ಹಕ್ಕು, ಕರ್ತವ್ಯಗಳನ್ನು ಕಾಯ್ದುಕೊಳ್ಳಬೇಕಾಗಿದೆ- ಎ.ವೈ. ನವಲಗುಂದ

| Published : Feb 25 2024, 01:51 AM IST / Updated: Feb 25 2024, 01:52 AM IST

ಸಾರಾಂಶ

ಸಂವಿಧಾನಕ್ಕೆ ಆಗಾಗ ಅನೇಕರಿಂದ ಅನೇಕ ರೀತಿಯಲ್ಲಿ ಗದಾ ಪ್ರಹಾರ ನಡೆಸುತ್ತಿರುವದು ವಿಷಾದಕರ ಸಂಗತಿಯಾಗಿದೆ. ಹೀಗಾಗಿ ಭಾರತದ ಸಂವಿಧಾನ ರಕ್ಷಣೆ ಮಾಡುವುದರ ಮೂಲಕ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ವಿಶ್ರಾಂತ ಪ್ರೊ. ಎ.ವೈ. ನವಲಗುಂದ ಹೇಳಿದರು.

ಮುಂಡರಗಿ: ಸಂವಿಧಾನಕ್ಕೆ ಆಗಾಗ ಅನೇಕರಿಂದ ಅನೇಕ ರೀತಿಯಲ್ಲಿ ಗದಾ ಪ್ರಹಾರ ನಡೆಸುತ್ತಿರುವದು ವಿಷಾದಕರ ಸಂಗತಿಯಾಗಿದೆ. ಹೀಗಾಗಿ ಭಾರತದ ಸಂವಿಧಾನ ರಕ್ಷಣೆ ಮಾಡುವುದರ ಮೂಲಕ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ವಿಶ್ರಾಂತ ಪ್ರೊ. ಎ.ವೈ. ನವಲಗುಂದ ಹೇಳಿದರು.

ಅವರು ಶುಕ್ರವಾರ ಪಟ್ಟಣದಲ್ಲಿ ಇಡೀ ತಾಲೂಕಿನಾದ್ಯಂತ ಸಂಚರಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಸ್ವಾಗತಿಸಿ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು. ಇಡೀ ವಿಶ್ವದಲ್ಲಿಯೇ ಅತಿ ದೊಡ್ಡದಾದ ಸಂವಿಧಾನ ಭಾರತದಲ್ಲಿದ್ದು, ಇದರಲ್ಲಿರುವ ಸರ್ವಧರ್ಮ ಸಮಾನತೆ, ಭ್ರಾತೃತ್ವ, ಧರ್ಮಸಂಹಿಷ್ಣುತೆ, ಸಮಗ್ರತೆ, ಐಕ್ಯತೆ ಕಾಪಾಡಿಕೊಂಡರೆ ಮಾತ್ರ ಸಂವಿಧಾನದ ಆಶಯಗಳು ಈಡೇರುತ್ತವೆ. ಇದರಿಂದ ದೇಶದ ಘನತೆ ಹೆಚ್ಚಳವಾಗುತ್ತದೆ ಎಂದರು. ಡಾ.ಬಿ.ಆರ್. ಅಂಬೇಡ್ಕರ್ ಅಭಿಪ್ರಾಯದಂತೆ ಸಂವಿಧಾನ ಉಳಿಯಲು ಮತ್ತು ಯಶಸ್ವಿಗೊಳ್ಳಬೇಕಾದರೆ ನಿರ್ವಹಿಸಲಿರುವ ಜನರ ಗುಣದ ಮೇಲೆ ಅವಲಂಬನೆಯಾಗಿದೆ. ಇಷ್ಟೆಲ್ಲ ಸಂವಿಧಾನ ಜಾಗೃತಿ ಮೂಡಿಸಲು ಅಳವಡಿಸಿಕೊಂಡರೂ ಇನ್ನು ಅದರ ಆಶಯ ಈಡೇರಿಸಲು ಪ್ರಯತ್ನ ನಡೆದೇ ಇದೆ. ಡಾ. ಅಂಬೇಡ್ಕರ್ ಅವರು ಜ್ಞಾನದಾಹಿಗಳಾಗಿದ್ದರು, ಕಷ್ಟಗಳಲ್ಲಿಯೇ ಅತ್ಯುನ್ನತ ಸಂವಿಧಾನ ಗ್ರಂಥ ರಚಿಸಿದರು. ಇದರಲ್ಲಿ 395 ಕಲಂಗಳು, 9 ಸೆಡ್ಯೂಲ್ ಹಾಗೂ 11 ಭಾಗಗಳಿವೆ. ಅವರ ನಿರಂತರ ಅಧ್ಯಯನದ ಪರಿಣಾಮ ಭಾರತಕ್ಕೆ ಎಂತಹ ಸಂವಿಧಾನ ಬೇಕು ಎಂದು ಅರಿತು ಸಂವಿಧಾನ ಜಾರಿಗೊಂಡಿದೆ. ಅಪಾರ ಜ್ಞಾನ ಹೊಂದಿದ್ದ ಅಂಬೇಡ್ಕರ್ ಅವರಿಗೆ ವಿದೇಶದಲ್ಲಿಯೂ ಗೌರವ ಇತ್ತು, ಏ.14ರಂದು ಅಂಬೇಡ್ಕರ್ ಜನ್ಮದಿನವನ್ನು ಯುಎನ್‌ಎ ದೇಶದಲ್ಲಿ ಜ್ಞಾನ ದಿನವನ್ನಾಗಿ ಆಚರಿಸುತ್ತಿರುವದು ಭಾರತಕ್ಕೆ ಹೆಮ್ಮೆಯ ವಿಷಯ ಎಂದರು.

