ಶಂಕರಾಚಾರ್ಯರಿಂದ ಹಿಂದೂ ಸಂಸ್ಕೃತಿ ಪುನರುಜ್ಜೀವನ: ಮುಲ್ಲಂಗಿ ನಂದೀಶ್

| Published : May 02 2025, 11:45 PM IST

ಶಂಕರಾಚಾರ್ಯರಿಂದ ಹಿಂದೂ ಸಂಸ್ಕೃತಿ ಪುನರುಜ್ಜೀವನ: ಮುಲ್ಲಂಗಿ ನಂದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯ ಶ್ರೀ ಭಾರತೀತೀರ್ಥ ಸಭಾಭವನದಲ್ಲಿ ಶುಕ್ರವಾರ ಆದ್ಯ ಗುರು ಶ್ರೀ ಶಂಕರಾಚಾರ್ಯ ಜಯಂತಿ ನಡೆಯಿತು.

ಬಳ್ಳಾರಿ: ಪ್ರಾಚೀನ ಭಾರತೀಯ ಉಪನಿಷತ್ತುಗಳ ತತ್ವಗಳು ಮತ್ತು ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಆದಿ ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಮುಲ್ಲಂಗಿ ನಂದೀಶ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಸಂಗನಕಲ್ಲು ರಸ್ತೆಯ ಶ್ರೀ ಭಾರತೀತೀರ್ಥ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾದ ಆದ್ಯ ಗುರು ಶ್ರೀ ಶಂಕರಾಚಾರ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಅದ್ವೈತ ಸಿದ್ಧಾಂತ ಮೂಲಕ ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸ ಮಾಡಿದ ಶಂಕರಾಚಾರ್ಯರು ಆದ್ಯಗುರುವಾಗಿ ಲೋಕ ಪೂಜಿತರಾದರು ಎಂದು ಹೇಳಿದರು.

ವೇದಬ್ರಹ್ಮ ಶ್ರೀರಾಮ ಸುಬ್ರಹ್ಮಣ್ಯ ಶರ್ಮ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರು ಮತ್ತು ತತ್ವಜ್ಞಾನಿಗಳಲ್ಲಿ ಆದಿ ಶಂಕರಾಚಾರ್ಯರು ಒಬ್ಬರು. ಅದ್ವೈತ ವೇದಾಂತದ ಅಡಿಪಾಯವನ್ನು ಹಾಕಿದ ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ಅವನತಿಯ ಸಮಯದಲ್ಲಿ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ಹೇಳಿದರು.

ಇಂದಿನ ಕೇರಳದ ಒಂದು ಸಣ್ಣ ಹಳ್ಳಿಯಾದ ಕಾಲಡಿಯಲ್ಲಿ ಜನಿಸಿದ ಆದಿ ಶಂಕರಾಚಾರ್ಯರು ಭಾರತೀಯ ತತ್ವಶಾಸ್ತ್ರದ ಶ್ರೇಷ್ಠ ವ್ಯಕ್ತಿಯಲ್ಲಿ ಒಬ್ಬರೆಂದು ಹೇಳಲಾಗುತ್ತದೆ. ಅವರು ಆಳವಾದ ಆಧ್ಯಾತ್ಮಿಕ ಮತ್ತು ಬೌದ್ಧಿಕ ಮೈಲಿಗಲ್ಲುಗಳನ್ನು ಸಾಧಿಸಿದ್ದರು. ಅವರ ಅಲ್ಪಾವಧಿಯ ಜೀವಿತಾವಧಿಯ ಹೊರತಾಗಿಯೂ, ಅವರ ಕೊಡುಗೆಗಳು ಭಾರತದ ಆಧ್ಯಾತ್ಮಿಕ ಮತ್ತು ತಾತ್ವಿಕ ಭೂದೃಶ್ಯದ ಮೇಲೆ ಶಾಶ್ವತವಾದ ಪ್ರಭಾವ ಬೀರಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ರಾಜೇಶ್ವರಿ ಅವರ ತಂಡ ಭಕ್ತಿ ಸಂಗೀತ ನೆರವೇರಿಸಿಕೊಟ್ಟರು.

ಮೆರವಣಿಗೆ: ಜಯಂತಿ ಅಂಗವಾಗಿ ಗುರುವಾರ ಸಂಜೆ ನಗರದಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು. ಮೆರವಣಿಗೆಯು ನಗರದ ಸತ್ಯನಾರಾಯಣ ಪೇಟೆಯ ವೆಂಕಟೇಶ್ವರ ದೇವಸ್ಥಾನದಿಂದ ಆರಂಭಗೊಂಡು ಇಂದಿರಾ ವೃತ್ತ-ಬೆಂಗಳೂರು ರಸ್ತೆ-ಸಭಾಪತಿ ಬೀದಿ-ಶ್ರೀ ಶೃಂಗೇರಿ ಶಂಕರಮಠದ ವರಗೆ ಸಾಗಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ಮೆರಗು ನೀಡಿದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಶೃಂಗೇರಿ ಶಂಕರಮಠದ ಗೌರವ ವ್ಯವಸ್ಥಾಪಕ ಬಿ.ಕೆ.ಬಿ.ಎನ್. ಮೂರ್ತಿ, ಜಿಲ್ಲಾ ಬ್ರಾಹ್ಮಣರ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಅಖಿಲ ಕರ್ನಾಟಕ ಬ್ರಾಹ್ಮಣರ ಒಕ್ಕೂಟ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ, ನೇತ್ರ ತಜ್ಞ ಡಾ. ಸುಧಾಕರ, ಲೆಕ್ಕಪರಿಶೋಧಕ ಡಾ. ಶ್ರೀಧರ, ಮುಖಂಡರಾದ ಪ್ರಭಾಕರ ಶಾಸ್ತ್ರಿ ಉಪಸ್ಥಿತರಿದ್ದರು.