ಅರ್ಕಾವತಿ ನದಿಯನ್ನು ಪುನರುಜ್ಜೀವನಗೊಳಿಸಿ

| Published : Mar 07 2025, 12:48 AM IST

ಸಾರಾಂಶ

ಕುದೂರು/ಮಾಗಡಿ: ಬೆಂಗಳೂರಿನ ಅರ್ಧ ಭಾಗದ ಜನಕ್ಕೆ ನೀರೊದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಮೂಲವಾಗಿರುವ ಅರ್ಕಾವತಿ ನದಿಯ ಜಲಮೂಲದ ನೆಲೆಗಳನ್ನು, ರಾಜಕಾಲುವೆಗಳನ್ನು ಒತ್ತುವರಿಗಳಿಂದ ತೆರವುಗೊಳಿಸಿ ಅರ್ಕಾವತಿ ನದಿಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಅಭಿಪ್ರಾಯಪಟ್ಟರು.

ಕುದೂರು/ಮಾಗಡಿ: ಬೆಂಗಳೂರಿನ ಅರ್ಧ ಭಾಗದ ಜನಕ್ಕೆ ನೀರೊದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಮೂಲವಾಗಿರುವ ಅರ್ಕಾವತಿ ನದಿಯ ಜಲಮೂಲದ ನೆಲೆಗಳನ್ನು, ರಾಜಕಾಲುವೆಗಳನ್ನು ಒತ್ತುವರಿಗಳಿಂದ ತೆರವುಗೊಳಿಸಿ ಅರ್ಕಾವತಿ ನದಿಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಂ.ಜಿ.ಮಂಜುನಾಥ್ ಅಭಿಪ್ರಾಯಪಟ್ಟರು.

ಹೋಬಳಿಯ ಗುಡ್ಡದ ರಂಗನಾಥಸ್ವಾಮಿ ದೇವಾಲಯದ ಬೆಟ್ಟದ ಮೇಲೆ ತಾಲೂಕು ಕಸಾಪ ಏರ್ಪಡಿಸಿದ್ದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ಮಾಡಿದ ಅವರು, ಮಾಗಡಿ ತಾಲೂಕಿನ ಸಾಂಸ್ಕೃತಿಕ ಪರಂಪರೆ ಮಹತ್ವದ್ದಾಗಿದೆ. ಮಾಗಡಿ ತಾಲೂಕಿನಲ್ಲಿ ನಾಲ್ಕೂವರೆ ಸಾವಿರ ವರ್ಷಗಳಿಂದಲೂ ಜನವಸತಿ ಇತ್ತು ಎಂದರೆ ಕ್ರಿ.ಪೂ ೨೫೦೦ ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಸೇರಿದ ಶಿಲಾಯುಗದ ವಸ್ತುಗಳು ಉತ್ಖನನದಲ್ಲಿ ಸಿಕ್ಕಿರುವುದೇ ಸಾಕ್ಷಿ ಎಂದು ಹೇಳಿದರು.

ತಾಲೂಕಿನಲ್ಲಿ ಅವಸಾನದ ಅಂಜಿನಲ್ಲಿರುವ ಜಿಂಕೆ, ಕೃಷ್ಣಮೃಗಳನ್ನು ರಕ್ಷಿಸಬೇಕಿದೆ. ಮಾಗಡಿ ಕೋಟೆಯ ಉತ್ಖನನ ಆಗಬೇಕಿದೆ. ಇದರಿಂದಾಗಿ ಕೆಂಪೇಗೌಡರ ಕುರಿತಾಗಿ ಮಹತ್ವದ ಮಾಹಿತಿಗಳು ದೊರಕುತ್ತವೆ ಎಂದು ಹೇಳಿದರು.

ಮಾಗಡಿ ತಾಲೂಕಿನಲ್ಲಿ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ ತಾಲೂಕಾದ್ಯಂತ ಇರುವ ಮಾಸ್ತಿಗಲ್ಲು ಮತ್ತು ವೀರಗಲ್ಲು ಶಿಲ್ಪಗಳು ಮತ್ತಿತರೆ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಕೇಂದ್ರ ಕಸಾಪ ಮೊದಲ ಅಧ್ಯಕ್ಷರು ಹಾಗೂ ಸಾಹಿತ್ಯ ಸಮ್ಮೇಳನದ ಮೊದಲ ಅಧ್ಯಕ್ಷರು ಮಾಗಡಿ ತಾಲೂಕಿನ ಎಚ್.ವಿ.ನಂಜುಂಡಯ್ಯ ಎಂಬುದು ನಮ್ಮ ಹೆಮ್ಮೆ. ಇದೇ ರೀತಿ ದಲಿತ ಕವಿ ಸಿದ್ದಲಿಂಗಯ್ಯನವರು ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂಬುದನ್ನು ಇಂದಿನ ತಲೆಮಾರಿಗೆ ತಿಳಿಸಬೇಕು. ಮುಂದಿನ ತಿಂಗಳು ಕನ್ನಡ ಭವನ ಮತ್ತು ಪತ್ರಕರ್ತರ ಭವನಕ್ಕೆ ಗದ್ದುಲಿಪೂಜೆ ಮಾಡಲಾಗುವುದು ಎಂದು ಪ್ರಕಟಿಸಿದರು.

