ಶೋಷಿತ ವರ್ಗಕ್ಕೆ ಕ್ರಾಂತಿಕಾರಿ ಯೋಜನೆ ಜಾರಿ: ಸಚಿವ ಎಚ್‌.ಕೆ. ಪಾಟೀಲ್‌

| Published : Aug 08 2024, 01:31 AM IST

ಸಾರಾಂಶ

ಸಾಮಾಜಿಕ ನ್ಯಾಯದ ವ್ಯವಸ್ಥೆಯಡಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದು ವಿರೋಧ ಪಕ್ಷಗಳಿಗೆ ಬೇಕಿಲ್ಲ. ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ, ಅರಾಜಕತೆ ಉಂಟುಮಾಡುತ್ತಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಆರೋಪಿಸಿದರು.

ಶಿರಹಟ್ಟಿ: ಸಾಮಾಜಿಕ ನ್ಯಾಯದ ಅಡಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಶೋಷಿತ ವರ್ಗ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕ್ರಾಂತಿಕಾರಕ ಬದಲಾವಣೆ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಬುಧವಾರ ಪಟ್ಟಣದ ಛಬ್ಬಿ ರಸ್ತೆಯಲ್ಲಿ ₹೨ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ ಮಾಡಿ ಮಾತನಾಡಿದರು. ಸಾಮಾಜಿಕ ನ್ಯಾಯದ ವ್ಯವಸ್ಥೆಯಡಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದು ವಿರೋಧ ಪಕ್ಷಗಳಿಗೆ ಬೇಕಿಲ್ಲ. ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ, ಅರಾಜಕತೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಒಂದು ಕೋಟಿ ಹತ್ತು ಲಕ್ಷ ಕುಟುಂಬಗಳು ಆರ್ಥಿಕ ಲಾಭದ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಅಧಿಕಾರಕ್ಕೆ ಬರುವ ಮುನ್ನ ನಾವು ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ಮಾಡಿದ್ದೇವೆ ಎಂದು ಹೇಳಿದರು.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಂಸ್ಕೃತಿಕ, ಔದ್ಯೋಗಿಕವಾಗಿ ತೀರಾ ಹಿಂದುಳಿದ ಜನರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯ ಒದಗಿಸಿದ್ದಾರೆ. ಇದನ್ನು ವಿರೋದ ಪಕ್ಷದವರು ಸಹಿಸಿಕೊಳ್ಳಲಾಗದೇ ವೃಥಾ ಆರೋಪ ಮಾಡುತ್ತಿದ್ದಾರೆ ಎಂದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಸತತ ಮಳೆಯಿಂದ ಬಹುತೇಕ ರಸ್ತೆಗಳು ಹಾಳಾಗಿವೆ. ಅದರ ದುರಸ್ತಿಗೆ ಹೆಚ್ಚು ಅನುದಾನ ಅಗತ್ಯವಿದೆ. ಆದ್ದರಿಂದ ಎಲ್ಲ ರಸ್ತೆಗಳ ದುರಸ್ತಿ ಕಾರ್ಯವನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ರಿಂಗ್‌ರೋಡ್ ಅವಶ್ಯಕವಿದ್ದು, ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡಲು ಸೂಚನೆ ನೀಡಿದ್ದೇನೆ. ಜಮೀನು ಸಮೀಕ್ಷೆ ನಡೆಸಲು ತಿಳಿಸಿದ್ದೇನೆ. ಗದಗ ನಗರದಲ್ಲಿ ರಿಂಗ್‌ರೋಡ್‌ ಅಗತ್ಯತೆ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಅದನ್ನು ಕಾರ್ಯಗತಗೊಳಿಸುವ ಭರವಸೆ ನೀಡಿದರು.

