ದೇಶದ ಜನರ ಧಾರ್ಮಿಕ ಹಕ್ಕಿನ ಮೇಲೆ ಸವಾರಿ: ಸಾಹಿತಿ ಆನಂದ್ ಮೂರ್ತಿ

| Published : May 25 2024, 12:46 AM IST

ಸಾರಾಂಶ

ಬೌದ್ಧಧರ್ಮ ಎಂಬುದು ಒಂದು ದೊಡ್ಡ ಸಾಗರವಿದ್ದಂತೆ. ಅದರ ಬಗ್ಗೆ ನನಗೆ ಗೊತ್ತಿರುವುದು ಕಣ ಮಾತ್ರ ಎಂದು ಶಂಕರಪ್ಪನವರು ಹೇಳುತ್ತಿದ್ದರು, ಬುದ್ಧಗುರುಗಳೇ ಹಾಗೆ ಹೇಳಿದ ಮೇಲೆ ನಾವೆಲ್ಲಾ ಕಣದೊಳಗಿನ ಅಣು ಮಾತ್ರ

ಕನ್ನಡಪ್ರಭ ವಾರ್ತೆ ತುಮಕೂರು

ಒಂದು ದೇವಾಲಯಕ್ಕೆ ನೀವೆಲ್ಲಾ ಹೋಗಲೇಬೇಕೆಂಬ ಪರೋಕ್ಷ ಒತ್ತಡವನ್ನು ದೇಶದಲ್ಲಿ ಸೃಷ್ಟಿಯಾಗುವಂತೆ ಮಾಡಲು ಹೊರಟಿರುವುದು, ದೇಶದ ಜನರ ಧಾರ್ಮಿಕ ಹಕ್ಕಿನ ಮೇಲೆ ಸವಾರಿ ಮಾಡುತ್ತಿರುವುದು, ಮಾನವ ಹಕ್ಕುಗಳ ಧಮನಕಾರಿ ಸೂಚನೆಗಳಾಗಿವೆ ಎಂದು ಸಾಹಿತಿ ಹಾಗೂ ಬರಹಗಾರ ಜಿ.ವಿ.ಆನಂದಮೂರ್ತಿ ತೀವ್ರ ಕಳವಳ ವ್ಯಕ್ತ ಪಡಿಸಿದರು. ವಿಜಯನಗರದ ಸರ್ವೋದಯ ಶಾಲೆಯ ಆವರಣದಲ್ಲಿ ಬೋಧಿ ಮಂಡಲ ಮತ್ತು ಹಳೆಹಟ್ಟಿ ಸಖೀಗೀತ ಪ್ರಕಾಶನ ಏರ್ಪಡಿಸಿದ್ದ ಬುದ್ಧಪೂರ್ಣಿಮೆ ಕಾರ್ಯಕ್ರಮದಲ್ಲಿ ಬುದ್ಧಗುರು ಕೆ.ಎಂ.ಶಂಕರಪ್ಪನವರ ‘ಬುದ್ಧ ಬರಲಿ ನಮ್ಮೂರಿಗೆ’ಪುಸ್ತಕ ಬಿಡುಗಡೆಯಲ್ಲಿ ಪುಸ್ತಕ ಕುರಿತು ಅವರು ಮಾತನಾಡಿದರು.

ಒಮ್ಮೆ ರಾಜ ಬಿಂದುಸಾರನು ಬುದ್ಧನಿಗೆ, ನನಗೆ ದೇಶದ ಪ್ರಜೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ನೀನೊಬ್ಬ ಸಂತನಾಗಿ ಸಾವಿರಾರು ಶಿಷ್ಯರನ್ನು ಹೇಗೆ ನಿಭಾಯಿಸುತ್ತಿಯಾ? ಎಂದು ಕೇಳಿದಾಗ, ಬುದ್ಧನು ಯಜ್ಞ-ಯಾಗಾದಿಗಳನ್ನು ಮಾಡುವುದನ್ನು ನಿಲ್ಲಿಸಿ, ಇವುಗಳಿಂದ ಏನೂ ನೆರವೇರುವುದಿಲ್ಲ, ರೈತನಿಗೆ ಸಕಾಲದಲ್ಲಿ ಬಿತ್ತುವ ಬೀಜಗಳನ್ನು ಒದಗಿಸು, ಕುಶಲ ಕರ್ಮಿಗಳಿಗೆ ಕೆಲಸ ಕೊಡು, ಆಗ ಅವರೆಲ್ಲಾ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಾರೆ, ಇದರಿಂದ ಸಕಾಲದಲ್ಲಿ ತೆರಿಗೆ ಪಾವತಿಸುವುದರಿಂದ ರಾಜ್ಯ ಸುಭಿಕ್ಷವಾಗುತ್ತದೆ ಎಂದು ಹೇಳಿದರು.