ಗ್ಯಾರಂಟಿ ಯೋಜನೆಗಳ ಅನುಸ್ಷಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಕಲ್ಯಾ ಸಾತನೂರು ಕುರಿತಾಗಿ ಇನ್ನಷ್ಟು ಸಂಶೋಧನೆಗಳಾಗಬೇಕು. ಯಾವುದೇ ಭಾಷೆಯನ್ನು ನಾವು ದ್ವೇಷಿಸಬಾರದು. ಸತ್ಯವನ್ನು ಅರಿಯದೆ ಮಾತನಾಡಬಾರದು. ಕನ್ನಡ ಸಾಹಿತ್ಯವನ್ನು ಬೂಸ ಸಾಹಿತ್ಯ ಎಂದ ಬಸವಲಿಂಗಪ್ಪ ಅವರನ್ನು ಕ್ಷಮೆ ಕೇಳಿಸಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ತನಕ ನಾವು ವಿದ್ಯಾರ್ಥಿ ದೆಸೆಯಲ್ಲಿಯೇ ಹೋರಾಟ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಂಡರು.

ಸಾಹಿತಿ ಸಾ.ಸೋಮೇಶ್ವರ್ ಮಾತನಾಡಿ, ಇಡೀ ದೇಶವನ್ನು ಬದಲಿಸಬಲ್ಲ ಶಕ್ತಿ ಶಿಕ್ಷಕರಲ್ಲಿ ಇರುತ್ತದೆ. ಕನ್ನಡ ದೇಶ ಎಂಬ ಪದ ಮಹಾಭಾರತದ ಕಥೆಯಲ್ಲಿಯೇ ಭೀಷ್ಮ ಸಹದೇವನೊಂದಿಗೆ ಮಾತನಾಡುವಾಗ ಮಹಿಷಿಕ, ವನವಾಸಿಕ, ಕುಂತಳ ಹಾಗೂ ಕರ್ನಾಟಿಕ ಎಂಬ ಪ್ರದೇಶಗಳು ಬಲಿಷ್ಟವಾಗಿವೆ ಅಲ್ಲಿ ಯುದ್ದ ಮಾಡಿ ಬರಬೇಕಿದೆ ಎಂದು ತಿಳಿಸಿರುವ ಅಂಶವಿದೆ. ಇದರ ಪೂರ್ಣ ವಿವರಗಳನ್ನು ಸ್ಕಂದ ಪುರಾಣಗಳಲ್ಲಿ ನೋಡಬಹುದಾಗಿದೆ ಎಂದು ತಿಳಿಸಿದರು.

ಭುವನೇಶ್ವರಿ ದೇವಿಗೆ ಜಯವಾಗಲಿ ಎಂದು ಬರಿಮಾತಿನಲ್ಲಿ ಹೇಳಿದರೆ ಸಾಲದು. ಮೂರು ಲೋಕದ ದೇವಿಯಾಗಿದ್ದವರು ಭುವನೇಶ್ವರಿ ದೇವಿ. ಇದರ ಕುರಿತಾಗಿ ಕೇರಳಾ ರಾಜ್ಯದಲ್ಲಿ ಹದಿನಾರು ಭುವನೇಶ್ವರಿ ದೇವಾಲಯಗಳಿವೆ. ಆಂಧ್ರ ಪ್ರದೇಶದಲ್ಲಿ ನಾಲ್ಕು, ತಮಿಳುನಾಡಿನಲ್ಲಿ ಒಂಬತ್ತು ಮತ್ತು ಉತ್ತರ ಭಾರತ ಅನೇಕ ರಾಜ್ಯಗಳಲ್ಲಿ ಭುವನೇಶ್ವರಿ ದೇವಾಲಯವಿದೆ. ಆದರೆ ಕರ್ನಾಟಕದಲ್ಲಿ ಒಂದೇ ಒಂದು ಭುವನೇಶ್ವರಿ ದೇವಿ ಎಂದು ಲಿಂಗಾಕಾರದಲ್ಲಿ ಪೂಜೆ ಮಾಡುತಿದ್ದೇವೆ ಎಂದು ಇದು ಸಮ್ಮತವೇ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಮುನಿರಾಜಪ್ಪ. ಮಂಜುನಾಥ್. ಗಂಗಾಧರ್, ತಿಪ್ಪಸಂದ್ರ ಪದ್ಮನಾಭ್ ಮಾತನಾಡಿದರು. ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ, ಉಮೇಶ್, ಡಾ,ಚೇತನ್ ಕುಮಾರ್.,ರಾಮಸ್ವಾಮಿ, ಪಾನ್ಯಂ ನಟರಾಜ್, ತಿಪ್ಪಸಂದ್ರ ವೆಂಕಟೇಶ್, ನಟರಾಜ್, ಜಯರಾಂ. ಕಲ್ಕರೆ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

6ಕೆಆರ್ ಎಂಎನ್ 8,9.ಜೆಪಿಜಿ

8. ಕುದೂರು ಹೋಬಳಿ ಗುಡ್ಡದ ರಂಗನಾಥಸ್ವಾಮಿಯ ಬೆಟ್ಟದ ಮೇಲೆ ಏರ್ಪಡಿಸಿದ್ದ ಮಾಗಡಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ.ಎಂ.ಜಿ.ಮಂಜುನಾಥ್, ಎಚ್.ಎಂ.ರೇವಣ್ಣ, ಸಾಲುಮರದ ತಿಮ್ಮಕ್ಕ ಹಾಜರಿದ್ದರು.

9. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.