ಪ್ರತಿ ೩೦ ಕಿಮೀನಂತೆ ತಲಾ ಒಬ್ಬರಿಗೆ ರಸ್ತೆ ಕಾರ್ಯನಿರ್ವಹಣೆ ಕುರಿತು ಕೆಲಸ ಮಾಡಲು ೧,೫೦೦ ಜನ ಮೈಲ್‌ಕೂಲಿ ಕೆಲಸಕ್ಕೆ ಆಯ್ಕೆ ಮಾಡಲಾಗಿದೆ. ಇನ್ನೂ ೧,೫೦೦ ಜನರ ನೇಮಕ ಮಾಡಲಾಗುವುದು. ಮುಖ್ಯವಾಗಿ ಸೊರಟೂರ ಬೈಪಾಸ್ ರಸ್ತೆಯಿಂದ ಪಟ್ಟಣದ ಶ್ರೀ ಜ. ಫಕೀರೇಶ್ವರ ಮಠಕ್ಕೆ ಸಂಚರಿಸಲು ಅನುಕೂಲವಾಗುವ ರಸ್ತೆ ನಿರ್ಮಿಸಿಕೊಡಲು ಭಕ್ತರು ಮನವಿ ನೀಡಿದ್ದು, ಯೋಜನೆಯ ಬಗ್ಗೆ ವಿವರವನ್ನು ಪಡೆದುಕೊಂಡು ಪ್ರಾಮಾಣಿಕವಾಗಿ ಜಾರಿಗೆಗೊಳಿಸುವ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.

ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ ಸಾನ್ನಿಧ್ಯವಹಿಸಿ ಮಾತನಾಡಿ, ಪರಿಶಿಷ್ಟ ಜನರ ಅಭಿವೃದ್ಧಿ ಹಣ ದುರ್ಬಳಕೆ ಆಗಬಾರದು. ಅದು ಯಾವುದೇ ಸರ್ಕಾರ ಇರಬಹುದು. ಪರಿಶಿಷ್ಟ ಜನರ ಹಣ ದುರ್ಬಳಕೆಯಾದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ಅಂತಹ ಕೃತ್ಯಗಳು ನಡೆಯಬಾರದು ಎಂದು ಹೇಳಿದರು.

ಜ. ಫಕೀರ ದಿಂಗಾಲೇಶ್ವರ ಶ್ರೀ ಮಾತನಾಡಿ, ಭಕ್ತರ ಬಹುದಿನಗಳ ಬೇಡಿಕೆಯಾದ ಬೈಪಾಸ್ ರಸ್ತೆ ಮೂಲಕ ಮಠಕ್ಕೆ ತಲುಪುವ ರಸ್ತೆ ಅಗತ್ಯವಾಗಿದ್ದು, ವಿಶೇಷವಾಗಿ ಜಾತ್ರೆಯ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿ ಭಕ್ತರಿಗೆ ಸಮಸ್ಯೆಯಾಗಿದೆ. ಆದ್ದರಿಂದ ರಸ್ತೆ ಅಗತ್ಯವಾಗಿದ್ದು, ಲೋಕೋಪಯೋಗಿ ಇಲಾಖೆ ಸಚಿವರು ಅದನ್ನು ಕಾರ್ಯಗತಗೊಳಿಸಬೇಕೆಂದು ಕೋರಿದರು.

ವಾಲ್ಮೀಕಿ ಸಮಾಜದ ತಾಲೂಕು ಘಟಕ ಅಧ್ಯಕ್ಷ ಶಿವನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಚಂದ್ರು ಲಮಾಣಿ, ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ ಮಾತನಾಡಿದರು.

ಮಾಜಿ ಸಂಸದ ಐ.ಜಿ. ಸನದಿ, ಆನಂದ ಗಡ್ಡದೇವರಮಠ, ಟಿ. ಈಶ್ವರ, ಎಚ್.ಡಿ. ಮಾಗಡಿ, ಸಣ್ಣವೀರಪ್ಪ ಹಳ್ಳೆಪ್ಪನವರ, ಯಲ್ಲಪ್ಪ ಬಂಗಾರಿ, ಬಸಣ್ಣ ನಾಯ್ಕರ, ಶಿವಪ್ರಕಾಶ ಮಹಾಜನಶೆಟ್ಟರ, ಡಿ.ಕೆ. ಹೊನ್ನಪ್ಪನವರ, ಮಂಜುನಾಥ ಘಂಟಿ, ಪ್ರಶಾಂತ ವರಗಪ್ಪನವರ, ಶರಣಯ್ಯ ಕುಲಕರ್ಣಿ, ಎಂ.ಕೆ. ಲಮಾಣಿ, ಎಲ್.ಡಿ. ಪಾಟೀಲ, ಮುತ್ತಣ್ಣ ಸಂಕನೂರ ಇದ್ದರು.