ತಮ್ಮ ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಝೊಮೊಟೊ ಡೆಲವರಿ ಹುಡುಗರು ಕಳ‍ವು ಮಾಡಿದ್ದಾರೆ ಎಂದು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಮನೆಯ ನೀರಿನ ಸಂಪ್‌ನ ಕಬ್ಬಿಣದ ಮುಚ್ಚಳವನ್ನು ಝೊಮೊಟೊ ಡೆಲವರಿ ಹುಡುಗರು ಕಳ‍ವು ಮಾಡಿದ್ದಾರೆ ಎಂದು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಆರೋಪಿಸಿದ್ದಾರೆ.

ಈ ಬಗ್ಗೆ ‘ಎಕ್ಸ್‌’ ತಾಣದಲ್ಲಿ ವಿಡಿಯೋ ಸಮೇತ ರಿಕ್ಕಿ ಪೋಸ್ಟ್ ಮಾಡಿದ್ದಾರೆ. ಈ ದೂರಿಗೆ ಪ್ರತಿಕ್ರಿಯಿಸಿರುವ ಝೊಮೊಟೊ ಕಂಪನಿ, ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದೆ.

‘ನಮ್ಮ ಮನೆಯಲ್ಲಿ ದೊಡ್ಡ ಕಳ್ಳತನವಾಗಿದೆ. ನಿಮ್ಮ @zomato @zomatocare ಹುಡುಗ, ನಮ್ಮ ಮನೆ ಸಂಪ್-ಕವರ್ ಅನ್ನು ಕದ್ದಿದ್ದಾನೆ. ಇದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಕಾಣುತ್ತದೆ. ಸಂಜೆ 6 ಗಂಟೆಗೆ ಈ ಕಳವು ನಡೆದಿದೆ. ಇದು ಮೊದಲ ಬಾರಿಗೆ ನಡೆದಿಲ್ಲ. ಕೃತ್ಯ ಎಸಗುವ 15 ನಿಮಿಷ ಮುನ್ನ ಮನೆ ಬಳಿ ಬಂದು ರೇಖಿ (ಭದ್ರತಾ ವ್ಯವಸ್ಥೆ ಪರಿಶೀಲನೆ) ಮಾಡಿದ್ದಾರೆ. ನಂತರ ಇಬ್ಬರು ಬೈಕ್​​ನಲ್ಲಿ ಬಂದು ಸಂಪ್ ಕವರ್ ಕದ್ದಿದ್ದಾರೆ’ ಎಂದು ರಿಕ್ಕಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯ ಎರಡು ವಿಡಿಯೋಗಳನ್ನು ಲಗತ್ತಿಸಿದ್ದಾರೆ.

‘ಎಕ್ಸ್‌’ ತಾಣದಲ್ಲಿ ಈ ಪೋಸ್ಟ್‌ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವು ಜನ ಸಂಪ್ ಭದ್ರತೆ ಕುರಿತು ‘ಉಚಿತ’ ಸಲಹೆ ನೀಡಿದ್ದಾರೆ. ಇನ್ನು ಝೊಮೊಟೊ ಕಂಪನಿ, ‘ನಮ್ಮ ಕಂಪನಿಯ ಡೆಲವರಿ ಹುಡುಗರ ಈ ರೀತಿಯ ನಡವಳಿಕೆ ಅಕ್ಷಮ್ಯ. ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದಿದೆ. ಅಲ್ಲದೆ, ತಮ್ಮ ಮೊಬೈಲ್ ಸಂಖ್ಯೆ ಹಂಚಿಕೊಳ್ಳುವಂತೆ ಕಂಪನಿ ವಿನಂತಿಸಿದೆ. ಆದರೆ ಇದಕ್ಕೆ ರಿಕ್ಕಿ ತೀವ್ರ ಬೇಸರ ವ್ಯಕ್ತಪಡಿಸಿ ಮೊಬೈಲ್ ಸಂಖ್ಯೆ ನೀಡಲು ನಿರಾಕರಿಸಿದ್ದಾರೆ.