ದಾಬಸ್‍ಪೇಟೆ: ದೇವಾಲಯ ನಿರ್ಮಾಣ ಮಾಡುವುದು ಸುಲಭದ ಕಾರ್ಯವಲ್ಲ. ನೂತನ ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ಈಶ್ವರ ಗಣಪತಿ, ಸುಬ್ರಹ್ಮಣ್ಯ ದೇವರ 48ನೇ ದಿನದ ವಿಶೇಷ ಪೂಜೆಯ ಸಾನ್ನಿದ್ಯ ವಹಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಆಚರಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕಾರಯುತ ಕಾರ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಯಾವುದೇ ದೇವಾಲಯಗಳ ನಿರ್ಮಾಣದ ನಂತರ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ಅದರ ನಿರ್ವಹಣೆ ಕಾರ್ಯ ವ್ಯವಸ್ಥಿತವಾಗಿರಬೇಕು. ದೇವಾಲಯಗಳಿಗೆ ತೆರಳಿ ಹೊರ ಬಂದರೆ ಮಾನಸಿಕ ಶಾಂತಿ, ನೆಮ್ಮದಿ ಲಭಿಸುತ್ತದೆ. ಪ್ರತಿಯೊಬ್ಬರೂ ದೇವರು, ಗುರು ಹಿರಿಯರನ್ನು ಪೂಜಿಸಿ ಗೌರವಿಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಅರ್ಚಕ ನವೀನ್ ಕುಮಾರ್ ಮಾತನಾಡಿ, ದೇವಾಲಯಗಳಲ್ಲಿ ಧನಾತ್ಮಕ ಶಕ್ತಿ ಅಡಗಿದೆ. ಆದ್ದರಿಂದ ಪ್ರತಿ ಯೊಬ್ಬರು ಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗುತ್ತಾರೆ. ನಂಬಿಕೆಗೆ ಶಕ್ತಿಯಿದೆ, ಶ್ರದ್ಧೆ, ಭಕ್ತಿಯಿಂದ ನಿರ್ವಹಿಸಿದ ಪ್ರತಿ ಕಾರ್ಯ ದೇವರಿಗೆ ಸಲ್ಲುತ್ತದೆ ಭೂಮಿ ಮೇಲೆ ಆಚಾರ, ವಿಚಾರ, ಧಾರ್ಮಿಕ ಕಾರ್ಯ ಇನ್ನೂ ಜೀವಂತವಾಗಿರಲು ದೇವಾಲಯಗಳ ಕೊಡುಗೆ ಬಹಳಷ್ಟಿದೆ. ದೇವಾಲಯಗಳು ಮಾನವನಲ್ಲಿ ಒಗ್ಗಟ್ಟನ್ನು ನಿರ್ಮಾಣ ಮಾಡುತ್ತವೆ. ಪ್ರತಿಯೊಬ್ಬರು ಒಂದು ಗೂಡಿ ಉತ್ತಮ ಕಾರ್ಯಕ್ಕೆ ಶ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕರು, ಅಕ್ಕಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.

ಪೋಟೋ 2 :


ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿಯಲ್ಲಿ ಬಸವೇಶ್ವರ ಹಾಗೂ ಈಶ್ವರ ಗಣಪತಿ, ಸುಬ್ರಹ್ಮಣ್ಯ ದೇವರ 48ನೇ ದಿನದ ವಿಶೇಷ ಪೂಜಾ ಕಾರ್ಯಕ್ರಮದ ಪ್ರಯುಕ್ತ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಗ್ರಾಮಸ್ಥರು ಪಾದಪೂಜೆ ನೆರವೇರಿಸಿದರು.