ದೊಡ್ಡಬಳ್ಳಾಪುರ ಜೆಡಿಎಸ್‌ನಲ್ಲಿ ಪುನಶ್ಚೇತನ ಪರ್ವ

| Published : Dec 26 2023, 01:32 AM IST

ದೊಡ್ಡಬಳ್ಳಾಪುರ ಜೆಡಿಎಸ್‌ನಲ್ಲಿ ಪುನಶ್ಚೇತನ ಪರ್ವ
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಸೋಲುಗಳಿಂದ ಕಂಗೆಟ್ಟಿರುವ ಜೆಡಿಎಸ್ ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷ ಬಲವರ್ಧನೆಗೆ ಮುಂದಾಗುತ್ತಿದೆ,

ಸತತ ಸೋಲುಗಳ ಆತ್ಮಾವಲೋಕನ । ಸದೃಢ ಭವಿಷ್ಯಕ್ಕಾಗಿ ಸಂಘಟನೆ ಬಲವರ್ಧನೆಗೆ ನಿರ್ಧಾರ । ದೊಡ್ಡಬಳ್ಳಾಪುರದಲ್ಲಿ ನಡೆದ ಕಾರ್ಯಕರ್ತರ ಸಭೆ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಸತತ 4 ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್‌ ಪಕ್ಷ ಸೋಲು ಕಂಡಿದ್ದು, ಆತ್ಮಾವಲೋಕನದೊಂದಿಗೆ ಬಲಿಷ್ಠ ಸಂಘಟನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವುದರ ಜೊತೆಗೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸುವ ಸ್ಪೂರ್ತಿದಾಯಕ ನಡೆ ಅಗತ್ಯವಾಗಿದೆ ಎಂದು ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಹರೀಶ್‌ ಗೌಡ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆ ಹಾಗೂ 2024ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣದ ಆರ್ಭಟದಿಂದ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಇದರಿಂದ ಕಾರ್ಯಕರ್ತರು ಹತಾಶರಾಗಿದ್ದರು. ಅವರಲ್ಲಿ ನವ ಚೈತನ್ಯ ಮೂಡಿಸಿ ಹುರಿದುಂಬಿಸುವ ಅಗತ್ಯವಿದೆ. ತಾಲೂಕಿನಲ್ಲಿ ಹೊಸ ವರ್ಷದಿಂದ ಜೆಡಎಸ್‌ನ ಹೊಸ ಪರ್ವ ಆರಂಭವಾಗಲಿದೆ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಕೆಲ ಕಾರ್ಯಕರ್ತರಿಗೆ ಗೊಂದಲವಿದೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಶಾಸಕರಿದ್ದು, ಜೆಡಿಎಸ್ ಕಾರ್ಯಕರ್ತರ ಪರಿಸ್ಥಿತಿ ಏನು ಎಂಬ ಜಿಜ್ಞಾಸೆ ಬೇಡ. ವರಿಷ್ಠರ ನಿರ್ಧಾರದಂತೆ ಎಲ್ಲವೂ ನಡೆಯಲಿದೆ. ಮತಗಟ್ಟೆ ಹಂತದಲ್ಲಿ ಕಾರ್ಯಕರ್ತರು ಸಂಘಟಿತರಾಗಬೇಕು ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಹರಿಸಿದ ಹಣದ ಹೊಳೆಯಿಂದಾಗಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ ಸೇವಾ ಕಾರ್ಯದ ಮೂಲಕ ಮತ್ತೆ ಪಕ್ಷವನ್ನು ಸಂಘಟಿಸಲು ಎಲ್ಲರ ಸಹಕಾರ ಅಗತ್ಯವಿದೆ. 2024ರಲ್ಲಿ ಬರುವ ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸದೃಢವಾಗಿ ಪುನಶ್ಚೇತನಗೊಳಿಸುವ ಸಂಕಲ್ಪ ಮಾಡಬೇಕಿದೆ ಎಂದರು.

ಮತ್ತೊಮ್ಮೆ ಜೆಡಿಎಸ್‌ ಸರ್ಕಾರ:

ಪಕ್ಷದ ಮುಖಂಡ ಸಾರಥಿ ಸತ್ಯಪ್ರಕಾಶ್ ಮಾತನಾಡಿ, ಸತತವಾಗಿ 4 ಚುನಾವಣೆಗಳಲ್ಲಿ ಪರಾಭವಗೊಂಡರೂ ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಉತ್ಸಾಹ ಕುಗ್ಗಿಲ್ಲ. ಸೋಲುಗಳಿಂದ ಕಲಿತ ಪಾಠ ಮುಂದಿನ ಯಶಸ್ಸಿಗೆ ದಾರಿಯಾಗುತ್ತದೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು ಮತ್ತೆ ಕುಮಾರಸ್ವಾಮಿ ಅಧಿಕಾರ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚಿದ ವಿಶ್ವಾಸ:

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿಕುಮಾರ್ ಮಾತನಾಡಿ, ಸತತ ಸೋಲುಗಳ ಪರಿಣಾಮ ಪಕ್ಷದ ಕಾರ್ಯಕರ್ತರು ಭವಿಷ್ಯಕ್ಕಾಗಿ ಬೇರೆ ಬೇರೆ ಪಕ್ಷಕ್ಕೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪಕ್ಷ ಮತ್ತೆ ಬಲಗೊಳ್ಳುವ ಮುನ್ಸೂಚನೆ ದೊರೆತಿದೆ. ವಿಶ್ವಾಸ ಹೆಚ್ಚಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಶಾಂತಮ್ಮ, ತೆಂಗು ನಾರು ಮಂಡಳಿ ಮಾಜಿ ಅಧ್ಯಕ್ಷ ಗಂಟಿಗಾನಹಳ್ಳಿ ವೆಂಕಟೇಶ್‌ಬಾಬು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಣ್ಣ, ಬಾಶೆಟ್ಟಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ, ವಕೀಲ ರಾ.ಬೈರೇಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೇವರಾಜಮ್ಮ, ಮುಖಂಡರಾದ ಕಾಂತಾಮಣಿ ಹರೀಶ್‌ಗೌಡ, ತಾಲೂಕು ಕಾರ್ಯಾಧ್ಯಕ್ಷ ಆರ್.ಕೆಂಪರಾಜು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡು ಮಾತನಾಡಿದರು.

ಪಕ್ಷದ ಹಲವು ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

---ಫೋಟೋ-25ಕೆಡಿಬಿಪಿ5- ದೊಡ್ಡಬಳ್ಳಾಪುರ ನಗರದ ಒಕ್ಕಲಿಗರ ಭವನದಲ್ಲಿ ಸೋಮವಾರ ಜೆಡಿಎಸ್‌ ಕಾರ್ಯಕರ್ತರ ಸಭೆ ಹಾಗೂ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ಗೌಡ ಉದ್ಘಾಟಿಸಿದರು.