18 ಬಿಜೆಪಿ ಶಾಸಕರ ಅಮಾನತು ಆದೇಶ ಹಿಂಪಡೆಯಿರಿ

| Published : Mar 25 2025, 12:46 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರದಿಂದ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಿ ಮುಸ್ಲಿಮರ ತುಷ್ಟೀಕರಣ, ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲತೆ, 18 ಶಾಸಕರ ಅಮಾನತು ಕ್ರಮ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟಿಸಲಾಯಿತು.

- ಸ್ಪೀಕರ್‌ ಆದೇಶ ಮರುಪರಿಶೀಲನೆಗೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆಯಲ್ಲಿ ಮುಖಂಡರ ಒತ್ತಾಯ- - -

* ಆರೋಪಗಳೇನು?: - ಪರಿಶಿಷ್ಟರಿಗೆ ಕಳೆದ 3 ವರ್ಷದಲ್ಲಿ ₹39 ಸಾವಿರ ಕೋಟಿ ಮೀಸಲಿಟ್ಟಿದ್ದರೂ, ಬೇರೆ ಉದ್ದೇಶಕ್ಕೆ ಬಳಸಿ ಸರ್ಕಾರ ಅನ್ಯಾಯ - ರೈತರ ಜಮೀನಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸುವ ವೆಚ್ಚವನ್ನು ₹2 ಲಕ್ಷಕ್ಕೆ ಹೆಚ್ಚಿಸಿ, ರೈತ ವಿರೋಧಿ ನೀತಿ

- ಸರ್ಕಾರ ಹಾಲು, ವಿದ್ಯುತ್‌, ಬಸ್‌ ಪ್ರಯಾಣ ದರ, ಮದ್ಯ, ಸ್ಟ್ಯಾಂಪ್ ಶುಲ್ಕ ಏರಿಸಿದ್ದು ಜನರಿಗೆ ತೀವ್ರ ಸಂಕಷ್ಟ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ ಸರ್ಕಾರದಿಂದ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಿ ಮುಸ್ಲಿಮರ ತುಷ್ಟೀಕರಣ, ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲತೆ, 18 ಶಾಸಕರ ಅಮಾನತು ಕ್ರಮ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟಿಸಲಾಯಿತು.

ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟು, ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯಪಾಲರು, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಕ್ಷದ ಮುಖಂಡರು ಮಾತನಾಡಿ, ಮುಸ್ಲಿಮರ ತುಷ್ಟೀಕರಣಕ್ಕೆ ನಿಂತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡಲು ನಿರ್ಧರಿಸಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲಾಗದೇ, ಗ್ಯಾರಂಟಿಗಾಗಿ ರಾಜ್ಯವನ್ನೇ ಸಾಲ, ಸಂಕಷ್ಟದ ಕೂಪಕ್ಕೆ ತಳ್ಳಿದೆ ಎಂದು ದೂರಿದರು.

ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಸಮರ್ಪಕವಾಗಿ ಖರ್ಚು ಮಾಡದ ಕಾಂಗ್ರೆಸ್‌ ಸರ್ಕಾರ ತನ್ನ ಲೋಪ, ಆಡಳಿತ ವೈಫಲ್ಯ ಮುಚ್ಚಿ ಹಾಕಲು 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಸಸ್ಪೆಂಡ್ ಮಾಡಿದೆ. ಆ ಮೂಲಕ ರಾಜ್ಯದ ಜನತೆಗೆ ಅವಮಾನಿಸಿದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಶಾಸಕರನ್ನು ಸಸ್ಪೆಂಡ್ ಮಾಡಿದ್ದು, ಹಿಂದೆ ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ಪೀಕರ್ ಬಳಿ ನುಗ್ಗಿ ಕಾಂಗ್ರೆಸ್ಸಿಗರು ಏನೆಲ್ಲಾ ಮಾಡಿದ್ದರು ಎಂಬುದನ್ನು ರಾಜ್ಯದ ಜನ ಮರೆತಿಲ್ಲ ಎಂದರು.

ಶಾಸಕರ ಸಂವಿಧಾನದತ್ತ ಹಕ್ಕನ್ನು ಕಿತ್ತುಕೊಳ್ಳುವಂತಹ ಸಂವಿಧಾನ ಬಾಹಿರ ಕ್ರಮ ಕೈಗೊಂಡ ಸ್ಪೀಕರ್ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತೇವೆ. ಸ್ಪೀಕರ್ ತಮ್ಮ ತೀರ್ಮಾನ ಮರುಪರಿಶೀಲಿಸಿ ಅಮಾನತು ಆದೇಶ ಕೂಡಲೇ ಹಿಂಪಡೆಯಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಹೊರ ದೇಶದಲ್ಲಿ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳ ಸಹಾಯಧನ ₹20 ಲಕ್ಷದಿಂದ ₹30 ಲಕ್ಷಕ್ಕೆ ಹೆಚ್ಚಿಸಿರುವುದು, ಶಾದಿಭಾಗ್ಯಕ್ಕೆ ಹಣ ನೀಡುವ ನಿರ್ಧಾರ ಕೈಗೊಂಡು, ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗಾಗಿ ವಿಶೇಷ ಅನುದಾನ ನೀಡುವುದು, ಕಾಂಗ್ರೆಸ್‌ನ ತುಷ್ಟೀಕರಣದ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದು ದೂರಿದರು.

ಡಾ.ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಸೇರಿ ವಿವಿಧ ನ್ಯಾಯಾಲಯಗಳು ತೀರ್ಪು ನೀಡಿವೆ. ಆದರೂ, ಕಾಂಗ್ರೆಸ್ ಸರ್ಕಾರವು ಸರ್ಕಾರಿ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಿ, ಸಂವಿಧಾನಕ್ಕೆ ಅವಮಾನಿಸಿದೆ. ಇಂತಹ ಹಿಂದು ವಿರೋಧಿ ನಿರ್ಧಾರಗಳಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಬೇಕಾದೀತು ಎಂದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಬಸವರಾಜ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಕುಮಾರ ನಾಯ್ಕ, ಐರಣಿ ಅಣ್ಣೇಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಎಚ್.ಪಿ.ವಿಶ್ವಾಸ, ಪಾಲಿಕೆ ವಿಪಕ್ಷ ಮಾಜಿ ನಾಯಕ ಆರ್.ಎಲ್.ಶಿವಪ್ರಕಾಶ, ಕೃಷ್ಣಪ್ಪ, ತಾರೇಶ ನಾಯ್ಕ, ಮಾಯಕೊಂಡ ಸಚಿನ್, ಕೆಟಿಜೆ ನಗರ ಬಿ.ಆನಂದ, ಲೋಕೇಶ, ಲಿಂಗರಾಜ ರೆಡ್ಡಿ, ಶಾಬನೂರು ರಾಜು, ಶಿವರಾಜ ಪಾಟೀಲ, ಎಚ್.ಎನ್.ಶಿವಕುಮಾರ ಇತರರು ಇದ್ದರು.

- - - -24ಕೆಡಿವಿಜಿ3, 4, 5.ಜೆಪಿಜಿ:

18 ಶಾಸಕರ ಅಮಾನತು, ಮುಸ್ಲಿಮರ ತುಷ್ಟೀಕರಣದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ದಾವಣಗೆರೆಯಲ್ಲಿ ಸೋಮವಾರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.