ಸಂಸ್ಕೃತಿ ಉತ್ಸವಗಳಿಂದ ಸಮಾಜದಲ್ಲಿ ಬದಲಾವಣೆ ಕ್ರಾಂತಿ: ಡಾ.ಸೇಡಂ

| Published : Nov 18 2024, 12:04 AM IST

ಸಂಸ್ಕೃತಿ ಉತ್ಸವಗಳಿಂದ ಸಮಾಜದಲ್ಲಿ ಬದಲಾವಣೆ ಕ್ರಾಂತಿ: ಡಾ.ಸೇಡಂ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ನಗರದ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನ ಗುರುಭವನದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಜರುಗಿದ ಗಣ್ಯರ ಪೂರ್ವಭಾವಿ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ, ಬೀದರ್‌

9 ದಿವಸಗಳ ಕಾಲ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಸುಮಾರು 30 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ರಾಜ್ಯ ಸಭೆ ಮಾಜಿ ಸದಸ್ಯರು ಹಾಗೂ ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ ಡಾ. ಬಸವರಾಜ ಪಾಟೀಲ್‌ ಸೇಡಂ ಹೇಳಿದರು.

ಅವರು ಭಾನುವಾರ ನಗರದ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನ ಗುರುಭವನದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ವಿಕಾಸ ಅಕಾಡೆಮಿ ವತಿಯಿಂದ ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಜರುಗಿದ ಗಣ್ಯರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಕುಂಭಮೇಳ ಬಿಟ್ಟರೆ ಸಮಾಜಮುಖಿಯಾಗಿರುವ ಅತೀ ದೊಡ್ಡ ಕಾರ್ಯಕ್ರಮ ಇದಾಗಿದೆ. ದೇಶದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು. ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕೃತರು ಮಾರ್ಗದರ್ಶನ ಮಾಡುವರು ಎಂದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸದ್ಗುರು ಶಿವಕುಮಾರ ಸ್ವಾಮಿಗಳು, ಈ ಹಿಂದೆ ನಡೆದ ಭಾರತೀಯ ಸಂಸ್ಕೃತಿ ಉತ್ಸವಗಳು ಸಮಾಜದಲ್ಲಿ ಬದಲಾವಣೆಯ ಕ್ರಾಂತಿ ಮಾಡಿದ್ದು 7ನೇ ಭಾರತೀಯ ಸಂಸ್ಕೃತಿ ಉತ್ಸವ ಸಹ ಆ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಇದರಿಂದ ದೇಶದ ಅನೇಕರು ಸ್ಫೂರ್ತಿ ಪ್ರೇರಣೆ ಪಡೆದು ಸಮಾಜದಲ್ಲಿ ಕ್ರಾಂತಿ ಆಗುವುದು ಎಂದು ನುಡಿದರು.

ನಾಡೋಜ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಈ ಹಿಂದೆ ನಡದ 5 ಉತ್ಸವಗಳಲ್ಲಿ ನಾನು ಭಾಗವಹಿಸಿದ್ದೇನೆ. ದೇಶದ ಅನೇಕ ಭಾಗಗಳಿಂದ ಸಾಧಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರೇರಣೆ ನೀಡುವರು ಹಾಗಾಗಿ 7ನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲೂ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಲು ತಿಳಿಸಿದರು.

