ಒಂದು ಕಾಲದಲ್ಲಿ ಬರದಿಂದ ಬರಡಾಗಿದ್ದ ವಿಜಯಪುರ ಜಿಲ್ಲೆಯಲ್ಲೀಗ ಮಲೆನಾಡಿನ ಅನುಭವವಾಗುತ್ತಿದೆ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಆವರಣ ಹಚ್ಚ ಹಸಿರಿನಿಂದ ಕೂಡಿದ್ದು, ವಿದ್ಯಾಭ್ಯಾಸಕ್ಕೆ ಹೇಳಿ ಮಾಡಿಸಿದಂತಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ದೇಶದಲ್ಲಿ ವೈದ್ಯಕೀಯ ಸೇವೆ ಹೊಸ ಮಜಲು ತಲುಪಿದ್ದು, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನದ ಸದ್ಬಳಕೆಯಾಗುತ್ತಿದೆ ಎಂದು ನವದೆಹಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿ ಅಧ್ಯಕ್ಷ ಡಾ.ಎಂ.ಕೆ.ರಮೇಶ ಹೇಳಿದರು.ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಒಂದು ಕಾಲದಲ್ಲಿ ಬರದಿಂದ ಬರಡಾಗಿದ್ದ ವಿಜಯಪುರ ಜಿಲ್ಲೆಯಲ್ಲೀಗ ಮಲೆನಾಡಿನ ಅನುಭವವಾಗುತ್ತಿದೆ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಆವರಣ ಹಚ್ಚ ಹಸಿರಿನಿಂದ ಕೂಡಿದ್ದು, ವಿದ್ಯಾಭ್ಯಾಸಕ್ಕೆ ಹೇಳಿ ಮಾಡಿಸಿದಂತಿದೆ. ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಈಗ ವೃತ್ತಿ ಜೀವನದ ಹೊಸದೊಂದು ಅಧ್ಯಾಯ ಪ್ರಾರಂಭವಾಗಿದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಧ್ಯಯನದಲ್ಲಿ ನಿರತರಾಗಬೇಕು. ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಯುವವೈದ್ಯರು ಸಹಾನುಭೂತಿ ಮತ್ತು ಕರುಣೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಿರಂತರವಾಗಿರಬೇಕು ಎಂದು ಸಲಹೆ ನೀಡಿದರು.ದೇಶದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂಟರ್ನೆಟ್ ಸುಧಾರಣೆಯಿಂದಾಗಿ ದೂರದಿಂದಲೇ ರೋಗಿಗೆ ಟೆಲಿಮೆಡಿಸೀನ್ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. ಡಿಜಿಟಲ್ ವೇದಿಕೆಗಳು ವೈದ್ಯರು ರೋಗಿಗಳನ್ನು ಸುಲಭವಾಗಿ ತಲುಪಲು ನೆರವಾಗಿವೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್ ಇಂಟಲಿಜೆನ್ಸ್) ಬಳಕೆಯಿಂದಾಗಿ ರೋಗಗಳ ಗುಣಲಕ್ಷಣಗಳನ್ನು ನಿಖರವಾಗಿ ಗುರುತಿಸಿ ಚಿಕಿತ್ಸೆ ನೀಡಲು ನೆರವಾಗಿವೆ. ರೊಬೊಟಿಕ್ ತಂತ್ರಜ್ಞಾನ ಸರಳ, ಸುಲಭ, ಕಡಿಮೆ ವೆಚ್ಚ ಮತ್ತು ಹೆಚ್ಚು ಗಾಯವಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಲು ವರದಾನವಾಗಿದೆ. ಜಿನೊಮಿಕ್ಸ್ ಮತ್ತು ಪ್ರಿಸೀಷನ್ ಮೆಡಿಸಿನ್ ತಂತ್ರಜ್ಞಾನ, ನ್ಯಾನೋ ಟೆಕ್ನಾಲಜಿ, ರಿಜನರೇಟಿವ್ ಮೆಡಿಸಿನ್ ಮತ್ತು ಸ್ಟಮ್ ಸೆಲ್ ಥೆರಪಿ, ಹೆಲ್ತ್ ಕೇರ್ ಡಾಟಾ ವಿಶ್ಲೇಷಣೆ, ಮೆಡಿಕಲ್ ಡಿವೈಸಿಸ್ ಮತ್ತು ವಿಯರೇಬಲ್ ಟೆಕ್ನಾಲಜಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳ ತ್ವರಿತ ಪತ್ತೆ, ಚಿಕಿತ್ಸೆ ಮತ್ತು ರೋಗಗಳಿಂದ ಗುಣಮಖರಾಗಲು ಅನುಕೂಲ ಒದಗಿಸಿವೆ. ಹೀಗಾಗಿ ಯುವ ವೈದ್ಯರು ಇವುಗಳ ಸದ್ಬಳಕೆ ಮಾಡಿಕೊಂಡು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ನೆರವಾಗಬೇಕು. ಮೊಬೈಲ್ ಮತ್ತು ಅಂತರ್ಜಾಲ ಬಳಕೆ ಗೀಳಿನಿಂದ ಹೊರ ಬರಬೇಕು. ತಂತ್ರಜ್ಞಾನದ ಸದ್ಬಳಕೆಯಾಗಬೇಕು. ವೈದ್ಯರು ಸಂಶೋಧನೆ ನಿರತರಾಗಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬೇಕು ಎಂದವರು ಹೇಳಿದರು.ವಿವಿ ಪ್ರಭಾರ ಕುಲಪತಿ ಡಾ.ಅರುಣ ಇನಾಮದಾರ ವಾರ್ಷಿಕ ವರದಿ ಮಂಡಿಸಿದರು. ಕಳೆದ ಒಂದು ವರ್ಷದಲ್ಲಿ ವಿವಿಯಲ್ಲಿ ನಡೆದ ಸಂಶೋಧನೆಗಳು, ಲಭಿಸಿದ ಮಾನ್ಯತೆಗಳು, ಸಿಕ್ಕ ಪುರಸ್ಕಾರಗಳು, ಮಾನ್ಯತೆಗಳು, ವೈದ್ಯರ ಸಾಧನೆಗಳು, ಮಾಡಿಕೊಳ್ಳಲಾದ ಹೊಸ ಒಡಂಬಡಿಕೆಗಳು, ಮುಂದೆ ಕೈಗೊಳ್ಳಲಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ವ್ಯಾಪ್ತಿಯಲ್ಲಿರುವ ನಾನಾ ಅಂಗ ಸಂಸ್ಥೆಗಳ ಮತ್ತು ಅವುಗಳ ಸಾಧನೆ ವಿವರಿಸಿದರು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಕುಲಸಚಿವ ಡಾ.ಆರ್.ವಿ.ಕುಲಕರ್ಣಿ, ಪರೀಕ್ಷೆ ನಿಯಂತ್ರಕ ಡಾ.ಶಶಿಧರ ದೇವರಮನಿ, ವೈದ್ಯಕೀಯ ವಿಭಾಗದ ಡೀನ್ ಡಾ.ತೇಜಸ್ವಿನಿ ವಲ್ಲಭ, ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಸೈನ್ಸ್ ಮತ್ತು ಟೆಕ್ನಾಲಜಿ ವಿಭಾಗದ ಡೀನ್ ಡಾ.ಎಸ್.ವಿ.