ಕುರುಡಾಗಿರುವ ರಾಜಪ್ರಭುತ್ವಕ್ಕೆ ಬುದ್ಧನ ಇಂತಹ ಚಿಂತನೆಗಳನ್ನು ಹೇಳುವ ಮೂಲಕ ಅವರ ಕಿವಿಗಳಿಗೆ ಮುಟ್ಟಿಸಬೇಕು, ಧರ್ಮ, ದೇವರ ಹೆಸರಿನಲ್ಲಿ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವುದು ರಾಜನೀತಿಯಲ್ಲ, ಇಂದು ಕರಾಳ ಮುಖಗಳು ಮಾನವ ಹಕ್ಕುಗಳನ್ನು ದೊಡ್ಡ ಪ್ರಮಾಣದಲ್ಲಿ ಕಸಿದುಕೊಂಡಿರುವುದರಿಂದ ವಿಚಾರಣೆಯೇ ಇಲ್ಲದೇ ನೂರಾರು ಜನರು ಜೈಲಿನಲ್ಲಿರುವಂತಾಗಿರುವುದು ದುರದೃಷ್ಟಕರ ಎಂದರು.

ಬೌದ್ಧಧರ್ಮ ಎಂಬುದು ಒಂದು ದೊಡ್ಡ ಸಾಗರವಿದ್ದಂತೆ. ಅದರ ಬಗ್ಗೆ ನನಗೆ ಗೊತ್ತಿರುವುದು ಕಣ ಮಾತ್ರ ಎಂದು ಶಂಕರಪ್ಪನವರು ಹೇಳುತ್ತಿದ್ದರು, ಬುದ್ಧಗುರುಗಳೇ ಹಾಗೆ ಹೇಳಿದ ಮೇಲೆ ನಾವೆಲ್ಲಾ ಕಣದೊಳಗಿನ ಅಣು ಮಾತ್ರ ಎಂದು ಹೇಳಿದರು.

ಕೆ.ಎಂ.ಶಂಕರಪ್ಪನವರ ‘ಬುದ್ಧ ಬರಲಿ ನಮ್ಮೂರಿಗೆ’ ಪುಸ್ತಕ ಬಿಡುಗಡೆಗೊಳಿಸಿದ ಹೈಕೋರ್ಟ್ ನ ಮಾಜಿ ಅಡ್ವೋಕೇಟ್‌ ಜನರಲ್ ರವಿವರ್ಮ ಕುಮಾರ್ ಮಾತನಾಡಿ, ಬೌದ್ಧಧರ್ಮದ ನಂತರ ಬಂದ ಹಿಂದೂ ಧರ್ಮವು ಬೌಧ್ಧ ದರ್ಮವನ್ನು ನಾಶ ಮಾಡಿತು. ಏಕೆಂದರೆ ಬೌದ್ಧಧರ್ಮ ಹಿಂದೂ ಧರ್ಮಕ್ಕೆ ದೊಡ್ಡ ಸವಾಲಾಗಿತ್ತು, ಬೌದ್ಧ ಸ್ಥೂಪಗಳನ್ನು ನಾಶಗೊಳಿಸಿ ಹಿಂದೂ ದೇವಾಲಯಗಳನ್ನಾಗಿ ಮಾಡಲಾಯಿತು, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಬೌಧ್ಧಧರ್ಮ ನಾಶವಾಯಿತು. ಡಾ. ಅಂಬೇಡ್ಕರ್‌ ಅವರು ಬೌದ್ಧಧರ್ಮದಲ್ಲಿ ಮಾತ್ರ ಮಾನವನ ಪ್ರೀತಿ, ಕರುಣೆ, ಮೈತ್ರಿ ಕಾಣಲು ಸಾಧ್ಯ, ಹಿಂದೂ ಧರ್ಮದಲ್ಲಿ ಮನುಷ್ಯ ಮನುಷ್ಯರನ್ನು ಕೀಳು ಮತ್ತು ತುಚ್ಚವಾಗಿ ಕಾಣಲಾಗುತ್ತಿದೆ ಎಂದು ಹೇಳಿದ್ದರು,ಆದ್ದರಿಂದಲೇ ಅಂಬೇಡ್ಕರ್ ಬೌದ್ಧಧರ್ಮಕ್ಕೆ ಹೋದರು ಎಂದು ಹೇಳಿದರು.

ಡಾ.ಎಚ್.ವಿ.ರಂಗಸ್ವಾಮಿಯವರು ಬೌದ್ಧಧರ್ಮದ ಪಂಚಶೀಲಗಳನ್ನು ವಿವರಿಸಿದರು, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಕೆ.ಎಂ.ಶಂಕರಪ್ಪನವರ ಮಗಳು ಕೆ.ಎಸ್.ಸ್ನೇಹಲತಾ ಮಾತನಾಡಿದರು.

ಚಿಂತಕ ಕೆ.ದೊರೈರಾಜ್‌ ಅಧ್ಯಕ್ಷತೆ ವಹಿಸಿದ್ದರು, ಪುಸ್ತಕದ ಪ್ರಕಾಶಕ ಡಾ.ನರಸಿಂಹಮೂರ್ತಿ ಹಳೆಹಟ್ಟಿ ಉಪಸ್ಥಿತರಿದ್ದರು.

ಸಾಹಿತಿ ಗುರುಪ್ರಸಾದ್‌ ಕಂಟಲಗೆರೆ ನಿರೂಪಿಸಿದರು, ಬೋಧಿಮಂಡಲದ ನಟರಾಜಪ್ಪ ಸ್ವಾಗತಿಸಿ, ವಂದಿಸಿದರು.