ಬೀದರ್‌ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಮಾತನಾಡಿ, ನಮ್ಮ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ವಿಕಾಸಕ್ಕಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಇದರ ಲಾಭ ಪಡೆಯಬೇಕು ಎಂದು ತಿಳಿಸಿದರು. ಹಲಸೂರು ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಕಲ್ಯಾಣ ಕರ್ನಾಟಕ ಸಮಗ್ರ ವಿಕಾಸದ ಹಿನ್ನಲೆಯಲ್ಲಿ ವಿಕಾಸ ಅಕಾಡೆಮಿ ಕಳೆದ 20 ವರ್ಷಗಳಿಂದ 9 ಕ್ಷೇತ್ರಗಳಲ್ಲಿ 7 ಜಿಲ್ಲೆಗಳ 48 ತಾಲೂಕುಗಳಲ್ಲಿ ಜಿಲ್ಲಾ, ತಾಲೂಕು ಹಂತದಲ್ಲಿ 23 ಜನರ ತಂಡ ಇದ್ದು ಕೃಷಿ, ಸ್ವಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. 6000 ಮಹಿಳೆಯರಿಗೆ ಹೊಲಿಗೆ ಕಸೂತಿ ತರಬೇತಿ ನೀಡಲಾಗಿದೆ. ಕೃಷಿಯಲ್ಲಿ ಸಾವಯುವ ಕೃಷಿ ಗೋ ಆಧಾರಿತ ಕೃಷಿ ಕುರಿತು ತರಬೇತಿ ಕಾರ್ಯಗಳು ನಡೆದಿದೆ ಜೊತೆಗೆ ಡಾ.ಗುರುರಾಜ ಕರಜಗಿ ಅವರ ನೇತೃತ್ವದಲ್ಲಿ 4 ಬಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಸೃಜನಾತ್ಮಕ ಭೋದನೆ ಕುರಿತು ತರಬೇತಿ ನೀಡಲಾಗಿದೆ. 2025ರ ಜನವರಿ 29ರಿಂದ ಫೆಬ್ರವರಿ 6 ವರೆಗೆ ಕಲಬುರಗಿ ಜಿಲ್ಲೆಯ ಸೇಡಂನ ಬೀರನಳ್ಳಿಯಲ್ಲಿ ನಡೆಯುವ 7ನೇ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಬೀದರ್‌ ಜಿಲ್ಲೆಯಿಂದ 3 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ.ಎಂದು ತಿಳಿಸಿದರು.

ಗುರುದ್ವಾರ ಪ್ರಬಂಧಕ ಸಮಿತಿ ಹಾಗೂ ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಬಲಬೀರ್ ಸಿಂಗ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬಾತಂಬ್ರಾ ಹಾಗೂ ಬಸವ ಮುಕ್ತಿಮಂದಿರದ ಶಿವಯೋಗೇಶ್ವರ ಮಹಾಸ್ವಾಮಿಗಳು, ಮುಚಳಂಬದ ಪ್ರಣವಾನಂದ ಮಹಾಸ್ವಾಮಿಗಳು, ಬೀದರ್‌ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿಗಳು, ಬೀದರ್‌ ಚಿದಂಬರ ಆಶ್ರಮದ ಗಣೇಶಾನಂದ ಸ್ವಾಮೀಜಿಗಳು, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ, ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿಎಸ್‌ ಬಿರಾದಾರ್‌, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಬಿ.ಜಿ ಮೂಲಿಮನಿ, ವಿಕಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಕರ್ನಲ್‌ ಶರಣಪ್ಪ ಶಿಕೇನಪುರೆ, ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್‌ ಖದೀರ್‌ ವೇದಿಕೆ ಮೇಲಿದ್ದರು..

ಇದೇ ವೇಳೆ 7ನೇ ಭಾರತೀಯ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆ ಹಾಗೂ ಕರಪತ್ರಗಳನ್ನು ಪೂಜ್ಯರು ಹಾಗೂ ಗಣ್ಯರು ಬಿಡುಗಡೆಗೊಳಿಸಿದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಯೋಜಕ ಬಸವರಾಜ ಅಷ್ಟಗಿ ಕಾರ್ಯಕ್ರಮ ನಿರೂಪಿಸಿದರು. ವಿಕಾಸ ಅಕಾಡೆಮಿ ನಗರ ಸಂಚಾಲಕ ಕಾಮಶೆಟ್ಟಿ ಚಿಕ್ಕಬಸ್ಸೆ ವಂದಿಸಿದರು.