ಸಂವಿಧಾನ ಜಾಗೃತಿ ಜಾಥಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಧನಂಜಯ ಮಾಲಗಿತ್ತಿ ಸೇರಿದ ಸಾರ್ವಜನಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಬೋಧಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ಪುರಸಭೆ ಸದಸ್ಯರಾದ ನಾಗರಾಜ ಹೊಂಬಳಗಟ್ಟಿ, ಕವಿತಾ ಉಳ್ಳಾಗಡ್ಡಿ ಹಾಗೂ ಮುಖಂಡ ಸೋಮಣ್ಣ ಹೈತಾಪೂರ ಸೇರಿದಂತೆ ಅನೇಕರು ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ಭಾವಿ ನಾಯಕರಾಗುವರಿದ್ದು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ನಾಡಿನ ಬಗ್ಗೆ ಅಭಿಮಾನ ಹೊಂದಬೇಕು. ಶಿಕ್ಷಣ ಪಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರ ಜತೆಗೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು ಎಂದರು.

ಪುರಸಭೆ ಸದಸ್ಯರಾದ ಜ್ಯೋತಿ ಹಾನಗಲ್, ಪವನ ಮೇಟಿ, ರಾಜಾಭಾಕ್ಷಿ ಬೆಟಗೇರಿ, ಅಧಿಕಾರಿಗಳಾದ ಬಿಇಒ ಎಚ್.ಎಂ.ಪಡ್ನೇಶಿ, ವಸತಿ ನಿಲಯದ ಸಾಸ್ವಿಹಳ್ಳಿ, ಜಿ.ಎಸ್.ಅಣ್ಣಿಗೇರಿ, ಕಪ್ಪತ್ ಹಿಲ್ಸ್ ಅಧಿಕಾರಿ ವೀರಣ್ಣ ಮರಿಬಸಣ್ಣವರ ,ಸಂಘಟನೆಗಳ ಲಕ್ಷ್ಮಣ ತಗಡಿನಮನಿ, ವಿ.ಎಸ್. ಘಟ್ಟಿ, ಎಚ್.ಡಿ. ಪೂಜಾರ, ಅಡಿವೆಪ್ಪ ಛಲವಾದಿ, ದೇವು ಹಡಪದ, ರಾಜು ದಾವಣಗೆರೆ, ಅಶ್ವಿನಿ ಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶ್ರೀಕಾಂತ ಅರಹುಣಸಿ ನಿರೂಪಿಸಿದರು.