ಪಾಟೀಲ ಹಾಗೂ ಕಾನೂನು ವಿಭಾಗದ ಡೀನ್ ಡಾ.ರಘುವೀರ ಕುಲಕರ್ಣಿ, ಡಾ.ಸಚ್ಚಿದಾನಂದ, ಡಾ.ಶ್ರೀನಿವಾಸ ಬಳ್ಳಿ, ಡಾ.ಸ್ನೇಹಾ ಜವಳಕರ, ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಅಶೋಕ ವಾರದ, ಡಾ.ಶ್ರೀಶೈಲ ಗಿಡಗಂಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಸ್ವಾಗತಿಸಿದರು. ಡಾ.ಚಂದ್ರಿಕಾ ದೊಡಿಹಾಳ, ಡಾ.ಆರ್.ವಿ.ಕುಲಕರ್ಣಿ, ಡಾ.ಎಂ.ಎಂ.ಪಾಟೀಲ ಪರಿಚಯಿಸಿದರು.ಡಾ.ತನುಜಾ ಪಟ್ಟಣಕರ, ಡಾ.ವೀಣಾ ಹರವಾಳಕರ ಹಾಗೂ ಡಾ.ಸ್ಮೀತಾ ಮಂಗಳಗಿರಿ ನಿರೂಪಿಸಿದರು.502 ಪದವಿ ಪ್ರದಾನ:
ಡೀಮ್ಡ್ ವಿವಿ ಕುಲಾಧಿಪತಿ ಬಿ.ಎಂ.ಪಾಟೀಲ ಘಟಿಕೋತ್ಸವದ ಪದವಿ ಪ್ರಧಾನ ಮಾಡಿದರು. ಘಟಿಕೋತ್ಸವದಲ್ಲಿ ಒಟ್ಟು 502 ಪದವಿ ಪ್ರದಾನ ಮಾಡಲಾಯಿತು. ಅವುಗಳಲ್ಲಿ 11 ಪಿ.ಎಚ್.ಡಿ., 3 ಎಂ.ಸಿ.ಎಚ್ (ಯುರಾಲಜಿ), 2 ಡಿಎಂ (ಕಾರ್ಡಿಯಾಲಜಿ), 239 ವೈದ್ಯಕೀಯ ಸ್ನಾತಕೋತ್ತರ ಪದವಿ, 3 ಫೆಲೋಶಿಪ್, 156 ಎಂಬಿಬಿಎಸ್ ಪದವಿ, 10 ಸ್ನಾತಕೋತ್ತರ ಅಲೈಡ್ ಹೆಲ್ತ್ ಪದವಿ, 19 ವಿಜ್ಞಾನ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಪದವಿ ಮತ್ತು 13 ಬ್ಯಾಚುಲರ್ ಆಫ್ ಫಿಸಿಯೋಥೆರಪಿ 46 ಅಲೈಡ್ ವಿಜ್ಞಾನ ಪದವಿಗಳು ಸೇರಿವೆ. 28 ಚಿನ್ನದ ಪದಕ, 3 ನಗದು ಬಹುಮಾನ ವಿತರಣೆ:ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 28 ಚಿನ್ನದ ಪದಕಗಳು ಮತ್ತು 3 ನಗದು ಬಹುಮಾನ ಪ್ರದಾನ ಮಾಡಲಾಯಿತು. ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಡಾ.ನರ್ಲಾ ಸುರೇಖಾ ಮತ್ತು ಡಾ.ಶಂಕರ ನಾರಾಯಣನ್ ತಲಾ ಎರಡು ಚಿನ್ನದ ಪದಕ ಪಡೆದರೆ, ಪದವಿ ವೈದ್ಯಕೀಯ ವಿಭಾಗದಲ್ಲಿ ಡಾ.ಯಶ್ ಆರ್ಯ ಐದು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ, ಡಾ.ನಿಶ್ಚಿತಾ ರಾಜ ಮೂರು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ, ಡಾ.ಸಲೋನಿ ವರ್ಮಾ ಎರಡು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ, ಡಾ.ಶಿರೀಷಾ.ಎಂ.ಎಸ್ ಎರಡು ಚಿನ್ನದ ಪದಕ ಪಡೆದರು.
