ ಕ್ರಮ ಕೈಗೊಂಡಿದೆ ಎಂದರು.ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ಬಂಡಿಕೊಟ್ಯ ಮಾತನಾಡಿ, ಹಾಲಿನ ದರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದರ ಕಡಿಮೆ ಇದೆ. ಇತರ ರಾಜ್ಯಗಳಲ್ಲಿ ಹಾಲಿನ ಬೆಲೆ ಹೆಚ್ಚಿರುವುದನ್ನು ಗಮನಿಸಬೇಕು. ಪ್ರತಿಯೊಂದು ಬೆಲೆ ಏರಿಕೆಗೂ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಆರೋಪಿಸುವುದು ಸರಿಯಲ್ಲ ಎಂದರು.ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿಚಾರದಲ್ಲಿ ಮಾತನಾಡದವರು ರಾಜ್ಯ ಸರ್ಕಾರದ ನಿರ್ಧಾರಗಳ ಬಗ್ಗೆ ಮಾತ್ರ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ದೇವಕಿ ಉಳ್ಳಾಲ್, ತಾ.ಪಂ. ಮಾಜಿ ಸದಸ್ಯೆ ಕ್ಲೇರ ಕುವೆಲ್ಲೊ, ಕೋಟೆಕಾರು ಪ.ಪಂ ನಾಮ ನಿರ್ದೇಶಿತ ಸದಸ್ಯರಾದ ಸಫಿಯ ಮತ್ತಿತರರಿದ್ದರು.