ವರ್ತುಲ ರಸ್ತೆ ಯೋಜನೆಗೆ ಕೇಂದ್ರದಿಂದ ಶೀಘ್ರ ಒಪ್ಪಿಗೆ: ಎಚ್‌.ಡಿ.ಕುಮಾರಸ್ವಾಮಿ

| Published : Mar 21 2025, 12:35 AM IST

ಸಾರಾಂಶ

ಬೆಂಗಳೂರು ನಗರದ ವಾಹನ ದಟ್ಟಣೆ ಗಣನೀಯವಾಗಿ ತಗ್ಗಿಸುವ ಉಪ ನಗರ ವರ್ತುಲ ರಸ್ತೆ ಯೋಜನೆ (ಎಸ್‌ಟಿಆರ್‌ಆರ್) ಕೇಂದ್ರ ಸಂಪುಟ ಸಭೆ ಮುಂದೆ ಬರಲಿದೆ. ಯೋಜನೆಗೆ ''ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ'' ಒಪ್ಪಿಗೆ ನೀಡಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಕನ್ನಡಪ್ರಭವಾರ್ತೆ ನವದೆಹಲಿ

ಬೆಂಗಳೂರು ನಗರದ ವಾಹನ ದಟ್ಟಣೆ ಗಣನೀಯವಾಗಿ ತಗ್ಗಿಸುವ ಉಪ ನಗರ ವರ್ತುಲ ರಸ್ತೆ ಯೋಜನೆ (ಎಸ್‌ಟಿಆರ್‌ಆರ್) ಕೇಂದ್ರ ಸಂಪುಟ ಸಭೆ ಮುಂದೆ ಬರಲಿದೆ. ಯೋಜನೆಗೆ ''''ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ'''' ಒಪ್ಪಿಗೆ ನೀಡಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಗುರುವಾರ ನಿತಿನ್ ಗಡ್ಕರಿ ಅವರನ್ನು ಸಂಸತ್ ಭವನದ ಕಚೇರಿಯಲ್ಲಿ ಭೇಟಿಯಾದಾಗ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಭರವಸೆ ನೀಡಿದ್ದು, ಶೀಘ್ರವೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಯೋಜನೆಗೆ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಗಡ್ಕರಿ ಅವರ ಸಕಾರಾತ್ಮಕ ಸ್ಪಂದನೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಉಪನಗರ ವರ್ತುಲ ರಸ್ತೆ ಯೋಜನೆ (Satellite Town Ring Road-STRR) 2013ರಲ್ಲಿಯೇ ಚಾಲನೆ ಪಡೆದಿದ್ದು, ನೆನೆಗುದಿಗೆ ಬಿದ್ದಿತ್ತು. ಬೆಂಗಳೂರು ಸುತ್ತಮುತ್ತ ಇರುವ 8 ಕೈಗಾರಿಕಾ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆ ಕಾರ್ಯಗತಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಸಾಕಷ್ಟು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಅವರು ಬರೆದಿದ್ದ ಪತ್ರವನ್ನು ಗಡ್ಕರಿ ಅವರಿಗೆ ನೀಡಲಾಯಿತು ಎಂದು ತಿಳಿಸಿದರು.

ಯಾವ್ಯಾವ ಪ್ರದೇಶಕ್ಕೆ ಸಂಪರ್ಕ:

4- 6 ಪಥಗಳ ಈ ಯೋಜನೆಯು ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಉಪನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಹಾಗೂ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ಹೈವೇಯನ್ನು ಕೂಡುತ್ತದೆ. ಜತೆಗೆ ತಮಿಳುನಾಡಿನ ಹೊಸೂರನ್ನೂ ಸಂಪರ್ಕಿಸುತ್ತದೆ. ಕೈಗಾರಿಕೆಗಳಿಗೆ ಸರಕು ಸಾಗಿಸುವ ಯಾವುದೇ ಬೃಹತ್ ವಾಹನ ಬೆಂಗಳೂರು ನಗರದೊಳಕ್ಕೆ ಪ್ರವೇಶ ಮಾಡದಂತೆ ತಡೆಯುವುದೇ ಈ ಯೋಜನೆ ಉದ್ದೇಶವಾಗಿದೆ.