ಆರ್‌ಎಸ್‌ಎಸ್‌ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿದಾಗ ಯಾರೂ ಬೆಂಬಲಕ್ಕೆ ಬಂದಿರಲಿಲ್ಲ. ಹೀಗಾಗಿ, ಮಗನ ಬೆಂಬಲಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದು, ಆರ್‌ಎಸ್‌ಎಸ್‌ ನಿಷೇಧಿಸಬೇಕು ಎನ್ನುತ್ತಿದ್ದಾರೆ.

ಹುಬ್ಬಳ್ಳಿ:

ಕಾಂಗ್ರೆಸ್ಸಿನಲ್ಲಿ ಸದ್ಯ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಅಲ್ಲಿನ ಪರಿಸ್ಥಿತಿ ಅವಲೋಕಿಸಿದರೆ ನ. 14ರ ಬಳಿಕ ಕಾಂಗ್ರೆಸ್ಸಿನಲ್ಲಿ ಕ್ರಾಂತಿಯಾಗುವುದು ನಿಶ್ಚಿತವೆಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ. 14ರ ನಂತರ ರಾಜ್ಯ ಸರ್ಕಾರದಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ಸ್ಪಷ್ಟವಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಸತೀಶ ಜಾರಕಿಹೊಳಿ ಹೀಗೆ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಈಗ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್‌ ನಾಯಕರು ಆರ್‌ಎಸ್‌ಎಸ್‌ ಬ್ಯಾನ್‌ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರಕ್ಕೆ ಧೈರ್ಯವಿದ್ದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಆರ್‌ಎಸ್‌ಎಸ್‌ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿದಾಗ ಯಾರೂ ಬೆಂಬಲಕ್ಕೆ ಬಂದಿರಲಿಲ್ಲ. ಹೀಗಾಗಿ, ಮಗನ ಬೆಂಬಲಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದು, ಆರ್‌ಎಸ್‌ಎಸ್‌ ನಿಷೇಧಿಸಬೇಕು ಎನ್ನುತ್ತಿದ್ದಾರೆ. ರಾಜ್ಯದ ಗೃಹ ಸಚಿವರಾಗಿದ್ದ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹಾಡಿ ಹೊಗಳಿದ್ದರು. ಈಗ ವಿರೋಧಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ರಾಜ್ಯ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಮತವಿಲ್ಲ. ನಾವು ವಿರೋಧ ಪಕ್ಷವಾಗಿ ಸಮರ್ಪಕ ಕೆಲಸ ಮಾಡುತ್ತಿದ್ದೇವೆ. ಕೆಲವರು ವೈಯಕ್ತಿಯ ವಿಷಯಕ್ಕೆ ಸಭೆ ಮಾಡಿರಬಹುದು. ಆದರೆ, ಅದು ಪ್ರತ್ಯೇಕ ಅಥವಾ ಭಿನ್ನರ ಸಭೆಯಲ್ಲ. ಎಲ್ಲವನ್ನು ನಿಭಾಯಿಸುವ ಶಕ್ತಿ ನಮ್ಮ ಹೈಕಮಾಂಡ್‌ಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಟೆಂಗಿನಕಾಯಿ ಪ್ರತಿಕ್ರಿಯಿಸಿದರು.